ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕ್ಯಾಬಿನೆಟ್ ನಿನ್ನೆ ಸಭೆ ನಡೆಸಿದೆ. ಮಂಗಳವಾರ ಲೋಕಸಭೆ ಚುನಾವಣೆ ಫಲಿತಾಂಶ ಪ್ರಕಟವಾಗಿದ್ದು, ಯಾವುದೇ ಪಕ್ಷಕ್ಕೂ ಬಹುಮತ ಸಿಕ್ಕಿಲ್ಲ. ಈ ನಡುವೆ ಇಂದು ಬೆಳಗ್ಗೆ ನರೇಂದ್ರ ಮೋದಿಯವರು ತಮ್ಮ ರಾಜೀನಾಮೆ ಪತ್ರವನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಸಲ್ಲಿಸಿದ್ದಾರೆ. ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ 17ನೇ ಲೋಕಸಭೆಯನ್ನು ತಕ್ಷಣದಿಂದ ಜಾರಿಗೆ ಬರುವಂತೆ ವಿಸರ್ಜಿಸುವಂತೆ ಸಲಹೆ ನೀಡಿದೆ ಎಂದು ರಾಷ್ಟ್ರಪತಿ ಭವನ ತಿಳಿಸಿದೆ.
ಪ್ರಸ್ತುತ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸಚಿವ ಸಂಪುಟದ ಸಲಹೆಯ ಮೇರೆಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು 17ನೇ ಲೋಕಸಭೆಯನ್ನು ಇಂದು ವಿಸರ್ಜಿಸಿದ್ದಾರೆ ಎಂದು ರಾಷ್ಟ್ರಪತಿ ಭವನದ ಪ್ರಕಟಣೆ ತಿಳಿಸಿದೆ. ಈಗಾಗಲೇ ಎನ್ಡಿಎ ಒಕ್ಕೂಟ ಸಭೆ ನಡೆಸಿದ್ದು, ಒಕ್ಕೊರಲಿನಿಂದ ನರೇಂದ್ರ ಮೋದಿಯವರನ್ನೇ ಪ್ರಧಾನಿ ಅಭ್ಯರ್ಥಿಯಾಗಿ ಘೋಷಿಸಿದ್ದಾರೆ.
ರಾಷ್ಟ್ರಪತಿಗಳು ಇಂದು ಮೋದಿಯ ಸಚಿವ ಸಂಪುಟದ ಸಲಹೆಯನ್ನು ಅಂಗೀಕರಿಸಿದ್ದಾರೆ. ಸಂವಿಧಾನದ 85ನೇ ವಿಧಿಯ ಕಲಂ (2) ರ ಉಪ-ಕಲಂ (ಬಿ) ಮೂಲಕ ಅವರಿಗೆ ನೀಡಲಾದ ಅಧಿಕಾರವನ್ನು ಚಲಾಯಿಸುವ ಮೂಲಕ 17ನೇ ಲೋಕಸಭೆಯನ್ನು ವಿಸರ್ಜಿಸುವ ಆದೇಶಕ್ಕೆ ಸಹಿ ಹಾಕಿದ್ದಾರೆ. ಪ್ರಸಕ್ತ ಲೋಕಸಭೆಯ ಅವಧಿ ಜೂನ್ 16ಕ್ಕೆ ಕೊನೆಗೊಳ್ಳಬೇಕಿತ್ತು. ಆದರೆ, ಇಂದೇ ಲೋಕಸಭೆಯನ್ನು ವಿಸರ್ಜಿಸಲಾಗಿದೆ. ಜೂನ್ 7ಕ್ಕೆ ಹೊಸ ಸಚಿವ ಸಂಪುಟ ರಚನೆಯಾಗಲಿದ್ದು, 3ನೇ ಅವಧಿಗೆ ಪ್ರಧಾನಿಯಾಗಿ ನರೇಂದ್ರ ಮೋದಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ.
ಇಂದು ಮುಂಜಾನೆ, ಮೋದಿ ತಮ್ಮ ರಾಜೀನಾಮೆಯನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಸಲ್ಲಿಸಿದ್ದರು. ಅವರು ಅದನ್ನು ಅಂಗೀಕರಿಸಿದ್ದಾರೆ. ಹೊಸ ಸರ್ಕಾರ ಅಧಿಕಾರ ವಹಿಸಿಕೊಳ್ಳುವವರೆಗೆ ಹಾಲಿ ಪ್ರಧಾನಿಯನ್ನು ಮುಂದುವರಿಸುವಂತೆ ಮನವಿ ಮಾಡಿದ್ದಾರೆ.
ಜೂನ್ 7 ರಂದು ಮುಂದಿನ ಸರ್ಕಾರ ರಚನೆಯಾಗಲಿದೆ. 2014 ಮತ್ತು 2019ಕ್ಕೆ ಹೋಲಿಸಿದರೆ ಕ್ಷೀಣಿಸಿದ ಸಂಖ್ಯೆಗಳ ಹೊರತಾಗಿಯೂ, ಬುಧವಾರ ಸಂಜೆ ಆಡಳಿತಾರೂಢ ಎನ್‌ಡಿಎ ಮೈತ್ರಿಕೂಟದ ಸಭೆಯ ನಂತರ ಪ್ರಧಾನಿ ಮೋದಿ ಮುಂದಿನ ಸರ್ಕಾರವನ್ನು ರಚಿಸಲು ಹಕ್ಕು ಸಾಧಿಸಿದ್ದಾರೆ. ಮೋದಿ ಅವರು ಐತಿಹಾಸಿಕ ಮೂರನೇ ಅವಧಿಗೆ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸುವ ಸಾಧ್ಯತೆಯಿದೆ. ಈ ಹಿಂದೆ ದಿವಂಗತ ಪ್ರಧಾನಿ ಪಂಡಿತ್ ಜವಾಹರಲಾಲ್ ನೆಹರು ಕೂಡ 3 ಅವಧಿಗೆ ಪ್ರಧಾನಿಯಾಗಿದ್ದರು. ಅವರ ಬಳಿಕ ಆ ಹೆಗ್ಗಳಿಕೆ ನರೇಂದ್ರ ಮೋದಿಯವರಿಗೆ ಸಲ್ಲುತ್ತದೆ.
ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ 543 ಸದಸ್ಯರ ಲೋಕಸಭೆ ಕ್ಷೇತ್ರಗಳಲ್ಲಿ ಎನ್‌ಡಿಎ 293 ಸ್ಥಾನಗಳನ್ನು ಗೆದ್ದಿದ್ದರೆ, ವಿರೋಧ ಪಕ್ಷವಾದ ಇಂಡಿಯಾ ಬ್ಲಾಕ್ 232 ಸ್ಥಾನಗಳನ್ನು ಹೊಂದಿದೆ. ಕೇಂದ್ರದಲ್ಲಿ ಸರ್ಕಾರ ರಚಿಸಲು ಕನಿಷ್ಠ 272 ಸ್ಥಾನಗಳ ಅಗತ್ಯವಿದೆ.