ಹಿರಿಯೂರು, ಜೂ.01 : ಮುಂದೆ ಚಲಿಸುತ್ತಿದ್ದ ಲಾರಿಗೆ ಹಿಂಬದಿಯಿಂದ ಬಂದ ಅಶೋಕ್ ಲೇಲ್ಯಾಂಡ್ ಲಗೇಜ್ ವಾಹನ ಡಿಕ್ಕಿಯಾದ ರಭಸಕ್ಕೆ ಇಬ್ಬರು ಕುರಿ ವ್ಯಾಪಾರಿಗಳು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ನಗರದ ಹೊರವಲಯದ ಆರ್.ಕೆ. ಪವರ್ ಜಿನ್ ಬಳಿ ನಡೆದಿದೆ.
ಮೃತರನ್ನು ಚಳ್ಳಕೆರೆ ತಾಲೂಕಿನ ಹುಲಿಕುಂಟೆ ಗ್ರಾಮದ ರಮೇಶ್(55) ಹಾಗೂ ಬೆಳೆಗೆರೆ ಗ್ರಾಮದ ಶಿವಲಿಂಗಪ್ಪ (65) ಮೃತರು ಎಂದು ಗುರುತಿಸಲಾಗಿದೆ. ಗಾಯಗೊಂಡವರನ್ನು ಸ್ಥಳೀಯ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿದೆ.
ಚಳ್ಳಕೆರೆ ತಾಲೂಕಿನ ತನ್ನ ಗ್ರಾಮದಿಂದ ಹಿರಿಯೂರು ಕುರಿ ಸಂತೆಗೆ ಕುರಿ ವ್ಯಾಪಾರ ಮಾಡಲು ಅಶೋಕ್ ಲೈಲ್ಯಾಂಡ್ ಲಗೇಜ್ ವಾಹನದಲ್ಲಿ ಕುರಿ ತುಂಬಿಕೊಂಡು ಬರುತ್ತಿರುವಾಗ ಮುಂದೆ ಚಲಿಸುತ್ತಿದ್ದ ಲಾರಿಗೆ ಡಿಕ್ಕಿಯಾಗಿದೆ.
ಸ್ಥಳಕ್ಕೆ ಗ್ರಾಮಾಂತರ ಪೊಲೀಸ್ ಠಾಣೆ ಸಿಪಿಐ ಕಾಳಿಕೃಷ್ಣ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಹಿರಿಯೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.