ಬೆಂಗಳೂರು, ಮೇ 26: ನಮ್ಮ ರಾಜ್ಯದ ಆರ್ಥಿಕ ವ್ಯವಸ್ಥೆಗೆ ಅಬಕಾರಿ ಸುಂಕ ದೊಡ್ಡ ಮಟ್ಟದ ಕೊಡುಗೆ ಇದೆ. ಈ ವರ್ಷ ರಾಜ್ಯದ ಬೊಕ್ಕಸಕ್ಕೆ ಮದ್ಯಪ್ರಿಯರು ಭರ್ಜರಿ ಆದಾಯವನ್ನು ನೀಡಿದ್ದಾರೆ. ಪ್ರತಿ ವರ್ಷಕ್ಕಿಂತ ಈ ವರ್ಷ ರಾಜ್ಯದ ಮದ್ಯ  ಮಾರಾಟ ದಾಖಲೆ ಬರೆದಿದೆ. ಸರ್ಕಾರ  ಅಂದುಕೊಂಡಿದ್ದ ಟಾರ್ಗೆಟ್ಗಿಂತ ಹೆಚ್ಚಿನ ಮದ್ಯ ಮಾರಾಟವಾಗಿದ್ದು ಅಬಕಾರಿ ಇಲಾಖೆಗೆ  ಕೋಟಿ ಕೋಟಿ ಆದಾಯ ಬಂದಿದೆ.
ರಾಜ್ಯದ ಪ್ರಮುಖ ಆದಾಯದ ಮೂಲ ಅಂದರೆ ಅದು ಅಬಕಾರಿ ಇಲಾಖೆ. ಅಬಕಾರಿ ಇಲಾಖೆಯಿಂದ ಈ ಬಾರಿ ಭರ್ಜರಿ ಲಾಭವನ್ನ ಸರ್ಕಾರ ಮಾಡಿದೆ. ಕಳೆದ ವರ್ಷಕ್ಕೆ ಹೊಲಿಸಿದರೆ ಈ ವರ್ಷ ಶೇ15 ರಷ್ಟು ಮದ್ಯ ವರಮಾನ ಹೆಚ್ಚಾಗಿದೆ. ಈ ವರ್ಷ ಚುನಾವಣಾ ವರ್ಷವಾಗಿರುವುದರಿಂದ ರಾಜ್ಯದಲ್ಲಿ ಮದ್ಯ ಮಾರಾಟ ದಾಖಲೆ ಬರದಿದೆ.
ಸರ್ಕಾರದ ಬೊಕ್ಕಸಕ್ಕೆ ಭರ್ಜರಿ ಕಿಕ್ ಕೊಟ್ಟ ಮದ್ಯಪ್ರಿಯರು. ರಾಜ್ಯದಲ್ಲಿ ಮೂರು ಬಾರಿ ದರ ಏರಿಕೆ ನಡುವೆಯೂ ಮದ್ಯ ಮಾರಾಟ ಬಾರಿ ಹೆಚ್ಚಳವಾಗಿದ್ದು 2023-24 ನೇ ಸಾಲಿನಲ್ಲಿ ಸಾವಿರಾರು ಕೋಟಿ ರೂಪಾಯಿ ಸರ್ಕಾರದ ಖಜಾನೆಗೆ ಬಂದಿದೆ. ಅಬಕಾರಿ ಇಲಾಖೆಗೆ ಸರ್ಕಾರ 34.500 ಕೋಟಿ ಟಾರ್ಗೆಟ್ ನೀಡಿತ್ತು. ಈ ಆರ್ಥಿಕ ವರ್ಷದಲ್ಲಿ ಬರೋಬ್ಬರಿ 34.628 ಕೋಟಿ ಆದಾಯ ಸಂಗ್ರಹ ಮಾಡುವ ಮೂಲಕ ಅಬಕಾರಿ ಇಲಾಖೆ ಟಾರ್ಗೆಟ್ಗಿಂತ 128 ಕೋಟಿ ಅಧಿಕ ಸಂಗ್ರಹ ಮಾಡಿದೆ. 
ಕಳೆದ ವರ್ಷ ಅಬಕಾರಿ ಇಲಾಖೆಗೆ 32,000 ಕೋಟಿ ಟಾರ್ಗೆಟ್ ನೀಡಲಾಗಿತ್ತು, ಆ ಸಮಯದಲ್ಲಿ 29,920 ಕೋಟಿ ರೂಪಾಯಿಯನ್ನ ಅಬಕಾರಿ ಇಲಾಖೆ ಸಂಗ್ರಹ ಮಾಡಿತ್ತು. ಈ ವರ್ಷದಲ್ಲಿ ದರ ಏರಿಕೆಯ ನಡುವೆಯೂ ಮದ್ಯಮಾರಾಟ ಭರ್ಜರಿಯಾಗಿ ನಡೆದಿದ್ದು ಅತ್ಯಧಿಕ ಆದಾಯ ಸಂಗ್ರಹವಾಗಿದೆ. ಈ ವರ್ಷ ಚುನಾವಣಾ ವರ್ಷವಾಗಿರುವುದರಿಂದ ಈ ಸಲ‌ ಮದ್ಯ ಮಾರಾಟ ಕೂಡ ಹೆಚ್ಚಾಗಿದ್ದು ರಾಜಕೀಯ ಸಮಾವೇಶಗಳು, ಕಾರ್ಯಕರ್ತರ ಸಭೆಗಳ ನಡೆದಿರುವುದು ಸಹ ಟಾರ್ಗೆಟ್ ಮುಟ್ಟಲು ಆಗಲು ಕಾರಣವಾಗಿದೆ. 
ಜೂನ್ 1 ರಿಂದ 6 ರವರೆಗೆ ಬಾರ್, ಎಂಆರ್ಪಿ ಔಟ್ಲೇಟ್ಗಳು ಬಂದ್ ಆಗುತ್ತಿದ್ದು, ಮದ್ಯ ಪ್ರಿಯಯರು ಈ ತಿಂಗಳು ಅಂತ್ಯದಲ್ಲೇ ಸ್ಟಾಕ್ ಮಾಡಿಕೊಳ್ಳಬೇಕಾಗಿದೆ. ಇನ್ನು ರಾಜ್ಯದಲ್ಲಿ ನಡೆಯುತ್ತಿರುವ ಪದವೀಧರ ಕ್ಷೇತ್ರದ ಚುನಾವಣೆ ಮತ್ತು ಲೋಕಸಭಾ ಚುನಾವಣೆಯ ಮತ ಎಣಿಕೆ ಇರುವುದರಿಂದ ಬೆಂಗಳೂರು ಜಿಲ್ಲಾಡಳಿತ ಮದ್ಯ ಮಾರಾಟವನ್ನ ಬಂದ್ ಮಾಡುವಂತೆ ಆದೇಶ ನೀಡಿದೆ. ಜೂನ್ 3 ರಂದು ಪದವೀಧರ ಕ್ಷೇತ್ರದ ಮತದಾನ ಇರುವುದರಿಂದ ಜೂ‌ನ್ 1 ರ ಸಂಜೆ 4 ರಿಂದಲೇ ಬಾರ್ ಕ್ಲೋಸ್ ಆಗಲಿದ್ದು, ಜೂನ್ 3ರವರೆಗೆ ಬಂದ್ ಮಾಡಬೇಕಾಗುತ್ತೆ.
ಜೂನ್ 4 ರಂದು ದೇಶದ್ಯಾಂತ ಲೋಕಸಭಾ ಮತದಾನದ ಮತ ಎಣಿಕೆ ನಡೆಯಲಿದ್ದು ಅಂದು ಸಹ ಮದ್ಯ ಮಾರಾಟ ಸಂಪೂರ್ಣ ಬಂದ್ ಆಗಲಿದೆ. ಜೂನ್ 6 ರಂದು ಎಂಎಲ್ಸಿ ಮತ ಎಣಿಕೆ ಇರುವುದರಿಂದ ಅಂದು ಸಹ ಬಾರ್ ಬಂದ್ ಮಾಡುವಂತೆ ಬೆಂಗಳೂರು ಜಿಲ್ಲಾಧಿಕಾರಿಗಳು ಆದೇಶ ಮಾಡಿದ್ದು, ಜೂನ್ ತಿಂಗಳ ಮೊದಲ ವಾರ ಮದ್ಯ ಪ್ರಿಯರಿಗೆ ಎಣ್ಣೆ ಸಿಗುವುದಿಲ್ಲ.
ಒಟ್ಟಿನಲ್ಲಿ ರಾಜ್ಯ ಸರ್ಕಾರದ ಎಲ್ಲ ಗ್ಯಾರೆಂಟಿ ಯೋಜನೆಗಳಿಂದ ಖಜಾನೆ ಬರಿದಾಗಿದೆ ಅನ್ನೋ ಮಾತುಗಳ ನಡುವೆ ಅಬಕಾರಿ ಇಲಾಖೆಯ ಈ ಆರ್ಥಿಕ ಸಾಧನೆ ಸರ್ಕಾರಕ್ಕೆ ಕಿಕ್ ನೀಡಿರುವುದಂತು ಸುಳ್ಳಲ್ಲ.

Related Post

Leave a Reply

Your email address will not be published. Required fields are marked *