ಮೈಸೂರು: ಈ ಬಾರಿ ಶಾಲಾ ಪಠ್ಯ ಪರಿಷ್ಕರಣೆ ಇಲ್ಲ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಸ್ಪಷ್ಟಪಡಿಸಿದ್ದಾರೆ.
ಈ ಕುರಿತು ಮೈಸೂರಿನಲ್ಲಿ ಮಾತನಾಡಿದ ಅವರು, ಕಳೆದ ಬಾರಿಯೇ ಪ್ರಮುಖ ಬದಲಾವಣೆಗಳನ್ನು ಮಾಡಲಾಗಿದೆ. ಈ ಬಾರಿ ತಪ್ಪಿದ್ದ ಪದಗಳನ್ನು ಸರಿ ಮಾಡಲಾಗಿದೆ ಅಷ್ಟೇ ಎಂದು ತಿಳಿಸಿದ್ದಾರೆ.
ರಾಜ್ಯದ ಎಲ್ಲಾ ಪ್ರಾಥಮಿಕ ಮತ್ತು ಪ್ರೌಢಶಾಲೆಗಳು ನಾಳೆಯಿಂದ ಪುನಾರಂಭಗೊಳ್ಳುತ್ತಿದ್ದು, ಮೊದಲ ದಿನ ಮಕ್ಕಳನ್ನು ಆತ್ಮೀಯವಾಗಿ ಬರ ಮಾಡಿಕೊಂಡು ಸಿಹಿಯೂಟ ನೀಡಬೇಕೆಂದು ಶಿಕ್ಷಣ ಇಲಾಖೆ ತಿಳಿಸಿದೆ. ಮಧ್ಯಾಹ್ನದ ಬಿಸಿಯೂಟದಲ್ಲಿ ಹೆಸರುಬೇಳೆ ಪಾಯಸ, ಕೇಸರಿಬಾತ್ ಇಲ್ಲವೇ ಯಾವುದಾದರೊಂದು ಸಿಹಿಯನ್ನು ನೀಡಲಾಗುತ್ತದೆ. ಅಲ್ಲದೇ, ಮೊದಲ ದಿನವೇ ಶಾಲಾ ಮಕ್ಕಳಿಗೆ ಪಠ್ಯಪುಸ್ತಕ, ಸಮವಸ್ತ್ರ ವಿತರಿಸಲು ಶಿಕ್ಷಣ ಇಲಾಖೆ ಎಲ್ಲಾ ಸಿದ್ದತೆ ನಡೆಸಿದೆ.