Breaking
Tue. Dec 24th, 2024

ಶಿಕ್ಷಕರು ಮಕ್ಕಳಲ್ಲಿ ಆತ್ಮವಿಶ್ವಾಸ, ಅವಲೋಕನ, ಅನುಭವ, ಅಭಿವ್ಯಕ್ತಿ ಬೆಳೆಸುವ ಕಾರ್ಯ ಮಾಡಬೇಕು ಎಂದು ಕರೆ…!

ಚಿತ್ರದುರ್ಗ, ಮೇ.30 : ವೈಜ್ಞಾನಿಕ, ವೈಚಾರಿಕ ಚಿಂತನೆಗಳನ್ನು ಮಕ್ಕಳಲ್ಲಿ ಬೆಳೆಸುವ ಮೂಲಕ ಮೌಢ್ಯತೆಯನ್ನು ಹೋಗಲಾಡಿಸುವ ನಿಟ್ಟಿನಲ್ಲಿ ಶಿಕ್ಷಕರ ಪಾತ್ರ ಮಹತ್ವದ್ದು” ಎಂದು ಚಿಂತಕ ಹಾಗೂ ಚಿತ್ರದುರ್ಗ ಸೈನ್ಸ್ ಫೌಂಡೇಶನ್ ಅಧ್ಯಕ್ಷರಾದ ಡಾ.ಜಿ.ಎನ್.ಮಲ್ಲಿಕಾರ್ಜುನಪ್ಪ ಅಭಿಪ್ರಾಯಪಟ್ಟರು
ಚಿತ್ರದುರ್ಗ ಸೈನ್ಸ್ ಫೌಂಡೇಶನ್, ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ “ಪವಾಡಗಳ ಗುಟ್ಟು ಬಯಲು”ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ವಿಜ್ಞಾನ, ನಂಬಿಕೆ ಎನ್ನುವ ಸವಾಲುಗಳು ನಮ್ಮ ಮುಂದಿವೆ. ಪವಾಡ ಎನ್ನುವುದು ಜನಸಾಮಾನ್ಯರಿಗೆ ಮೋಡಿ ಮಾಡಿ ಅವರ ಭವಿಷ್ಯದ ಜೊತೆ ಚೆಲ್ಲಾಟ ಆಡುವುದೇ ಆಗಿದೆ. ಶಿಕ್ಷಕರು ಮೊದಲು ವೈಚಾರಿಕ,ವೈಜ್ಞಾನಿಕ ಮನೋಭಾವ ಬೆಳೆಸಿಕೊಂಡು ಪ್ರಶಿಕ್ಷಣಾರ್ಥಿಗಳಿಗೆ ಸ್ವಾಭಿಮಾನಿಗಳಾಗಿ ಬದುಕುವುದನ್ನು ಕಲಿಸಬೇಕು. ನಮ್ಮ ಭಾರತ ಎಷ್ಟೇ ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಅಭಿವೃದ್ಧಿ ಸಾಧಿಸಿದ್ದರೂ ಮೌಢ್ಯತೆ, ಕಂದಾಚಾರಗಳು ಇನ್ನೂ ತಾಂಡವವಾಡುತ್ತಿವೆ. ಶಿಕ್ಷಕರು ಮಕ್ಕಳಲ್ಲಿ ಆತ್ಮವಿಶ್ವಾಸ, ಅವಲೋಕನ, ಅನುಭವ, ಅಭಿವ್ಯಕ್ತಿ ಬೆಳೆಸುವ ಕಾರ್ಯ ಮಾಡಬೇಕು ಎಂದು ಕರೆ ನೀಡಿದರು. 
ಚಿತ್ರದುರ್ಗ ಸೈನ್ಸ್ ಫೌಂಡೇಶನ್ ಕಾರ್ಯದರ್ಶಿ ಎಚ್.ಎಸ್.ಟಿ.ಸ್ವಾಮಿ ಮಾತನಾಡಿ, ವಿದ್ಯಾರ್ಥಿಗಳು ಹಾಗೂ ಜನಸಾಮಾನ್ಯರಲ್ಲಿ ವಿಜ್ಞಾನದ ಅರಿವು ಮೂಡಿಸುವ, ವೈಚಾರಿಕ ಪ್ರಜ್ಞೆ ಬೆಳೆಸುವ ಕಾರ್ಯ ಇಂದು ತುರ್ತಾಗಿ ಆಗಬೇಕಾಗಿದೆ.ಅವೈಜ್ಞಾನಿಕ ಕತೆಯನ್ನು ಹೋಗಲಾಡಿಸಿ, ವೈಜ್ಞಾನಿಕ ಚಿಂತನೆಗಳನ್ನು ಬೆಳೆಸಿಕೊಳ್ಳಿ ಎಂದು ಪ್ರಶಿಕ್ಷಣಾರ್ಥಿಗಳಿಗೆ ಕಿವಿಮಾತು ಹೇಳಿದರು. ಚಿತ್ರದುರ್ಗ ಸೈನ್ಸ್ ಫೌಂಡೇಶನ್ ಉಪಾಧ್ಯಕ್ಷ ಚಳ್ಳಕೆರೆ ಯರ್ರಿಸ್ವಾಮಿ ಮಾತನಾಡಿ,ಪವಾಡಗಳು ಪ್ರಕೃತಿಗೆ ವಿರುದ್ಧವಾದವುಗಳು. ಶಿಕ್ಷಕರು ಮಕ್ಕಳಲ್ಲಿ ಪ್ರಶ್ನಿಸುವ ಧೈರ್ಯ ತುಂಬಬೇಕಾದ ಅಗತ್ಯತೆ ಇದೆ ಎಂದರು.
ಹಿರಿಯೂರಿನ ಗಿರೀಶ ಶಿಕ್ಷಣ ಮಹಾವಿದ್ಯಾಲಯದ ಪ್ರಾಧ್ಯಾಪಕ ಹೆಚ್.ಮಂಜುನಾಥ್ ರವರು ಮಂತ್ರಶಕ್ತಿಯಿಂದ ಬೆಂಕಿ ಹೊತ್ತಿಸುವುದು, ಬಾಯಲ್ಲಿ ಬೆಂಕಿ ಇಟ್ಟುಕೊಂಡು ನುಂಗುವುದು, ತಲೆಯಮೇಲೆ ಬೆಂಕಿ ಹೊತ್ತಿಸಿ ಉರಿಸುವುದು, ಹೀಗೆ ಅನೇಕ ಪವಾಡಗಳನ್ನು ತೋರಿಸಿ ಅವುಗಳ ಹಿಂದಿರುವ ವೈಜ್ಞಾನಿಕ ಸತ್ಯಗಳನ್ನು ಬಿಚ್ಚಿಟ್ಟರು.
ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಕೆ. ಎಂ.ವೀರೇಶ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಬಾಪೂಜಿ ಶಿಕ್ಷಣ ಮಹಾವಿದ್ಯಾಲಯದ ಪ್ರಾಚಾರ್ಯರಾದ ಶ್ರೀಮತಿ ಎಂ.ಆರ್.ಜಯಲಕ್ಷ್ಮಿ, ಚಿತ್ರದುರ್ಗ ಸೈನ್ಸ್ ಫೌಂಡೇಶನ್ ಖಜಾಂಚಿ ಕೆ.ವಿ.ನಾಗಲಿಂಗರೆಡ್ಡಿ ವೇದಿಕೆಯಲ್ಲಿದ್ದರು.

Related Post

Leave a Reply

Your email address will not be published. Required fields are marked *