Breaking
Tue. Dec 24th, 2024

ಕೋಟೆನಾಡು ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಮತದಾರರು ವಲಸಿಗರಿಗೆ ಮತ್ತು ಹೊಸ ಮುಖಗಳಿಗೆ ಮಣೆ…!

ಬೆಂಗಳೂರು, ಜೂನ್ 4 : ಚಿತ್ರದುರ್ಗದಲ್ಲಿ ಬಿಜೆಪಿ ಅಭ್ಯರ್ಥಿ ಗೋವಿಂದ ಕಾರಜೋಳ ಗೆಲುವು ಕಾಂಗ್ರೆಸ್ ಅಭ್ಯರ್ಥಿ ಚಂದ್ರಪ್ಪ ವಿರುದ್ಧ ಕಾರಜೋಳ ಜಯಭೇರಿ
ಚಿತ್ರದುರ್ಗದಲ್ಲಿ ಬಿಜೆಪಿ ಅಭ್ಯರ್ಥಿ ಭಾರಿ ಮುನ್ನಡೆ  ಹಿನ್ನೆಲೆ – ಮತ ಎಣಿಕೆ ಕೇಂದ್ರದಿಂದ ಹೊರ ನಡೆದ ‘ಕೈ’ ಅಭ್ಯರ್ಥಿ – ಮತ ಎಣಿಕೆ ಕೇಂದ್ರದಿಂದ ಹೊರ ನಡೆದ ಬಿ.ಎನ್.ಚಂದ್ರಪ್ಪ – 42510 ಮತಗಳ ಮುನ್ನಡೆ ಕಾಯ್ದುಕೊಂಡ ಕಾರಜೋಳ
ಚಿತ್ರದುರ್ಗ ಲೋಕಸಭಾ ಕ್ಷೇತ್ರದಲ್ಲಿ ನಡೆದ ಚುನಾವಣಾ ನೋಟ ಹೀಗಿದೆ – ಕೋಟೆನಾಡು ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಮತದಾರರು ವಲಸಿಗರಿಗೆ ಮತ್ತು ಹೊಸ ಮುಖಗಳಿಗೆ ಮಣೆ ಹಾಕುತ್ತ ಬಂದಿದ್ದಾರೆ. ಕಾಂಗ್ರೆಸ್ ಪಕ್ಷದ ಭದ್ರಕೋಟೆಯಾಗಿದ್ದ ಕ್ಷೇತ್ರದಲ್ಲಿ ಕಮಲ ಪಡೆ 2009 ಮತ್ತು 2019ರಲ್ಲಿ ಗೆದ್ದಿದೆ.
1996ರಲ್ಲಿ ಜೆಡಿಯು, 1999ರಲ್ಲಿ ಜೆಡಿಎಸ್ ಗೆದ್ದಿದ್ದು ಬಿಟ್ಟರೆ ಉಳಿದಂತೆ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳೇ ಇಲ್ಲಿ ಗೆದ್ದಿದ್ದಾರೆ. 1952ರಲ್ಲಿ ಕಾಂಗ್ರೆಸ್ ಪಕ್ಷದಿಂದ ಎಸ್ ನಿಜಲಿಂಗಪ್ಪ ಚಿತ್ರದುರ್ಗ ಕ್ಷೇತ್ರದ ಸಂಸದರಾಗಿದ್ದರು. ಬಳಿಕ ಕಾಂಗ್ರೆಸ್ ನಿಂದ 1971ರಲ್ಲಿ ಕೊಂಡಜ್ಜಿ ಬಸ್ಸಪ್ಪ, 1977 ಮತ್ತು 1980ರಲ್ಲಿ ಕೆ. ಮಲ್ಲಣ್ಣ, 1984ರಲ್ಲಿ ಕೆ ಹೆಚ್ ರಂಗನಾಥ್ ಗೆಲವು ಸಾಧಿಸಿದ್ದರೆ 1989, 1991ರಲ್ಲಿ ಸಿ ಪಿ ಮೂಡಲಗಿರಿಯಪ್ಪ ಗೆದ್ದು ಬೀಗಿದ್ದರು. 1996ರಲ್ಲಿ ಜನತಾದಳದಿಂದ ನಿವೃತ್ತ ಐಪಿಎಸ್ ಅಧಿಕಾರಿ ಪಿ ಕೋದಂಡರಾಮಯ್ಯ ಗೆದ್ದಿದ್ದರು.
1998ರಲ್ಲಿ ಕಾಂಗ್ರೆಸ್ ನಿಂದ ಸಿ ಪಿ ಮೂಡಲಗಿರಿಯಪ್ಪ ಮೂರನೇ ಬಾರಿ ಸಂಸದರಾಗಿದ್ದರು.  ಚಿತ್ರದುರ್ಗ ಎಸ್ಟಿ ಮೀಸಲು ಕ್ಷೇತ್ರದಲ್ಲಿ 1999ರಲ್ಲಿ ನಟ ಶಶಿಕುಮಾರ್ ಜೆಡಿಎಸ್ ನಿಂದ ಸಂಸದರಾಗಿ ಆಯ್ಕೆ ಆಗಿದ್ದರು. 2004ರಲ್ಲಿ ಕಾಂಗ್ರೆಸ್ ನಿಂದ ನಿವೃತ್ತ ನ್ಯಾ. ಎನ್ ವೈ ಹನುಮಂತಪ್ಪ ಸಂಸದರಾಗಿದ್ದರು. ಚಿತ್ರದುರ್ಗ ಎಸ್ಸಿ ಮೀಸಲು ಕ್ಷೇತ್ರದಲ್ಲಿ ವಿದೇಶದಿಂದ ಮರಳಿದ್ದ ಜನಾರ್ಧನಸ್ವಾಮಿ 2009ರಲ್ಲಿ ಬಿಜೆಪಿ ಸಂಸದರಾಗಿ ಗೆದ್ದು ಬೀಗಿದ್ದರು. 2014ರಲ್ಲಿ ಚಿಕ್ಕಮಗಳೂರು ಮೂಲದ ಬಿ ಎನ್ ಚಂದ್ರಪ್ಪ ಕಾಂಗ್ರೆಸ್ ನಿಂದ ಸಂಸದರಾಗಿದ್ದರು. 2019ರಲ್ಲಿ ಆನೇಕಲ್ ಮೂಲದ ಎ. ನಾರಾಯಣಸ್ವಾಮಿ ಬಿಜೆಪಿ ಸಂಸದರಾಗಿ ಆಯ್ಕೆ ಆಗಿದ್ದರು.
2024ರಲ್ಲಿ ಕಾಂಗ್ರೆಸ್ ಮೂರನೇ ಬಾರಿಗೆ ಬಿ ಎನ್ ಚಂದ್ರಪ್ಪಗೆ ಕಣಕ್ಕಿಳಿಸಿದೆ. ಬಿಜೆಪಿ ಹಾಲಿ ಸಂಸದ, ಕೇಂದ್ರ ಮಂತ್ರಿ ಎ. ನಾರಾಯಣಸ್ವಾಮಿಗೆ ಟಿಕೆಟ್ ತಪ್ಪಿಸಿ ಮಾಜಿ ಡಿಸಿಎಂ, ಬಾಗಲಕೋಟೆಯ ಮುಧೋಳ ಮೂಲದ ಗೋವಿಂದ ಕಾರಜೋಳ್ ಗೆ ಕಣಕ್ಕಿಳಿಸಿದೆ. ಚಿತ್ರದುರ್ಗ ಲೋಕಸಭೆ ಕ್ಷೇತ್ರ ತುಮಕೂರು ಜಿಲ್ಲೆಯ ಶಿರಾ ಮತ್ತು ಪಾವಗಡ ವಿಧಾನಸಭೆ ಕ್ಷೇತ್ರಗಳನ್ನೊಳಗೊಂಡಿದೆ. ಚಿತ್ರದುರ್ಗ ಲೋಕಸಭೆ ಕ್ಷೇತ್ರ ವ್ಯಾಪ್ತಿಯ ಒಟ್ಟು 8 ವಿಧಾನಸಭೆ ಕ್ಷೇತ್ರಗಳ ಪೈಕಿ 2013ರಲ್ಲಿ 5 ಕಾಂಗ್ರೆಸ್ , 1 ಜೆಡಿಎಸ್, 1 ಬಿಜೆಪಿ, 1 ಬಿಎಸ್ ಆರ್ ಪಕ್ಷ ಗೆದ್ದಿತ್ತು. 
2014ರ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಅನಾಯಾಸವಾಗಿ ಗೆಲುವು ಸಾಧಿಸಿತ್ತು. 2019ರ ಲೋಕಸಭೆ ಚುನಾವಣೆ ವೇಳೆಗೆ ಪರಿಸ್ಥಿತಿ ಬದಲಾಗಿತ್ತು. 2018ರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ 5, ಕಾಂಗ್ರೆಸ್ 2, ಜೆಡಿಎಸ್ 1 ಕ್ಷೇತ್ರದಲ್ಲಿ ಗೆಲುವು ಸಾಧಿಸಿತ್ತು. 2019ರ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಇದ್ದರೂ ಸಹ ಬಿಜೆಪಿ ಸುಲಭ ಗೆಲುವು ಸಾಧಿಸಿತ್ತು. 2023ರ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ 7ಕ್ಷೇತ್ರದಲ್ಲಿ ಗೆಲುವು ಸಾಧಿಸಿದ್ದರೆ ಬಿಜೆಪಿ ಕೇವಲ 1ಸ್ಥಾನದಲ್ಲಿ ಗೆದ್ದಿದೆ.
ಕಾಂಗ್ರೆಸ್ ಪಕ್ಷಕ್ಕೆ ಶಾಸಕರ ಪ್ರಬಲ ಬಲದ ಜತೆಗೆ ಗ್ಯಾರಂಟಿ ಯೋಜನೆಗಳ ಬಲವಿದೆ. ಬಿಜೆಪಿಗೆ ಮೋದಿ ನಾಮವೇ ಶಕ್ತಿಯಾಗಿದೆ. ಅಂತಿಮವಾಗಿ ಕೋಟೆನಾಡಿನ ಮತದಾರರು ಯಾರ ಪರ ಒಲವು ತೋರಿದ್ದಾರೆಂಬುದು ಜೂನ್ 4ಕ್ಕೆ ಫೈನಲ್ ಆಗಲಿದೆ. ಅಂದಹಾಗೆ ಚಿತ್ರದುರ್ಗ ಎಸ್ಸಿ ಮೀಸಲು ಲೋಕಸಭಾ ಕ್ಷೇತ್ರದಲ್ಲಿ ಒಟ್ಟು 18,41,937 ಮತದಾರರಿದ್ದು ಏಪ್ರಿಲ್ 26 ಶುಕ್ರವಾರದಂದು ನಡೆದಿದ್ದ ಮೊದಲ ಹಂತದ ಮತದಾನದಲ್ಲಿ ಶೇಕಡಾ 72.74 ಪ್ರಮಾಣದ ಮತದಾನವಾಗಿತ್ತು.

Related Post

Leave a Reply

Your email address will not be published. Required fields are marked *