ತುಮಕೂರು, ಮೇ.27 : ಜಿಲ್ಲಾದ್ಯಂತ ಒಂದು ವಾರದಿಂದ ಉತ್ತಮ ಮಳೆ ಆಗುತ್ತಿದ್ದು, ಈ ಹಿನ್ನಲೆ ರಂಗಕರ್ಮಿ ಡಾ.ಗುಬ್ಬಿ ವೀರಣ್ಣ ಹಾಗೂ ಪತ್ನಿ ಸಮಾಧಿಗಳು ನೀರಿನಲ್ಲಿ ಮುಳುಗಡೆಯಾಗಿದೆ. ದಂಪತಿ ಸಮಾಧಿಗಳು ತಗ್ಗಿನ ಪ್ರದೇಶದಲ್ಲಿ ಇರುವುದರಿಂದ ಮಳೆಯ ನೀರು ಹರಿಯಲು ವ್ಯವಸ್ಥಿತ ಕ್ರಮ ಕೈಗೊಂಡಿಲ್ಲ. ತಾಲೂಕು ಆಡಳಿತ ಹಾಗೂ ಪಟ್ಟಣ ಪಂಚಾಯತಿ ಆಡಳಿತದ ತೀವ್ರ ನಿರ್ಲಕ್ಷ್ಯಕ್ಕೆ ಸಮಾಧಿಗಳು ಮುಳುಗಿವೆ.
ಇನ್ನು ಸಮಾಧಿಗಳು ಇರುವ ಜಮೀನಿಗೆ ಸಂಬಂಧಪಟ್ಟಂತೆ ನ್ಯಾಯಾಲಯದಲ್ಲಿ ದಾವೆ ಇದ್ದು, ಇದನ್ನೇ ನೆಪ ಮಾಡಿಕೊಂಡ ಸ್ಥಳೀಯ ಆಡಳಿತವು, ಯಾವುದೇ ಕ್ರಮ ಕೈಗೊಳ್ಳಲು ಮುಂದಾಗಿಲ್ಲ ಎನ್ನಲಾಗಿದೆ. ಗುಬ್ಬಿ ಪಟ್ಟಣದಲ್ಲಿ ವೀರಣ್ಣನವರ ಹೆಸರಿನಲ್ಲಿ ಟ್ರಸ್ಟ್ ರಚಿಸಿ ರಂಗಮಂದಿರ ನಿರ್ಮಿಸಿದ್ದರೂ, ಸಮಾಧಿಯನ್ನು ನಿರ್ಲಕ್ಷಿಸಿರುವುದು ವಿಪರ್ಯಾಸ ಎನ್ನುತ್ತಿದ್ದಾರೆ ರಂಗ ಕಲಾವಿದರು.
ಗುಬ್ಬಿ ವೀರಣ್ಣ, ಕನ್ನಡ ನಾಡು ಕಂಡ ಶ್ರೇಷ್ಠ ರಂಗಕರ್ಮಿಗಳೊಲೊಬ್ಬರು. ನಟ, ನಿರ್ಮಾಪಕ, ನಿರ್ದೇಶಕ ಮತ್ತು ನಾಟಕ ಮಂಡಳಿಯ ವ್ಯವಸ್ಥಾಪಕರಾಗಿದ್ದ ವೀರಣ್ಣನವರು, ಅನೇಕ ಕಲಾವಿದರಿಗೆ ಉದ್ಯೋಗವಕಾಶ ಕಲ್ಪಿಸಿ, ಹಲವಾರು ಹೊಸ ರಂಗ ಪ್ರಯೋಗಳನ್ನು ಮಾಡಿ ಹಾಗೂ ಅನೇಕ ರಂಗಮಂದಿರಗಳನ್ನು ಕಟ್ಟಿಸಿ, ಕನ್ನಡ ಮತ್ತು ಕನ್ನಡ ರಂಗಭೂಮಿಯನ್ನು ಸಲುಹಿದ ಕರ್ಮಜೀವಿ. ಇದೀಗ ಇಂತಹ ವ್ಯಕ್ತಿಯ ಸಮಾಧಿ ರಕ್ಷಣೆಗೆ ಮುಂದಾಗದೆ ನಿರ್ಲಕ್ಷ್ಯ ತೋರಿರುವುದು ನಿಜಕ್ಕೂ ದುರಂತವೇ ಸರಿ.