ಚಿತ್ರದುರ್ಗ, ಮೇ.25 : ಬುದ್ಧಗುರು ಜಗತ್ತಿಗೆ ಶಾಂತಿ ಸಂದೇಶ ಸಾರಿದ ಮಹಾನ್ ದಾರ್ಶನಿಕ ಎಂದು ನಿವೃತ್ತ ಪ್ರಾಧ್ಯಾಪಕ ಹಾಗೂ ಚಿಂತಕ ಡಾ.ಸಣ್ಣರಾಮ ಅಭಿಪ್ರಾಯಪಟ್ಟರು.
ಭಾಯಗಡ್‍ದಲ್ಲಿ ಶ್ರೀ ಸಂತ ಸೇವಾಲಾಲ್ ಜನ್ಮಸ್ಥಾನ ಮಹಾಮಠ ಸಮಿತಿ ವತಿಯಿಂದ ಗುರುವಾರ ಹಮ್ಮಿಕೊಳ್ಳಲಾಗಿದ್ದ ಸಂತ ಸೇವಾಲಾಲ್ ಮತ್ತು ಮಾತೆ ಮರಿಯಮ್ಮ ದೇವಿಯ ಇಪ್ಪತ್ತೇಳನೇ ವರ್ಷದ ವಾರ್ಷಿಕೋತ್ಸವದ ಅಂಗವಾಗಿ ಏರ್ಪಡಿಸಲಾಗಿದ್ದ, ಬೌದ್ಧಪೂರ್ಣಿಮೆ ಕಾರ್ಯಕ್ರಮದಲ್ಲಿ ಭಾಗವಹಿಸಿ, ಮಾತನಾಡಿದರು. ಬುದ್ಧ ಶಾಂತಿಯ ಜೊತೆಗೆ ವೈಚಾರಿಕತೆ, ವೈಜ್ಞಾನಿಕತೆ, ಹೇಳಿದಂತಹ ಮೊಟ್ಟ ಮೊದಲ ಮಾನವ ವಾದಿಯಾಗಿದ್ದರು.
ಜಗತ್ತಿನಲ್ಲಿದ್ದ ಮೌಢ್ಯ, ಕಂದಾಚಾರಗಳ ವಿರುದ್ಧ ಜಾಗೃತಿ ಮೂಡಿಸುವುದರ ಮೂಲಕ ಸಮಾಜದಲ್ಲಿ ಶಾಂತಿ ಮತ್ತು ಸೌಹಾರ್ದತೆಗಾಗಿ ಪಂಚ ಸೂತ್ರಗಳನ್ನು ಬೋಧಿಸಿದಂತಹ ಮಹಾಗುರು ಗೌತಮ ಬುದ್ಧರಾಗಿದ್ದರು.
ವ್ಯಭಿಚಾರ, ಮಧ್ಯವ್ಯಸನಿ, ಕಳ್ಳತನ, ಸುಳ್ಳು ಹೇಳುವುದು, ಮೋಸ ಮಾಡುವಂತಹ ಸೂತ್ರಗಳನ್ನು ಜನರಿಗೆ ಬೋಧಿಸುವ ಮೂಲಕ ಸಮ ಸಮಾಜದ ಸಂದೇಶವನ್ನು ಸಾರಿದವರು. ಬುದ್ಧ ಹೇಳಿದಂತಹ ವೈಚಾರಿಕ ಚಿಂತನೆಗಳನ್ನು ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಭಾರತ ಸಂವಿಧಾನದಲ್ಲಿ ಅಳವಡಿಸುವ ಮೂಲಕ ಸಂವಿಧಾನದ ಘನತೆಯನ್ನು ಹೆಚ್ಚಿಸಿದ್ದಾರೆ ಎಂದು ಡಾ.ಸಣ್ಣರಾಮ ಹೇಳಿದರು.
ಸಂತ ಸೇವಾಲಾಲ್ ಜನ್ಮಸ್ಥಾನ ಮಹಾಮಠ ಸಮಿತಿಯ ಪ್ರಧಾನ ಕಾರ್ಯದರ್ಶಿ ನರೇನಹಳ್ಳಿ ಅರುಣ್‍ಕುಮಾರ್ ಅವರು ಮಾತನಾಡಿ, ಬುದ್ಧ ಜಗತ್ತಿಗೆ ಶಾಂತಿಯ ಜೊತೆಗೆ ಪ್ರೀತಿ ಕಾರುಣ್ಯವನ್ನು ಬೋಧಿಸಿದವರು. ಹಾಗೆಯೇ ಧ್ಯಾನ, ಜ್ಞಾನದ ಮೂಲಕ ಮಹಾಬೆಳಕು ನೀಡಿದವರು. ಬುದ್ಧ ನೊಂದ ಸಮಾಜದಲ್ಲಿ ಪ್ರೀತಿ ಬಿತ್ತಿ ಬೆಳೆದವರು. ಬುದ್ಧ ಜಗತ್ತಿಗೆ ಸರ್ವ ಶ್ರೇಷ್ಠ ಶಾಂತಿಧೂತನಾಗಿ ಕಾಣಬರುತ್ತಾರೆ ಎಂದರು.
ಸಂತಸೇವಾಲಾಲ್ ಜನ್ಮಸ್ಥಾನ ಮಹಾಮಠ ನಿರ್ವಹಣ ಸಮಿತಿಯ ಸಂಸ್ಥಾಪಕ ಸದಸ್ಯರಾದ ಡಾ.ಎಲ್.ಈಶ್ವರ್‍ನಾಯ್ಕ್ ಅವರು ಮಾತನಾಡಿ, ಬೌದ್ಧಪೂರ್ಣಿಮೆ ದಿನದಂದು ಸಂತಸೇವಾಲಾಲ್ ಮತ್ತು ಮರಿಯಮ್ಮ ದೇವಿಯ ಪ್ರತಿಮೆಗಳನ್ನು ಪ್ರತಿಷ್ಠಾಪಿಸುವ ಮೂಲಕ ಬಂಜಾರ ಸಮಾಜಕ್ಕೆ ಶಾಂತಿಯ ಸಂದೇಶವನ್ನು ರವಾನೆಮಾಡಲಾಗಿದೆ ಎಂದರು.
ಸಂತಸೇವಾಲಾಲ್ ಮಹಾಮಠ ಸಮಿತಿಯ ಮಾಜಿ ಪ್ರಧಾನ ಕಾರ್ಯದರ್ಶಿಗಳು ಹಾಗೂ ಹಿರಿಯ ನಿರ್ದೇಶಕರಾದ ರಾಘವೇಂದ್ರ ನಾಯ್ಕ್ ಅವರು ಮಾತನಾಡಿ, ಬುದ್ಧನ ವಿಚಾರಗಳು ಎಲ್ಲಾ ಕಾಲಕ್ಕೂ ಸತ್ಯ ಹಾಗಾಗಿ ಬುದ್ಧ, ಬಸವ, ಅಂಬೇಡ್ಕರ್ ಮತ್ತು ಸೇವಾ ಲಾಲ್ ವಿಚಾರಗಳಲ್ಲಿ ತುಂಬಾ ಸಾಮೀಪ್ಯತೆ ಇದೆ ಎಂದು ಹೇಳಿದರು. ಬಂಜಾರ ಸಮಾಜದಲ್ಲಿ ವೈಚಾರಿಕತೆಯ ಕಡೆಗೆ ಪ್ರತಿಯೊಬ್ಬರು ಚಿಂತಿಸಬೇಕಾದ ಅಗತ್ಯವಿದೆ ಎಂದು ಹೇಳಿದರು.
ಬುದ್ಧ ಪೂರ್ಣಿಮೆ ಸಮಾರಂಭದಲ್ಲಿ ಭಾಗವಹಿಸಿದ್ದ ಚಿತ್ರದುರ್ಗ ಬಂಜಾರ ಗುರುಪೀಠದ ಸರ್ದಾರ್ ಸೇವಾಲಾಲ್ ಸ್ವಾಮೀಜಿ ಮಾತನಾಡಿ, ಬುದ್ಧ ಪ್ರೀತಿ, ತ್ಯಾಗ, ಕರುಣೆಯನ್ನು ಸಮಾಜಕ್ಕೆ ಎತ್ತಿಹಿಡಿದು ತೋರಿಸಿದರು. ಹಾಗೆಯೇ ಸಂತಸೇವಾಲಾಲ್‍ರು ಕೂಡ ಬಂಜಾರ ಸಮುದಾಯಕ್ಕೆ ಪ್ರೀತಿಯ ಮಹತ್ವವನ್ನು ತೋರಿಸಿಕೊಟ್ಟವರು ಎಂದು ನುಡಿದರು.
ಸಮಾರಂಭದಲ್ಲಿ ಸಂತ ಸೇವಾಲಾಲ್ ಜನ್ಮಸ್ಥಾನ ಮಹಾಮಠ ಸಮಿತಿಯ ಧರ್ಮದರ್ಶಿ ಸಮಿತಿಯ ಬೋಜ್ಯಾನಾಯ್ಕ, ಶಿವಪ್ರಕಾಶ ಸ್ವಾಮೀಜಿ, ಸೇವಾಲಾಲ್ ದೇವಸ್ಥಾನದ ಅರ್ಚಕರಾದ ಸೇವ್ಯಾನಾಯ್ಕ, ಸಮಿತಿಯ ಉಪಾಧ್ಯಕ್ಷರಾದ ಕುಮಾರ್ ನಾಯ್ಕ್, ಕೃಷ್ಣನಾಯ್ಕ್, ಹೀರಾಲಾಲ್, ಪಾಂಡುರಂಗ ನಾಯ್ಕ್, ಚಂದ್ರ ಶೇಖರ್ ನಾಯ್ಕ, ಶ್ರೀಮತಿ ಸೌಮ್ಯ ಬಿ. ನಾಯ್ಕ್, ಸವಿತಾಬಾಯಿ, ಜಾನಾನಾಯ್ಕ್, ಗೋಶಾಲಾ ಸಮಿತಿಯ ಅಧ್ಯಕ್ಷರಾದ ನಾನ್ಯ ನಾಯ್ಕ್, ಉಪಸ್ಥಿತರಿದ್ದರು.
ಸಮಾರಂಭದ ಅಧ್ಯಕ್ಷತೆಯನ್ನು ನಿರ್ವಹಣಾ ಸಮಿತಿಯ ಅಧ್ಯಕ್ಷರಾದ ಹನುಮಂತಾನಾಯ್ಕ್ ಎನ್. ಇವರು ವಹಿಸಿದ್ದರು. ಕಾರ್ಯಕ್ರಮದಲ್ಲಿ ಕುಮಾರ್‍ನಾಯ್ಕ್ ವಂದಿಸಿದರು. ಕುಮಾರಿ ಅಂಜಲಿಬಾಯಿ ಪ್ರಾರ್ಥನೆ ಮಾಡಿದರು.