ವಿಶ್ವದಲ್ಲಿ ಜೂ.5 ವಿಶ್ವ ಪರಿಸರ ದಿನವನ್ನಾಗಿ 1973ರಿಂದಲೂ ಆಚರಿಸಿಕೊಂಡು ಬಂದಿದ್ದೇವೆ. ನಾವು ಎಲ್ಲೆಲ್ಲಿ ಪರಿಸರವನ್ನು ಕಾಪಾಡಿಕೊಳ್ಳಬೇಕಾಗಿದೆ ಎಂದರೆ ಯಾವುದೋ ಒಂದು ಕ್ಷೇತ್ರಕ್ಕೆ ಅದು ಸೀಮಿತವಾಗದೆ, ಪ್ರತಿವೊಂದರಲ್ಲಿಯೂ ಪರಿಸರವನ್ನು ಕಾಪಾಡಿಕೊಳ್ಳಬೇಕಾಗಿದೆ. ಆಗ ಮಾತ್ರ ಪರಿಸರ ದಿನಕ್ಕೆ ಅರ್ಥ ಬರಲು ಸಾಧ್ಯವಾಗುತ್ತದೆ. ಆದರೆ ಅದು ಸಾಧ್ಯವಾಗದ ಕಾರಣದಿಂದಲೇ ಪ್ರತಿವರ್ಷ ಅದರ ಬಗ್ಗೆ ಮಾತನಾಡಬೇಕಾಗಿದೆ.
ನಾವು ಪ್ರತಿ ಆಚರಣೆಯನ್ನು ಹಬ್ಬದಂತೆ ಆಚರಿಸಿ ಆ ದಿನಕ್ಕಷ್ಟೆ ಸೀಮಿತಗೊಳಿಸಿ ಮರೆತು ಬಿಡುತ್ತೇವೆ. ಇತ್ತೀಚೆಗಿನ ವರ್ಷಗಳಲ್ಲಿ ನಮ್ಮ ಆಚರಣೆಗಳೆಲ್ಲವೂ ಪ್ರಚಾರಕ್ಕಷ್ಟೆ ಸೀಮಿತವಾಗಿದೆ. ಮತ್ತು ಪ್ರಚಾರದ ಉದ್ದೇಶಕ್ಕಾಗಿಯೇ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಕೆಟ್ಟ ಪರಿಪಾಟವೂ ಕೆಲವೆಡೆ ಶುರುವಾಗಿದೆ. ಇದು ಎಲ್ಲೋ ಒಂದು ಕಡೆ ಮೂಲ ಉದ್ದೇಶಕ್ಕೆ ಮಾರಕವಾಗುತ್ತಿದೆ. ನಾವು ಏನೇ ಮಾಡಿದರೂ ಅದರಲ್ಲಿ ಬದ್ಧತೆ ಮತ್ತು ನಿಗದಿತ ಗುರಿ ಇಲ್ಲದೆ ಹೋದರೆ ಏನನ್ನೇ ಮಾಡಿದರೂ ಅದು ಫಲಪ್ರದವಾಗುವುದಿಲ್ಲ.
ಮನೆಗಳಿಂದಲೇ ಸ್ವಚ್ಛ ಪರಿಸರ ನಿರ್ಮಾಣವಾಲಿ ಇವತ್ತು ಪರಿಸರ ದಿನವನ್ನು ಅದ್ಧೂರಿಯಾಗಿ ಆಚರಿಸಿ ಕಸವನ್ನೆಲ್ಲ ಅಲ್ಲಿಯೇ ಬಿಟ್ಟು ಹೋದರೆ ಪರಿಸರ ದಿನದ ಆಚರಣೆ ಮಾಡಿ ಏನು ಪ್ರಯೋಜನ? ಪರಿಸರ ದಿನದಂದು ಮಾತ್ರ ಪರಿಸರ ಕಾಳಜಿ ತೋರಿ ಒಂದೆರಡು ಕಡೆಗಳಲ್ಲಿ ಕಸಗಳನ್ನು ಆಯ್ದು ಫೋಟೋ ತೆಗಿಸಿಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ಹರಿದು ಬಿಟ್ಟ ತಕ್ಷಣ ಸ್ವಚ್ಛ ಪರಿಸರ ನಿರ್ಮಾಣವಾಗುವುದಿಲ್ಲ. ಸ್ವಚ್ಛ ಪರಸರ ನಿರ್ಮಾಣ ಮಾಡಬೇಕಾದರೆ ಅದು ತಮ್ಮ, ತಮ್ಮ ಮನೆಗಳಿಂದಲೇ ಆರಂಭವಾಗಬೇಕಾಗಿದೆ. ಮತ್ತು ಪ್ರತಿ ಕ್ಷಣ, ಪ್ರತಿ ದಿನವೂ ಮಾಡುತ್ತಿರಲೇ ಬೇಕಾಗಿದೆ.
ಇತ್ತೀಚೆಗಿನ ವರ್ಷಗಳಲ್ಲಿ ಸ್ವಚ್ಛತೆ ಬಗ್ಗೆ ಸ್ವಲ್ಪ ಕಾಳಜಿ ಜನವಲಯದಲ್ಲಿ ಬಂದಿದೆ. ಮೊದಲಿಗೆ ಹೋಲಿಸಿದರೆ ಈಗ ಅದಕ್ಕೊಂದು ಹೊಸ ರೂಪ ಬಂದಿದೆ. ಕಸವನ್ನು ಎಲ್ಲೆಂದರಲ್ಲಿ ಎಸೆಯದೆ ಕಸದ ಬುಟ್ಟಿಯಲ್ಲಿ ಹಾಕಬೇಕೆಂಬ ಮನೋಸ್ಥಿತಿ ಬಂದಿದೆ. ಇದಕ್ಕಾಗಿ ಬಹಳಷ್ಟು ಅರಿವು ಮೂಡಿಸುವ ಕೆಲಸವಾಗಿದೆ. ನಾವು ನಮ್ಮ ಮನೆ ಮತ್ತು ಸುತ್ತಮುತ್ತ ಸ್ವಚ್ಛತೆಯನ್ನು ಕಾಪಾಡಿಕೊಂಡರೆ ಸುಂದರ ಪರಿಸರ ನಿರ್ಮಾಣ ಸಾಧ್ಯವಾಗುತ್ತದೆ ಎಂಬುದರಲ್ಲಿ ಎರಡು ಮಾತಿಲ್ಲ.
ಕಸ ವಿಲೇವಾರಿಯೇ ಬಹುದೊಡ್ಡ ಸಮಸ್ಯೆ : ಈಗಾಗಲೇ ಡಬ್ಲ್ಯೂಇಡಿ ಪರಿಸರ ಸಂರಕ್ಷಣೆಗಾಗಿ ಜಾಗೃತಿ ಮತ್ತು ಕ್ರಮವನ್ನು ಹಲವು ರೀತಿಯಲ್ಲಿ ಉತ್ತೇಜಿಸುತ್ತಿದೆ. ಇದಕ್ಕೆ ಸರ್ಕಾರ, ಸರ್ಕಾರೇತರ ಸಂಸ್ಥೆಗಳು, ಖಾಸಗಿ ಸಂಸ್ಥೆಗಳು ಕೈಜೋಡಿಸುತ್ತಾ ಬಂದಿವೆ. ಇದರ ಪರಿಣಾಮವಾಗಿ ಹಲವು ಪರಸರ ಸಂರಕ್ಷಣಾ ಕೆಲಸಗಳು ನಡೆದಿವೆ ಎನ್ನುವುದನ್ನು ತಳ್ಳಿಹಾಕಲಾಗದು. ಇಲ್ಲಿ ಮುಖ್ಯವಾಗಿ ನಾವು ಪರಿಸರ ಕಾಪಾಡುವ ಕೆಲಸಕ್ಕೆ ಹೆಚ್ಚಿನ ಒತ್ತು ನೀಡಿದ್ದೇ ಆದರೆ ಪರಿಸರ ತನ್ನಿಂದ ತಾನೆ ಶುಚಿಯಾಗಲಿದೆ. ಆಧುನಿಕತೆ ಹೆಚ್ಚಾದಂತೆಲ್ಲ ಗ್ಯಾಜೆಟ್ ಗಳ ತ್ಯಾಜ್ಯ, ಪ್ಲಾಸ್ಟಿಕ್ ಎಲ್ಲವೂ ಸಮಸ್ಯೆಯಾಗಿ ಪರಿಣಮಿಸಿದೆ. ಇವು ವಿಶ್ವದ ಸಮಸ್ಯೆಯಾಗಿ ಮುಂದೆ ಪರಿಣಮಿಸಿದರೂ ಅಚ್ಚರಿಯಿಲ್ಲ. ಇತ್ತೀಚೆಗಿನ ದಿನಗಳಲ್ಲಿ ಗ್ರಾಮೀಣ ಪ್ರದೇಶಗಳಲ್ಲಿ ಕಸವಿಲೇವಾರಿಗಳು ಗ್ರಾಮಪಂಚಾಯಿತಿಗಳಿಗೆ ಸಮಸ್ಯೆಯಾಗಿ ಪರಿಣಮಿಸಿದೆ. ಕಸ ವಿಲೇವಾರಿ ಗ್ರಾಮೀಣ ಪ್ರದೇಶದಿಂದ ನಗರ ಪ್ರದೇಶಗಳವರೆಗೆ ಒಂದು ಸಮಸ್ಯೆಯಾಗಿಯೇ ಮುಂದುವರೆದಿದೆ. ಕಸದ ರಾಶಿಗಳ ವಿಲೇವಾರಿ ಸಮಸ್ಯೆಯೇ ಸುಂದರ ಪರಿಸರ ನಿರ್ಮಾಣಕ್ಕೆ ಧಕ್ಕೆಯಾಗಿದೆ.
ಒಂದೇ ಭೂಮಿ ವಿಷಯದೊಂದಿಗೆ ಆಚರಣೆ ಶುರು ಜಗತ್ತಿನಲ್ಲಿ ಒಂದೊಳ್ಳೆಯ ಪರಿಸರವನ್ನು ನಿರ್ಮಾಣ ಮಾಡುವ ಸಲುವಾಗಿ ಜಾರಿಗೆ ತರಲಾದ ಪರಿಸರ ದಿನಾಚರಣೆಯಿಂದ ಜಾಗೃತಿ ಮೂಡಿದೆ. ಮೊದಲಿಗೆ ಇದು ಅಧಿಕ ಜನಸಂಖ್ಯೆ, ಜಾಗತಿಕ ತಾಪಮಾನ ಏರಿಕೆ, ಸುಸ್ಥಿರ ಅಭಿವೃದ್ಧಿ ಮತ್ತು ವನ್ಯಜೀವಿ ಅಪರಾಧಗಳಂತಹ ಪರಿಸರ ಸಮಸ್ಯೆಗಳ ಬಗ್ಗೆ ಜಾಗೃತಿ ಮೂಡಿಸುವ ವೇದಿಕೆಯಾಗಿ ಆರಂಭವಾಯಿತು.
ಇದು ಭಾರತದಲ್ಲಿ ಮಾತ್ರವಲ್ಲದ ವಿಶ್ವದ 143 ದೇಶಗಳಲ್ಲಿ ಆಚರಣೆ ನಡೆಯುತ್ತಿದೆ. ಇತಿಹಾಸವನ್ನು ಕೆದಕಿ ನೋಡಿದರೆ ವಿಶ್ವ ಪರಿಸರ ದಿನವನ್ನು 1972 ರಲ್ಲಿ ವಿಶ್ವಸಂಸ್ಥೆಯು ಮಾನವ ಪರಿಸರದ ಸ್ಟಾಕ್ ಹೋಮ್ ಸಮ್ಮೇಳನದಲ್ಲಿ (5-16 ಜೂನ್ 1972) ಆಚರಣೆಗೆ ತರಲಾಯಿತು. ಅವತ್ತು ಮಾನವನ ಪರಸ್ಪರ ಕ್ರಿಯೆಗಳು ಮತ್ತು ಪರಿಸರದ ಏಕೀಕರಣದ ಚರ್ಚೆಗಳಿಂದ ಇದರ ಕಲ್ಪನೆ ಹುಟ್ಟಿಕೊಂಡಿತ್ತು. ಆದಾದ ಒಂದು ವರ್ಷದ ಬಳಿಕ ಅಂದರೆ 1973 ರಲ್ಲಿ ಮೊದಲಿಗೆ ಡಬ್ಲೂಇಡಿ ಒಂದೇ ಭೂಮಿ ಎಂಬ ವಿಷಯದೊಂದಿಗೆ ಆಚರಣೆಗೆ ಮುನ್ನುಡಿ ಬರೆಯಿತು.
ಒಂದೊಳ್ಳೆಯ ಪರಿಸರ ಏಕೆ ಬೇಕು? ;ಇವತ್ತು ನಮಗೆಲ್ಲರಿಗೂ ಪರಿಸರದ ಅರಿವಿದೆ. ಒಂದೊಳ್ಳೆಯ ಪರಿಸರ ಏಕೆ ಬೇಕು ಎಂಬುದು ಗೊತ್ತಿದೆ. ನಿಸರ್ಗ ಪರಿಸರ ನಮಗೆ ನೆಮ್ಮದಿ ಕೊಡುವ ತಾಣವಾಗುತ್ತಿದೆ. ಅವುಗಳನ್ನು ಹುಡುಕಿಕೊಂಡು ಅದರ ಮಡಿಲಲ್ಲಿ ಒಂದಷ್ಟು ದಿನ ಕಳೆದು ಬರುವ ಪರಿಪಾಠ ಆರಂಭವಾಗಿದೆ. ಮನುಷ್ಯ ಕಾಲಿಟ್ಟಲ್ಲಿ ನಿಸರ್ಗದ ಸುಂದರ ಪರಿಸರವೂ ಹಾಳಾಗುತ್ತಿದೆ. ಇದಕ್ಕೆ ಕಾರಣ ನಾವು ನಮ್ಮೊಂದಿಗೆ ಕೊಂಡೊಯ್ಯುವ ಪದಾರ್ಥಗಳನ್ನು ಎಸೆದು ಬರುತ್ತಿದ್ದೇವೆ.
ನಿಸರ್ಗ ನಿರ್ಮಿತ ಪರಿಸರಗಳಲ್ಲಿ ನಮ್ಮದೇನು ಹೆಚ್ಚುವರಿ ಕಾರ್ಯಗಳಿಲ್ಲ. ಅಲ್ಲಿ ನಾವು ಪರಿಸರಕ್ಕೆ ವಿರುದ್ಧವಾದ ಕಾರ್ಯಗಳನ್ನು ಮಾಡದಿದ್ದರೆ ಅದೇ ನಾವು ಮಾಡುವ ದೊಡ್ಡ ಉಪಕಾರವಾಗುತ್ತದೆ. ಇವತ್ತು ಪರಿಸರ ನಾಶಕ್ಕೆ ನಾವೇ ಕಾರಣವಾಗಿದ್ದೇವೆ. ಅಭಿವೃದ್ಧಿ ಹೆಸರಿನಲ್ಲಿ ನಾವು ಪರಿಸರಕ್ಕೆ ಬೇಕಾದಷ್ಟು ಅನ್ಯಾಯಗಳನ್ನು ಮಾಡಿದ್ದೇವೆ. ನೀರನ್ನು ಮಲೀನ ಮಾಡಿದ್ದೇವೆ. ಈ ಭೂಮಿಗೆ ನಾವು ನಮಗೆ ಗೊತ್ತಿಲ್ಲದಂತೆ ಒಂದಲ್ಲ ಒಂದು ರೀತಿಯಲ್ಲಿ ದ್ರೋಹ ಬಗೆಯುತ್ತಲೇ ಬಂದಿದ್ದೇವೆ.
ಪರಿಸರಕ್ಕೆ ಅಳಿಲು ಸೇವೆ ಮಾಡೋಣ : ಇನ್ನಾದರೂ ನಾವು ಸ್ವಚ್ಛತೆಗೆ ಆದ್ಯತೆ ನೀಡಿ, ನಿಸರ್ಗ ನಿರ್ಮಿತ ಸ್ಥಳಗಳಲ್ಲಿ ಕಸಗಳನ್ನು ಎಸೆಯದೆ, ಮರಗಿಡಗಳನ್ನು ನೆಟ್ಟು ಬೆಳೆಸದಿದ್ದರೂ ಈಗಾಗಲೇ ಬೆಳೆದು ನಿಂತ ಗಿಡಗಳನ್ನು ಕಡಿಯದೆ ಕಾಪಾಡಿಕೊಳ್ಳಬೇಕಿದೆ, ಪ್ಲಾಸ್ಟಿಕ್ ಬಳಕೆಯನ್ನು ಆದಷ್ಟು ದೂರ ಮಾಡಿ ಪರಿಸರ ಸ್ನೇಹಿ ವಸ್ತುಗಳಿಗೆ ಆದ್ಯತೆ ನೀಡೋಣ. ನಿಜ ಹೇಳಬೇಕೆಂದರೆ ಪರಿಸರದ ಸಂರಕ್ಷಣೆ ಪ್ರತಿಯೊಬ್ಬರಿಂದಲೂ ಸಾಧ್ಯವಿದೆ. ಅದನ್ನು ನಮ್ಮ, ನಮ್ಮ ಮನೆಗಳಿಂದಲೇ ಆರಂಭಿಸೋಣ… ಆ ಮೂಲಕ ಈ ಪರಿಸರಕ್ಕೊಂದು ಅಳಿಲು ಸೇವೆ ಸದಾ ಸಲ್ಲಿಸುತ್ತಿರೋಣ.