ಹಿರಿಯೂರು, ಮೇ.31 : ಅಮೆರಿಕದಲ್ಲಿ ವಿದ್ಯಾಭ್ಯಾಸ ಮಾಡಿ, ಸ್ವತಃ ತಾವೇ ದುಡಿದು ಗಳಿಸಿದ ಹಣದಲ್ಲಿ ತನ್ನ ತಂದೆ ಕಲಿತ ಶಾಲೆಗೆ 16 ಕಂಪ್ಯೂಟರ್ ಗಳನ್ನು ಕೊಡುಗೆ ನೀಡಲಾದ ಪ್ರಯುಕ್ತ ತಾಲೂಕಿನ ವಾಣಿವಿಲಾಸ ಸಾಗರದ ಶ್ರೀ ಬಿ.ಎಲ್. ಗೌಡ ಪ್ರೌಢಶಾಲೆಯಲ್ಲಿ ಸೋಮವಾರ ಅಭಿನಂದನಾ ಕಾರ್ಯಕ್ರಮ ನಡೆಯಿತು.
ಈ ಶಾಲೆಯಲ್ಲಿ 1986-87 ನೇ ಸಾಲಿನ ವಿದ್ಯಾರ್ಥಿಯಾಗಿರುವ ಸಂದೀಲ್ ಕುಮಾರ್ ರವರ ಸುಪುತ್ರ ಎಸ್ ಅಖಿಲ್ ರವರು ವಿದೇಶದಲ್ಲಿ ಓದಿ, ಹಣ ಸಂಪಾದಿಸಿ ಕಂಪ್ಯೂಟರ್ ಗಳನ್ನು ಕೊಡುಗೆ ನೀಡುವ ಮೂಲಕ ಗ್ರಾಮೀಣ ವಿದ್ಯಾರ್ಥಿಗಳ ಭವಿಷ್ಯದ ಬದುಕಿಗೆ ಬೆಳಕಾಗಿ ನಿಂತಿದ್ದಾರೆ.
ಸಮಾರಂಭ ದಲ್ಲಿ ಸಂದೀಲ್ ಕುಮಾರ್ ಹಾಗೂ ಅಖಿಲ್ ರವರನ್ನು ಸನ್ಮಾನಿಸಿ ಗೌರವಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಡಿ. ಎ. ಅನ್ನಪೂರ್ಣಮ್ಮ ವಹಿಸಿದ್ದರು, ಶಿಕ್ಷಕರಾದ ಗುರುಸಾಗರ್ , ಅನುಪಮ, ಕುಮಾರ್, ತಿಪ್ಪೇಸ್ವಾಮಿ, ಶಾಲೆಯ ವಿದ್ಯಾರ್ಥಿಗಳು ಇದ್ದರು.