ಬೆಂಗಳೂರು : ರಾಜ್ಯದ ಕಾನೂನು ಸುವ್ಯವಸ್ಥೆ ಅತ್ಯಂತ ಹದಗೆಟ್ಟಿದೆ ಎಂದು ರಾಜ್ಯದ ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ ಅವರು ಟೀಕಿಸಿದರು.
ಬಿಜೆಪಿ ಬೆಂಗಳೂರು ಮಹಾನಗರದ ವತಿಯಿಂದ ನಗರದ ಸ್ವಾತಂತ್ರ ಉದ್ಯಾನವನದ ಬಳಿ ಇಂದು ಬೃಹತ್ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿತ್ತು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಬೀದಿ ರಂಪಾಟಗಳು ಗೂಂಡಾ ಪ್ರವೃತ್ತಿ ಹೆಚ್ಚಾಗಿದ್ದು, ಮನೆಯಿಂದ ಹೊರಟ ಮಹಿಳೆಯರು, ಯುವಜನರು ಮನೆ ಸೇರುವ ಧೈರ್ಯ ಇಲ್ಲ. ರಸ್ತೆಗುಂಡಿಯಲ್ಲಿ ಬಿದ್ದು ಸಾಯುವ ಭಯದಿಂದ ಹಿರಿಯರು ನೆಮ್ಮದಿಯಿಂದ ಇರಲು ಸಾಧ್ಯವಿಲ್ಲ ಎಂದು ಕಳವಳ ವ್ಯಕ್ತಪಡಿಸಿದರು.
ಸೋಮವಾರ ಅಧಿಕಾರಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದು, ಇದು ಭ್ರಷ್ಟಾಚಾರಕ್ಕೆ ಹಿಡಿದ ಕೈಗನ್ನಡಿಯಾಗಿದೆ. ಮುಖ್ಯಮಂತ್ರಿಗಳು, ಉಪ ಮುಖ್ಯಮಂತ್ರಿಗಳು ಹಾಗೂ ಸಚಿವರಿಂದ ರಾಜ್ಯದ ಎಲ್ಲಾ ಅಧಿಕಾರಿಗಳು ಒತ್ತಡಕ್ಕೆ ಒಳಗಾಗಿರುವುದು ಗೊತ್ತಿದೆ. ಅಧಿಕಾರಿಗಳ ಪರವಾಗಿ ಬಿಜೆಪಿ ಇದೆ. ಯಾರೂ ಆತ್ಮಹತ್ಯೆ ಮಾಡಿಕೊಳ್ಳದಿರಿ ಎಂದು ಮನವಿ ಮಾಡಿದರು.
ತಕ್ಷಣ ಗುಂಡಿ ಮುಚ್ಚುವ ಕಾರ್ಯ ಕೈಗೆತ್ತಿಕೊಳ್ಳದಿದ್ದರೆ, ಭ್ರಷ್ಟಾಚಾರ ಹೀಗೆ ಮುಂದುವರಿದರೆ ಉಗ್ರ ಹೋರಾಟ ಅನಿವಾರ್ಯವಾಗುತ್ತದೆ ಎಂದು ಎಚ್ಚರಿಕೆ ನೀಡಲಾಗಿದೆ. ಕಾಂಗ್ರೆಸ್ ಸರ್ಕಾರ ಸರಿದಾರಿಗೆ ಬರದೇ ಇದ್ದರೆ ಅದನ್ನು ಸರಿದಾರಿಗೆ ಬಿಜೆಪಿ ಕಾರ್ಯಕರ್ತರು ಮಾಡಲಿದ್ದಾರೆ ಎಂದು ಸಮಾರಂಭದಲ್ಲಿ ತಿಳಿಸಿದ್ದಾರೆ.
ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಅವರು ಮಾತನಾಡಿ, ಬ್ರ್ಯಾಂಡ್ ಬೆಂಗಳೂರು ಮೂಲಕ ಸಿಂಗಾಪುರ, ಅಮೆರಿಕದ ನ್ಯೂಯಾರ್ಕ್ ಥರ ಮಾಡುವುದಾಗಿ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಹೇಳಿದ್ದಾರೆ. ಒಂದು ವರ್ಷವಾದರೂ ಒಂದು ರೂ. ಹಣವನ್ನು ಬೆಂಗಳೂರಿಗೆ ಬಿಡುಗಡೆ ಮಾಡಿಲ್ಲ ಎಂದು ಟೀಕಿಸಿದರು.
ರಾಜ್ಯದ 60% ರಿಂದ 65% ತೆರಿಗೆ ಬೆಂಗಳೂರಿನಿಂದ ಸಂಗ್ರಹವಾಗುತ್ತಿದೆ. ಸಿದ್ದರಾಮಯ್ಯನವರು ನಮ್ಮ ತೆರಿಗೆ ನಮ್ಮ ಹಕ್ಕು ಎಂದು ದೆಹಲಿಯಲ್ಲಿ ಪ್ರತಿಭಟನೆ ನಡೆಸಿದರು. ಈಗ ಬೆಂಗಳೂರಿನ ಜನತೆ ಬೆಂಗಳೂರಿನ ತೆರಿಗೆ ಬೆಂಗಳೂರಿಗರ ಹಕ್ಕು ಎಂದು ಹೋರಾಟ ಮಾಡಲು ಸಿದ್ಧರಾಗಬೇಕಿದೆ ಎಂದು ಸ್ಥಾಪಿಸಿದ್ದಾರೆ.
ಮಳೆಯ ಟ್ರೈಲರ್ ಇದು. ಮಳೆಗಾಲ ಪ್ರಾರಂಭವಾಗುವಾಗಲೇ ರಸ್ತೆಗಳು ಹೊಂಡ ಗುಂಡಿಯಿಂದ ಕೂಡಿದೆ. ಎಲ್ಲ ಕಸದ ರಾಶಿ ಬಿದ್ದಿದೆ. ಕಸ ಎತ್ತುವವರಿಗೆ ಜನವರಿಯಿಂದ ಸಂಬಳ ಕೊಟ್ಟಿಲ್ಲ. ಮುಖ್ಯಮಂತ್ರಿಯವರು ಮೊನ್ನೆ ಒಣಗಿದ ಮರ ತೆಗೆಸಲು ಸೂಚಿಸಿದ್ದರು. ಸಿಎಂ ಹೇಳಿದ್ದು ಒಂದಾದರೂ ಮರ ತೆಗೆದಿದ್ದರೆ ಸಾಕ್ಷಿ ತೋರಿಸಿ ಎಂದು ಸವಾಲು ಹಾಕಿದರು.