ಪುನೀತ್ ರಾಜ್ ಕುಮಾರ್ ಅಭಿನಯದ ”ಮಿಲನ” ಚಿತ್ರದ ಮೂಲಕ ಕನ್ನಡ ಚಿತ್ರರಂಗ ಪ್ರವೇಶಿಸಿದ ಪಾರ್ವತಿ ಆ ನಂತರ ”ಮಳೆ ಬರಲಿ ಮಂಜೂ ಇರಲಿ”.. ”ಪೃಥ್ವಿ”.. ಮತ್ತು ”ಅಂದರ್ ಬಾಹರ್” ಚಿತ್ರಗಳಲ್ಲಿ ನಟಿಸಿದರು. ಕನ್ನಡಿಗರ ಹೃದಯವನ್ನೂ ಗೆದ್ದರು. ಮಾಲಿವುಡ್ನ ಈ ಬಟ್ಟಲುಗಣ್ಣಿನ ಚೆಲುವೆ ಕೇವಲ ತಮ್ಮ ಅಭಿನಯದಿಂದ ಮಾತ್ರ ಹೆಸರುವಾಸಿಯಾಗಿಲ್ಲ.
ಬದಲಿಗೆ ತಮ್ಮ ನೇರ ಹಾಗೂ ದಿಟ್ಟ ನುಡಿಗಳಿಂದ ಕೂಡ ಹೆಸರುವಾಸಿಯಾದವರು ಇವರು. ಮಲಯಾಳಂ ಸ್ಟಾರ್ ಒಬ್ಬರ ವಿರುದ್ಧ ನೇರಾನೇರವಾಗಿಯೇ ವಾಗ್ದಾಳಿ ನಡೆಸಿದ್ದ ಪಾರ್ವತಿ ವಿರುದ್ಧ ಆ ಸ್ಟಾರ್ ಅಭಿಮಾನಿಗಳು ಆ ನಂತರ ಸೈಬರ್ ಯುದ್ಧವನ್ನೇ ಸಾರಿದ್ದರು. ಆದರೆ ಪಾರ್ವತಿ ಮಾತ್ರ ಕುಗ್ಗಲಿಲ್ಲ. ಎದೆಗುಂದಲಿಲ್ಲ. ‘ಉಯರೆ’ಯಂತಹ ಸಿನಿಮಾ ಮೂಲಕ ಮತ್ತೆ ಮಾಲಿವುಡ್‌ನಲ್ಲಿ ಪುಟಿದೆದ್ದವರು ಪಾರ್ವತಿ. ಇಂಥ ಪಾರ್ವತಿ ಸದ್ದಿಲ್ಲದೇ ಮದುವೆಯಾದರಾ ಎಂಬ ಅನುಮಾನ ಇವರ ಅಭಿಮಾನಿಗಳನ್ನು ಕಾಡುತ್ತಿದೆ. ಅದಕ್ಕೆ ಕಾರಣ ವೈರಲ್ ಆದ ಫೋಟೋ.
ಅಸಲಿಗೆ ಪಾರ್ವತಿಗೆ ಈಗ 36ರ ಹರೆಯ. ಆದರೆ ಇನ್ನೂ ಮದುವೆಯಾಗಿಲ್ಲ.ಇನ್ನೂ ಸಾಮಾನ್ಯಕ್ಕೆ ವಯಸ್ಸಿಗೆ ಬಂದ ಯುವಕ ಯುವತಿಯರು ಎಲ್ಲಿಯೇ ಹೋಗಲಿ ಅಲ್ಲಿ ಮೊದಲು ಎದುರಾಗುವುದು ಮದುವೆಯ ಕುರಿತ ಪ್ರಶ್ನೆಯೇ. ಇನ್ನು ಸೆಲೆಬ್ರೆಟಿಗಳ ಪಾಡಂತೂ ಇದಕ್ಕಿಂತ ಭಿನ್ನ. ಸಭೆ-ಸಮಾರಂಭಕ್ಕೆ ತೆರಳಲಿ, ಪಾರ್ಟಿಗೆ ಹೋಗಲಿ.. ಸಿಕ್ಕ-ಸಿಕ್ಕಲ್ಲಿ ಮದುವೆಯ ಪ್ರಶ್ನೆಯನ್ನ ಕೇಳಿ ಕೊಡಬಾರದ ಟಾರ್ಚರ್ ಕೊಡ್ತಾರೆ.
ಪಾರ್ವತಿ ಮೆನನ್‌ಗೆ ಕೂಡ ಈ ಅನುಭವ ಆಗಿದೆ. ಹೋದಾಗ ಬಂದಲ್ಲಿ ಮದುವೆಯ ಕುರಿತು ಪ್ರಶ್ನೆ ಎದುರಾಗ್ತಾನೇ ಇದೆ. ಆದರೆ ಪಾರ್ವತಿ ಮಾತ್ರ ಇಲ್ಲಿಯವರೆಗೆ ಮದುವೆಯ ಕುರಿತು ಮಾತನಾಡುವುದಿಲ್ಲ. ಈ ನಡುವೆ ಪಾರ್ವತಿ ಮೆನನ್ ಗುಟ್ಟುಗುಟ್ಟಾಗಿ ಮದುವೆಯಾಗಿದ್ದಾರೆ ಎಂಬ ವದಂತಿ ಹಬ್ಬಿದೆ. ಸುದ್ದಿ ಕೇಳಿ ಪಾರ್ವತಿ ಮೆನನ್ ಅವರ ಭಕ್ತಗಣ ಕೂಡ ಬೆಚ್ಚಿ ಬಿದ್ದಿದೆ. ಆದರೆ ಸತ್ಯ ಸಂಗತಿ ಏನೆಂದರೆ ವೈರಲ್ ಆದ ಈ ಫೋಟೋಗಳು ಪಾರ್ವತಿ ಮೆನನ್ ಅವರ ಖಾಸಗಿ ಬದುಕಿನದ್ದಲ್ಲ ಬದಲಾಗಿ ಸಿನಿಮಾಗೆ ಸಂಬಂಧಿಸಿದ್ದು.
ಹೌದು, ಪಾರ್ವತಿ ಮೆನನ್ ”ಉಲ್ಲೋಜುಕ್ಕು” ಎಂಬ ಚಿತ್ರದಲ್ಲಿ ನಟಿಸಿದ್ದಾರೆ. ಪ್ರಶಾಂತ್ ಮುರಳಿ ಈ ಚಿತ್ರದ ನಾಯಕ. ಕ್ರಿಸ್ಟೋ ಟಾಮಿ ನಿರ್ದೇಶನ ಇರುವ ಈ ಚಿತ್ರದ 45 ಸೆಕೆಂಡ್‌ನ ಪ್ರೋಮೋ ಇತ್ತೀಚೆಗೆ ಬಿಡುಗಡೆಯಾಗಿದೆ. ಬಿಡುಗಡೆಯಾದ ಈ ಪ್ರೋಮೋದಲ್ಲಿ ಪಾರ್ವತಿ ಮೆನನ್ ಮತ್ತು ಪ್ರಶಾಂತ್ ಮುರಳಿ ನವ ದಂಪತಿಗಳ ಪಾತ್ರಗಳನ್ನು ನಿರ್ವಹಿಸಿದ್ದಾರೆ. ರೀಲ್‌ನಲ್ಲಿ ಆಗಷ್ಟೇ ಮದುವೆಯಾದ ಹಿನ್ನೆಲೆ ದೋಣಿಯಲ್ಲಿ ಕುಳಿತು ಕ್ಯಾಮರಾಗಳಿಗೆ ಫೋಸ್ ನೀಡಲಾಗಿದೆ. ಹೀಗೆ ತೆಗೆಯಲಾದ ಈ ಫೋಟೋಗಳೇ ಇದೀಗ ವೈರಲ್ ಆಗಿವೆ.
ಒಟ್ನಲ್ಲಿ ಬಹುಕಾಲದ ನಂತರ ಪಾರ್ವತಿ ಮೆನನ್ ಮತ್ತೊಮ್ಮೆ ಸುದ್ದಿಯಾಗಿದ್ದಾರೆ. ತಮ್ಮ ”ಉಲ್ಲೋಜುಕ್ಕು” ಚಿತ್ರದ ಮೂಲಕ ಸದ್ದು ಮಾಡುತ್ತಿದ್ದಾರೆ. ಇನ್ನೂ ಈ ಚಿತ್ರದ ನಿರ್ದೇಶಕ ಕ್ರಿಸ್ಟೋ ಟಾಮಿ ಈ ಹಿಂದೆ ಅತ್ಯುತ್ತಮ ನಿರ್ದೇಶಕ ರಾಷ್ಟ್ರ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡವರು. ಈ ಕಾರಣಕ್ಕೆ ಈ ಚಿತ್ರದ ಮೇಲೆ ನಿರೀಕ್ಷೆ ಹೆಚ್ಚಿದೆ. ಕೇವಲ 45 ಸೆಕೆಂಡ್ ಪ್ರೋಮೋದಿಂದ ಎಲ್ಲರ ಗಮನ ಸೆಳೆದ ಈ ಚಿತ್ರದ ಮೇಲೀಗ ಎಲ್ಲರ ಕಣ್ಣಿದೆ.