ಕೋಲ್ಕತ್ತಾ: ಜೂನ್ 4 ರ ಚುನಾವಣಾ ಫಲಿತಾಂಶಕ್ಕೂ ಮುನ್ನ ಪ್ರಧಾನಿ ನರೇಂದ್ರ ಮೋದಿಯವರು ಧ್ಯಾನ ಮಾಡಲು ತಮಿಳುನಾಡಿನ ಕನ್ಯಾಕುಮಾರಿಗೆ ಭೇಟಿ ನೀಡುವ ಕುರಿತು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಕಟುವಾಗಿ ಟೀಕಿಸಿದ್ದಾರೆ.
ಯಾರು ಬೇಕಾದರು ಹೋಗಿ ಧ್ಯಾನ ಮಾಡಬಹುದು. ಆದರೆ ಧ್ಯಾನ ಮಾಡುವಾಗ ಕ್ಯಾಮೆರಾ ತೆಗೆದುಕೊಂಡು ಹೋಗುತ್ತಾರೆಯೇ ಎಂದು ದೀದಿ ಪ್ರಶ್ನಿಸಿದ್ದಾರೆ. ಅಲ್ಲದೇ ಚುನಾವಣೆಗೆ 48 ಗಂಟೆಗಳ ಮೊದಲು ಎಸಿ ರೂಮಿನಲ್ಲಿ ಹೋಗಿ ಕೂರುತ್ತಾರೆ ಎಂದು ವಾಗ್ದಾಳಿ ನಡೆಸಿದರು.
ಲೋಕಸಭಾ ಚುನಾವಣಾ ಪ್ರಚಾರದ ನಂತರ ಕನ್ಯಾಕುಮಾರಿಯಲ್ಲಿ ಸ್ವಾಮಿ ವಿವೇಕಾನಂದರಿಗೆ ಗೌರವಾರ್ಥವಾಗಿ ನಿರ್ಮಿಸಲಾದ ಸ್ಮಾರಕವಾದ ವಿವೇಕಾನಂದ ರಾಕ್ ಸ್ಮಾರಕದಲ್ಲಿ ಪ್ರಧಾನಿ ಮೋದಿ ಧ್ಯಾನ ಮಾಡಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ನಾನು ಕೂಡ ಕನ್ಯಾಕುಮಾರಿಗೆ ಭೇಟಿ ನೀಡುವ ಪ್ಲಾನ್ ಮಾಡಿದ್ದೆ.
ಆದರೆ ಮೋದಿಯವರು ಅಲ್ಲಿಗೆ ಭೇಟಿ ನೀಡುವ ಕುರಿತು ತಿಳಿದುಕೊಂಡೆ ಎಂದರು. ಮೋದಿ ಭೇಟಿಯ ಕುರಿತು ಯಾಕೆ ಯಾರೂ ಬಾಯಿಬಿಡುತ್ತಿಲ್ಲ ಎಂದು ನನಗೆ ತಿಳಿದಿಲ್ಲ. ಸ್ವಾಮಿ ವಿವೇಕಾನಂದರು ಅಲ್ಲಿ ಧ್ಯಾನ ಮಾಡಿದ್ದರು. ಆದರೆ ಈಗ ಪ್ರಧಾನಿ ಅಲ್ಲಿಗೆ ಹೋಗಿ ಧ್ಯಾನ ಮಾಡುತ್ತಿದ್ದಾರೆ. ಇದು ನಿಜಕ್ಕೂ ನನಗೆ ತುಂಬಾ ಬೇಸರ ತಂದಿದೆ ಎಂದು ಬ್ಯಾನರ್ಜಿ ಹೇಳಿದರು.
ಉದ್ದೇಶವೊಂದರ ಸಲುವಾಗಿ ಪರಮಾತ್ಮ ನನ್ನನ್ನು ಕಳುಹಿಸಿದ್ದಾನೆ ಎಂದು ಈ ಹಿಂದೆ ಮೋದಿ ಹೇಳಿದ್ದರು. ಈ ಹೇಳಿಕೆಗೂ ಬ್ಯಾನರ್ಜಿ ಪ್ರಧಾನಿಯವರನ್ನು ಗೇಲಿ ಮಾಡಿದರು. ಅವರು (ಮೋದಿ) ದೇವರಾಗಿದ್ದರೆ ಯಾಕೆ ಧ್ಯಾನ ಮಾಡಬೇಕು..?. ಇತರರು ಅವರಿಗಾಗಿ ಧ್ಯಾನ ಮಾಡಬೇಕಲ್ವ ಎಂದು ಹೇಳಿದರು.
ಇದೇ ವೇಳೆ ಎಚ್ಚರಿಕೆ ನೀಡಿದ ಬ್ಯಾನರ್ಜಿ, ಕನ್ಯಾಕುಮಾರಿಯಲ್ಲಿ ಮೋದಿ ಅವರ ಧ್ಯಾನವನ್ನು ದೂರದರ್ಶನದಲ್ಲಿ ಪ್ರಸಾರ ಮಾಡಿದರೆ ಅದು ಮಾದರಿ ನೀತಿ ಸಂಹಿತೆ (MCC) ಉಲ್ಲಂಘನೆಯಾಗುತ್ತದೆ ಎಂದು ಆರೋಪಿಸಿ ಚುನಾವಣಾ ಆಯೋಗಕ್ಕೆ ದೂರು ನೀಡುವುದಾಗಿ ಹೇಳಿದರು.