ಬೆಂಗಳೂರು : ಪೆನ್‍ಡ್ರೈವ್ ಕೇಸಲ್ಲಿ ಸಿಲುಕಿ ವಿದೇಶಕ್ಕೆ ಪರಾರಿಯಾಗಿದ್ದ ಸಂಸದ ಪ್ರಜ್ವಲ್ ರೇವಣ್ಣ ಬೆಂಗಳೂರಿಗೆ ವಾಪಸ್ ಆಗೋದಕ್ಕೆ ಕೌಂಟ್‍ಡೌನ್ ಶುರುವಾಗಿದೆ. ಎಲ್ಲಾ ಅಂದ್ಕೊಂಡಂತೆ ಆದ್ರೆ ಜರ್ಮನಿಯ ಮ್ಯೂನಿಕ್‍ನಲ್ಲಿ ಗುರುವಾರ ಮಧ್ಯಾಹ್ನ 3.35ಕ್ಕೆ ಲುಫ್ತಾನ್ಸಾ ಏರ್ ಲೈನ್ಸ್ ವಿಮಾನ ಹತ್ತಲಿದ್ದಾರೆ. ಅಂದಾಜು 8 ಗಂಟೆಗಳ ಪ್ರಯಾಣದ ಬಳಿಕ ಮಧ್ಯರಾತ್ರಿ 12.30ಕ್ಕೆ ಬೆಂಗಳೂರಿಗೆ ಬಂದಿಳಿಯಲಿದ್ದಾರೆ.
ಈಗಾಗಲೇ ಪ್ರಜ್ವಲ್ ಆನ್‍ಲೈನ್ ಚೆಕ್‍ಇನ್ ಪ್ರಕ್ರಿಯೆ ಮುಗಿಸಿದ್ದಾರೆ. ಪ್ರಜ್ವಲ್‍ಗೆ ಬ್ಯುಸಿನೆಸ್ ಕ್ಲಾಸ್‍ನ 3ಕೆ ಸೀಟ್ ಕನ್ಫರ್ಮ್ ಆಗಿದೆ. ಪ್ರಜ್ವಲ್ ರೇವಣ್ಣ ಕೆಐಎಎಲ್‍ಗೆ ಬಂದಿಳಿದ ಕೂಡ್ಲೇ ಅವರನ್ನು ಬಂಧಿಸಲು ಎಸ್‍ಐಟಿ ಸಕಲ ಸಿದ್ದತೆ ಮಾಡ್ಕೊಂಡಿದೆ. ಈಗಾಗಲೇ ಏರ್ ಪೋರ್ಟ್‍ನಲ್ಲಿ ಎಸ್‍ಐಟಿ ಅಧಿಕಾರಿಗಳು ಠಿಕಾಣಿ ಹೂಡಿದ್ದಾರೆ.
ಪ್ರಜ್ವಲ್ ವಿರುದ್ಧ ಲುಕ್‍ಔಟ್ ನೊಟೀಸ್ ಜಾರಿಯಲ್ಲಿರುವ ಕಾರಣ, ಏರ್‍ಪೋರ್ಟ್‍ನಲ್ಲಿ ಮೊದಲಿಗೆ ಇಮ್ಮಿಗ್ರೇಷನ್ ಅಧಿಕಾರಿಗಳು ಆರೋಪಿಯನ್ನು ವಶಕ್ಕೆ ಪಡೆಯಲಿದ್ದಾರೆ. ನಂತ್ರ ಎಸ್‍ಐಟಿಗೆ ಪ್ರಜ್ವಲ್ ರೇವಣ್ಣ ಹಸ್ತಾಂತರ ಪ್ರಕ್ರಿಯೆ ನಡೆಯಲಿದೆ. ಪೆನ್‍ಡ್ರೈವ್ ಪ್ರಕರಣದ ವರದಿಗಳಿಂದ ಖಿನ್ನತೆಗೆ ಜಾರಿದ್ದ ಪ್ರಜ್ವಲ್ ಅದರಿಂದ ಹೊರಬರಲು ಕೌನ್ಸೆಲಿಂಗ್ ಪಡೆದು, ಭಾರತಕ್ಕೆ ಬರಲು ತಯಾರಾದ್ರು ಎನ್ನಲಾಗಿದೆ.
ಪ್ರಜ್ವಲ್ ರೇವಣ್ಣ ರಾಜತಾಂತ್ರಿಕ ಪಾಸ್‍ಪೋರ್ಟ್ ಅವಧಿ ಮೇ 31ಕ್ಕೆ ಮುಕ್ತಾಯ ಆಗಲ್ಲ. ಅದರ ವ್ಯಾಲಿಡಿಟಿ ನವೆಂಬರ್ ವರೆಗೂ ಇದೆ. ಇಷ್ಟೆಲ್ಲಾ ಬೆಳವಣಿಗೆ ನಡ್ವೆ ಮೂರು ಪ್ರಕರಣದಲ್ಲಿ ಪ್ರಜ್ವಲ್ ನಿರೀಕ್ಷಣಾ ಜಾಮೀನು ಕೋರಿ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ಕೋರ್ಟ್ ಮೊರೆ ಹೋಗಿದ್ದು, ತುರ್ತು ವಿಚಾರಣೆಗೆ ಮನವಿ ಮಾಡಿದ್ದಾರೆ.
ಆದರೆ ಇದಕ್ಕೊಪ್ಪದ ಕೋರ್ಟ್, ಆಕ್ಷೇಪಣೆ ಸಲ್ಲಿಸಲು ಎಸ್‍ಐಟಿಗೆ ಸೂಚಿಸಿ ಮೇ 31ಕ್ಕೆ ವಿಚಾರಣೆ ನಿಗದಿ ಮಾಡಿದೆ. ಈ ಮಧ್ಯೆ, ಪ್ರಜ್ವಲ್ ರೇವಣ್ಣ ಬಂಧನಕ್ಕೆ ಆಗ್ರಹಿಸಿ ನಾಳೆ ಹಾಸನದಲ್ಲಿ 113 ಸಂಘಟನೆಗಳು ಪ್ರತಿಭಟನೆ ನಡೆಸಲು ಸಜ್ಜಾಗಿವೆ. ಆದ್ರೆ,ಇದು ಸರ್ಕಾರಿ ಪ್ರಾಯೋಜಿತ ಎಂಬುದು ಜೆಡಿಎಸ್ ಆರೋಪವಾಗಿದೆ.