ಚೆನ್ನೈನ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ನಡೆದ ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ಸನ್ ರೈಸರ್ಸ್ ಹೈದರಾಬಾದ್ ನಡುವಿನ 17ನೇ ಆವೃತ್ತಿಯ ಐಪಿಎಲ್ನ ಫೈನಲ್ 2024 ಪಂದ್ಯದಲ್ಲಿ ಏಕಪಕ್ಷೀಯವಾಗಿ ಹೈದರಾಬಾದ್ ತಂಡವನ್ನು ಮಣಿಸಿದ ಶ್ರೇಯಸ್ ಅಯ್ಯರ್ ನೇತೃತ್ವದ ಕೆಕೆಆರ್ ತಂಡ ಮೂರನೇ ಬಾರಿಗೆ ಐಪಿಎಲ್ ಚಾಂಪಿಯನ್ ಪಟ್ಟಕ್ಕೇರಿದೆ. ಈ ಮೂಲಕ ಅಧಿಕ ಐಪಿಎಲ್ ಪ್ರಶಸ್ತಿಗಳನ್ನು ಗೆದ್ದ ತಂಡಗಳ ಪೈಕಿ ಕೆಕೆಆರ್ ಎರಡನೇ ಸ್ಥಾನವನ್ನು ಪಡೆದುಕೊಂಡಿದೆ. ಉಳಿದಂತೆ ತಲಾ 5 ಬಾರಿ ಐಪಿಎಲ್ ಪ್ರಶಸ್ತಿ ಗೆದ್ದಿರುವ ಮುಂಬೈ ಇಂಡಿಯನ್ಸ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ತಂಡಗಳು ಜಂಟಿಯಾಗಿ ಮೊದಲ ಸ್ಥಾನ ಪಡೆದುಕೊಂಡಿವೆ. ಫೈನಲ್ ಪಂದ್ಯದಲ್ಲಿ ಹೈದರಾಬಾದ್ ತಂಡ ಟಾಸ್ ಗೆದ್ದಿದ್ದನ್ನು ಬಿಟ್ಟರೆ, ಉಳಿದಂತೆ ಇಡೀ ಪಂದ್ಯದಲ್ಲಿ ಎಲ್ಲಿಯೂ ಗೆಲುವಿಗಾಗಿ ಹೋರಾಟ ನೀಡಲಿಲ್ಲ. ಹೀಗಾಗಿ ಕೆಕೆಆರ್ ತಂಡ ಪಂದ್ಯದಲ್ಲಿ ಏಕಪಕ್ಷೀಯ ಗೆಲುವು ದಾಖಲಿಸಿತು.
ಈ ಪಂದ್ಯದಲ್ಲಿ ಟಾಸ್ ಗೆದ್ದ ಸನ್‌ರೈಸರ್ಸ್ ಹೈದರಾಬಾದ್ ತಂಡ ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿತು. ಆದರೆ ಪಂದ್ಯ ಆರಂಭವಾದ ಕೆಲವೇ ನಿಮಿಷಗಳಲ್ಲಿ ಹೈದರಾಬಾದ್ ನಾಯಕನ ನಿರ್ಧಾರ ತಪ್ಪು ಎಂಬುದನ್ನು ಕೆಕೆಆರ್ ವೇಗಿಗಳು ಸಾಭೀತು ಪಡಿಸಿದರು. ಮೊದಲ ಓವರ್ನಲ್ಲೇ ವೇಗಿ ಮಿಚೆಲ್ ಸ್ಟಾರ್ಕ್, ಅಭಿಷೇಕ್ ಶರ್ಮಾರ ವಿಕೆಟ್ ಉರುಳಿಸಿದರು. ಮತ್ತೊಬ್ಬ ಸ್ಫೋಟಕ ಬ್ಯಾಟರ್ ಟ್ರಾವಿಸ್ ಹೆಡ್ಗೆ ಈ ಪಂದ್ಯದಲ್ಲೂ ಖಾತೆ ತೆರೆಯಲು ಸಾಧ್ಯವಾಗಲಿಲ್ಲ. ಹೀಗಾಗಿ ತಂಡ ಪಂದ್ಯದ ಮೊದಲ 6 ಓವರ್‌ಗಳ ಅಂತ್ಯಕ್ಕೆ 3 ಪ್ರಮುಖ ವಿಕೆಟ್‌ಗಳನ್ನು ಕಳೆದುಕೊಂಡಿತ್ತು.
113 ರನ್ಗಳಿಗೆ ಹೈದರಾಬಾದ್ ಆಲೌಟ್ : ಇದಾದ ಬಳಿಕ ಸ್ಕೋರ್ 62 ರನ್ ಆಗುವಷ್ಟರಲ್ಲಿ ಅರ್ಧದಷ್ಟು ತಂಡ ಪೆವಿಲಿಯನ್ ಸೇರಿಕೊಂಡಿತ್ತು. ಇಲ್ಲಿಂದ ಹೈದರಾಬಾದ್ ತಂಡಕ್ಕೆ ಪಂದ್ಯದಲ್ಲಿ ದೊಡ್ಡ ಮೊತ್ತ ಗಳಿಸುವುದು ಅಸಾಧ್ಯವೆನಿಸಿತು. ಇಡೀ ಪಂದ್ಯದಲ್ಲಿ ಹೈದರಾಬಾದ್ ಬ್ಯಾಟರ್ಗಳ ಮೇಲೆ ಸವಾರಿ ಮಾಡಿದ ಕೆಕೆಆರ್ ಬೌಲರ್‌ಗಳು ಹೈದರಾಬಾದ್ ಇನ್ನಿಂಗ್ಸ್ ಅನ್ನು ಕೇವಲ 113 ರನ್‌ಗಳಿಗೆ ಸೀಮಿತಗೊಳಿಸಿದರು. ಕೆಕೆಆರ್ ಪರ ಬೌಲಿಂಗ್ನಲ್ಲಿ ಆಂಡ್ರೆ ರಸೆಲ್ ಗರಿಷ್ಠ 3 ವಿಕೆಟ್ ಪಡೆದರೆ, ಮಿಚೆಲ್ ಸ್ಟಾರ್ಕ್ ಮತ್ತು ಹರ್ಷಿತ್ ರಾಣಾ ತಲಾ 2 ವಿಕೆಟ್ ಪಡೆದರು. ಉಳಿದಂತೆ ವೈಭವ್ ಅರೋರಾ, ಸುನಿಲ್ ನರೈನ್ ಮತ್ತು ವರುಣ್ ಚಕ್ರವರ್ತಿ ತಲಾ 1 ವಿಕೆಟ್ ಪಡೆಯುವಲ್ಲಿ ಯಶಸ್ವಿಯಾದರು.
ಹೈದರಾಬಾದ್ ತಂಡವನ್ನು ಕೇವಲ 113 ರನ್ಗಳಿಗೆ ಸೀಮಿತಗೊಳಿಸುವಲ್ಲಿ ಕೆಕೆಆರ್ ತಂಡದ ಬೌಲರ್‌ಗಳು ಯಶಸ್ವಿಯಾದರೆ, ಆ ನಂತರ ಗುರಿ ಬೆನ್ನಟ್ಟಿದ ವೇಳೆ ತಂಡದ ಬ್ಯಾಟರ್ಗಳಿಂದಲೂ ಅದ್ಭುತ ಪ್ರದರ್ಶನ ಕಂಡುಬಂತು. ಆದರೆ ಇಡೀ ಲೀಗ್ನಲ್ಲಿ ಸ್ಫೋಟಕ ಬ್ಯಾಟಿಂಗ್ ಮೂಲಕ ಅಬ್ಬರಿಸಿದ್ದ ಸುನಿಲ್ ನರೈನ್ ಕೇವಲ 6 ರನ್‌ಗಳಿಗೆ ಪ್ಯಾಟ್ ಕಮಿನ್ಸ್‌ಗೆ ಬಲಿಯಾದರು. ಇದಾದ ಬಳಿಕ ಬ್ಯಾಟಿಂಗ್ಗೆ ಬಂದ ವೆಂಕಟೇಶ್ ಅಯ್ಯರ್ ರಹಮಾನುಲ್ಲಾ ಗುರ್ಬಾಜ್ ಜತೆಗೂಡಿ ಆಕ್ರಮಣಕಾರಿ ಆಟ ಪ್ರದರ್ಶಿಸಿ ತಂಡದ ಸ್ಕೋರ್ ಅನ್ನು ಮೊದಲ 6 ಓವರ್ಗಳಲ್ಲಿ 1 ವಿಕೆಟ್ ನಷ್ಟಕ್ಕೆ 72 ರನ್ಗಳಿಗೆ ಕೊಂಡೊಯ್ದರು.
ಗೆಲುವಿನ ಅರ್ಧಶತಕ ಸಿಡಿಸಿದ ವೆಂಕಟೇಶ್ : ಇವರಿಬ್ಬರು ಎರಡನೇ ವಿಕೆಟ್‌ಗೆ 45 ಎಸೆತಗಳಲ್ಲಿ 91 ರನ್‌ಗಳ ಜೊತೆಯಾಟವನ್ನು ಮಾಡುವ ಮೂಲಕ ಪಂದ್ಯವನ್ನು ಸಂಪೂರ್ಣ ಏಕಪಕ್ಷೀಯವಾಗಿಸಿದರು. ಗುರ್ಬಾಜ್ 39 ರನ್‌ಗಳಿಸಿ ವಿಕೆಟ್ ಒಪ್ಪಿಸಿದರೆ, ವೆಂಕಟೇಶ್ ಅಯ್ಯರ್ 52 ರನ್‌ಗಳ ಅಜೇಯ ಇನ್ನಿಂಗ್ಸ್ ಆಡುವ ಮೂಲಕ ತಂಡವನ್ನು ಗೆಲುವಿನ ದಡ ಮುಟ್ಟಿಸಿದರು. ಹೈದರಾಬಾದ್ ಪರ ಈ ಪಂದ್ಯದಲ್ಲಿ ಪ್ಯಾಟ್ ಕಮ್ಮಿನ್ಸ್ ಮತ್ತು ಶಹಬಾಜ್ ಅಹ್ಮದ್ ತಲಾ 1 ವಿಕೆಟ್ ಪಡೆಯುವಲ್ಲಿ ಯಶಸ್ವಿಯಾದರು.