Breaking
Tue. Dec 24th, 2024

ಸಾರಿಗೆ ಇಲಾಖೆಯ ಗ್ರೂಪ್ ‘ಸಿ’ ಮೋಟಾರು ವಾಹನ ನಿರೀಕ್ಷಕರು ಹುದ್ದೆಗಳ ಭರ್ತಿಗೆ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನ…!

ಬೆಂಗಳೂರು, ಮೇ 30: ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್‌ಸಿ) ಸಾರಿಗೆ ಇಲಾಖೆಯ ಗ್ರೂಪ್ ‘ಸಿ’ ಮೋಟಾರು ವಾಹನ ನಿರೀಕ್ಷಕರು ಹುದ್ದೆಗಳ ಭರ್ತಿಗೆ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಿತ್ತು. ಅರ್ಜಿ ಸಲ್ಲಿಕೆಗೆ ಈಗ ದಿನಾಂಕವನ್ನು ಘೋಷಣೆ ಮಾಡಲಾಗಿದೆ.
ಕೆಪಿಎಸ್‌ಸಿ ಕಾರ್ಯದರ್ಶಿಗಳು ಈ ಕುರಿತು ಪ್ರಕಟಣೆ ಮೂಲಕ ಮಾಹಿತಿ ನೀಡಿದ್ದಾರೆ. ಆಯೋಗವು ಸಾರಿಗೆ ಇಲಾಖೆಯಲ್ಲಿನ ಗ್ರೂಪ್ ‘ಸಿ’ ವೃಂದದ ಮೋಟಾರು ವಾಹನ ನಿರೀಕ್ಷಕರು 70 (ಆರ್‌ಪಿಸಿ) ಮತ್ತು 6 (ಹೈ.ಕ) ಹುದ್ದೆಗಳ ನೇಮಕಾತಿ ಸಂಬಂಧ ದಿನಾಂಕ 14/03/2024ರಂದು ವೃಂದವಾರು ಪ್ರತ್ಯೇಕವಾಗಿ ಅಧಿಸೂಚನೆ ಹೊರಡಿಸಿತ್ತು ಎಂದು ಹೇಳಿದ್ದಾರೆ.
ಅಭ್ಯರ್ಥಿಗಳು ಆನ್‌ಲೈನ್‌ ಮುಖಾಂತರ ಅರ್ಜಿ ಸಲ್ಲಿಸಲು ಪ್ರಾರಂಭಿಕ ದಿನಾಂಕ 22/04/2024 ಮತ್ತು ಕೊನೆಯ ದಿನಾಂಕ 21/05/2024 ಎಂದು ನಿಗದಿಪಡಿಸಲಾಗಿತ್ತು. ಆದರೆ ತಾಂತ್ರಿಕ ಕಾರಣದಿಂದ ಸದರಿ ಹುದ್ದೆಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸುವ ಕಾಲಮಿತಿಯನ್ನು ದಿನಾಂಕ 22/04/2024 ಮತ್ತು 17/05/2024ರ ಪ್ರಕಟಣೆಯಲ್ಲಿ ಮುಂದೂಡಲಾಗಿತ್ತು.
ಪ್ರಸ್ತುತ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದ್ದು, ಕಾಲಮಿತಿಯನ್ನು ಮರು ನಿಗದಿಪಡಿಸಲಾಗಿರುತ್ತದೆ. ಅರ್ಜಿ ಸಲ್ಲಿಸಲು ಪ್ರಾರಂಭಿಕ ದಿನಾಂಕ 30/05/2024. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 30/06/2024 ಮತ್ತು ಶುಲ್ಕ ಪಾವತಿಸಲು ಕೊನೆಯ ದಿನಾಂಕ 30/06/2024 ಆಗಿದೆ. 
ಅಭ್ಯರ್ಥಿಗಳಿಗೆ ವಿವರಗಳು: ಮೋಟಾರು ವಾಹನ ನಿರೀಕ್ಷಕರು ಹುದ್ದೆಗಳಿಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಶುಲ್ಕವನ್ನು ಕಡ್ಡಾಯವಾಗಿ ಪಾವತಿಸಬೇಕು. ಶುಲ್ಕ ಪಾವತಿ ಮಾಡದ ಅರ್ಜಿಗಳನ್ನು ತಿರಸ್ಕಾರ ಮಾಡಲಾಗುತ್ತದೆ. 
ಸಾಮಾನ್ಯ ವರ್ಗದ ಅಭ್ಯರ್ಥಿಗಳು 600 ರೂ., ಪ್ರವರ್ಗ 2 (ಎ), 2 (ಬಿ), 3 (ಎ), 3 (ಬಿ)ಗೆ ಸೇರಿದ ಅಭ್ಯರ್ಥಿಗಳು 300 ರೂ., ಮಾಜಿ ಸೈನಿಕರು 50 ರೂ. ಶುಲ್ಕವನ್ನು ಪಾವತಿಸಬೇಕು. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಪ್ರವರ್ಗ-1 ಹಾಗೂ ಅಂಗವಿಕಲ ಅಭ್ಯರ್ಥಿಗಳಿಗೆ ಶುಲ್ಕ ಪಾವತಿಯಿಂದ ವಿನಾಯಿತಿ ಇದೆ. 
ಅಭ್ಯರ್ಥಿಗಳು ಅರ್ಜಿ ಶುಲ್ಕವನ್ನು ಕಡ್ಡಾಯವಾಗಿ ಪಾವತಿಸಬೇಕು. ಒಮ್ಮೆ ಪಾವತಿ ಮಾಡಿದ ಶುಲ್ಕವನ್ನು ಯಾವುದೇ ಕಾರಣಕ್ಕೂ ಸಹ ವಾಪಸ್ ನೀಡಲಾಗುವುದಿಲ್ಲ ಅಥವ ಹಿಂತಿರುಗಿಸಲಾಗುವುದಿಲ್ಲ ಅಥವ ಆಯೋಗ ನಡೆಸುವ ಇತರೆ ಪರೀಕ್ಷೆ ಅಥವ ನೇಮಕಾತಿಗಳಿಗೆ ಹೊಂದಿಸಿಕೊಳ್ಳಲಾಗುವುದಿಲ್ಲ.
ಅರ್ಜಿ ಸಲ್ಲಿಕೆ ಮಾಡುವ ಅಭ್ಯರ್ಥಿಗಳಿಗೆ ವಯೋಮಿತಿ, ಕನಿಷ್ಠ 18 ವರ್ಷಗಳು. ಗರಿಷ್ಠ ವಯೋಮಿತಿ ಸಾಮಾನ್ಯ ಅರ್ಹತೆ 35 ವರ್ಷ. ಪವರ್ಗ 2 (ಎ), 2 (ಬಿ), 3 (ಎ), 3 (ಬಿ) 38 ವರ್ಷಗಳು. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಪ್ರವರ್ಗ-1ಕ್ಕೆ 40 ವರ್ಷಗಳು. 
ಕನ್ನಡ ಭಾಷಾ ಪರೀಕ್ಷೆ ಮಾಹಿತಿ: ಸದರಿ ಹುದ್ದೆಗಳಿಗೆ ಕರ್ನಾಟಕ ನಾಗರೀಕ ಸೇವಾ (ನೇರ ನೇಮಕಾತಿ) (ಸಾಮಾನ) ನಿಯಮಗಳು 2021ರ ಉಪನಿಯಮ (7) ರಲ್ಲಿ ನಿರ್ದಿಷ್ಟಪಡಿಸಲಾದಂತೆ ಯಾರೇ ಅಭ್ಯರ್ಥಿಗಳು ಕನ್ನಡ ಭಾಷಾ ಪರೀಕ್ಷೆಯಲ್ಲಿ ಅರ್ಹತೆಯನ್ನು ಪಡೆಯದ ಹೊರತು ಆಯ್ಕೆಗೆ ಅರ್ಹರಾಗುವುದಿಲ್ಲ.
ಈ ಪರೀಕ್ಷೆಯು ಗರಿಷ್ಠ 150 ಅಂಕಗಳ ಒಂದು ಪ್ರಶ್ನೆ ಪತ್ರಿಕೆಯನ್ನು ಒಳಗೊಂಡಿದ್ದು, ಅಭ್ಯರ್ಥಿಯು ಈ ಪತ್ರಿಕೆಯಲ್ಲಿ ಅರ್ಹತೆ ಹೊಂದಲು ಕನಿಷ್ಠ 50 ಅಂಕಗಳನ್ನುಗಳಿಸಬೇಕು. ಪ್ರಶ್ನೆ ಪತ್ರಿಕೆಯನ್ನು SSLC ಹಂತದಲ್ಲಿನ ಪ್ರಥಮ ಭಾಷೆ ಕನ್ನಡವನ್ನು ಮಾನದಂಡವನ್ನಾಗಿಟ್ಟುಕೊಂಡು ಸಿದ್ಧಪಡಿಸಲಾಗುತ್ತದೆ.
ಸದರಿ ಹುದ್ದೆಗಳಿಗೆ ಕನ್ನಡ ಭಾಷಾ ಪರೀಕ್ಷೆಯಲ್ಲಿ ಅರ್ಹರಾದ ನಂತರ ಕರ್ನಾಟಕ ನಾಗರೀಕ ಸೇವಾ (ನೇರ ನೇಮಕಾತಿ) (ಸಾಮಾನ) ನಿಯಮಗಳು 2021 ರ ಉಪ ನಿಯಮ 5(ಡಿ)ರ ಪ್ರಕಾರ ನಡೆಸಲಾದ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಕನಿಷ್ಠ ಪಕ್ಷ ಶೇಕಡ 35 ರಷ್ಟು ಅಂಕಗಳನ್ನು ಗಳಿಸುವುದು ಕಡ್ಡಾಯವಾಗಿರುತ್ತದೆ. ಈ ಪರೀಕ್ಷೆಯಲ್ಲಿ ಗಳಿಸಿದ ಅಂಕಗಳ ಶೇಕಡವಾರು ಪ್ರಮಾಣದ ಆಧಾರದ ಮೇಲೆ (On the basis of the percentage of marks secured in Competitive Examination) ಹಾಗೂ ಚಾಲ್ತಿಯಲ್ಲಿರುವ ಮೀಸಲಾತಿ ನಿಯಮಗಳನ್ವಯ ಆಯ್ಕೆ ಮಾಡಲಾಗುವುದು. 
ಹೆಚ್ಚಿನ ಮಾಹಿತಿಗಾಗಿ ಕೆಪಿಎಸ್‌ಸಿ ವೆಬ್‌ಸೈಟ್‌ಗೆ ಭೇಟಿ ನೀಡಿ, ಅಧಿಸೂಚನೆ ಟ್ಯಾಬ್‌ನಲ್ಲಿ NOTIFICATION FOR POST OF MOTOR VEHICLE INSPECTOR (RPC) ಅಧಿಸೂಚನೆ ಕ್ಲಿಕ್ ಮಾಡಿ.

Related Post

Leave a Reply

Your email address will not be published. Required fields are marked *