ಉಡುಪಿ, ಜೂನ್ 07: ಉಡುಪಿ ಜಿಲ್ಲೆಯ ಮಣಿಪಾಲದಲ್ಲಿ ವಿದ್ಯಾರ್ಥಿಗಳಿಗೆ ಗಾಂಜಾ ಪೂರೈಕೆ ಮಾಡುತ್ತಿದ್ದ ಆರೋಪಿಯನ್ನು ಮಣಿಪಾಲ ಪೊಲೀಸರು ಬಂಧಿಸಿದ್ದಾರೆ. ಕೇರಳ ಮೂಲದ ವಿದ್ಯಾರ್ಥಿ ಸಿದ್ದಾರ್ಥ್ ಬಂಧಿತ ಆರೋಪಿ ಎಂದು ಗುರುತಿಸಲಾಗಿದೆ.
ಕೇರಳ ಮೂಲದ ವಿದ್ಯಾರ್ಥಿ ಸಿದ್ದಾರ್ಥ್ ಮಣಿಪಾಲ ಹೆರ್ಗದ ಅಪಾರ್ಟ್ಮೆಂಟ್ ಒಂದರಲ್ಲಿ ವಾಸವಿದ್ದನು. ತಮಿಳುನಾಡಿನಿಂದ ಗಾಂಜಾ ಖರೀದಿಸಿ ಮಾರಾಟ ಮಾಡುತ್ತಿದ್ದ ಆರೋಪಿ, ಇಲ್ಲಿನ ವಿದ್ಯಾರ್ಥಿಗಳನ್ನೇ ಟಾರ್ಗೆಟ್ ಮಾಡಿಕೊಂಡು ಗಾಂಜಾ ಪೂರೈಕೆ ಮಾಡುತ್ತಿದ್ದ ಎನ್ನಲಾಗಿದೆ. ಮಣಿಪಾಲದಲ್ಲಿ ವಿದ್ಯಾಭ್ಯಾಸ ಮಾಡಿಕೊಂಡಿದ್ದ ಈತ ಇತರ ವಿದ್ಯಾರ್ಥಿಗಳ ಸ್ನೇಹ ಬೆಳೆಸಿ ಅವರಿಗೆ ಗಾಂಜಾ ಪೂರೈಕೆ ಮಾಡುತ್ತಿದ್ದ ಎನ್ನುವ ಆರೋಪ ಕೇಳಿಬಂದಿದೆ.
ಖಚಿತ ಮಾಹಿತಿ ಮೇರೆಗೆ ಮಣಿಪಾಲ ಹೆರ್ಗದ ಅಪಾರ್ಟ್ಮೆಂಟ್ ಮೇಲೆ ದಾಳಿ ನಡೆಸಿದ ಮಣಿಪಾಲ ಪೊಲೀಸರು ಆರೋಪಿಯನ್ನು ಬಂಧಿಸಿ 20,000 ರೂಪಾಯಿ ಮೌಲ್ಯದ 388 ಗ್ರಾಂ ಗಾಂಜಾವನ್ನು ವಶಕ್ಕೆ ಪಡೆದಿದ್ದಾರೆ. ಹಾಗೂ ವ್ಯವಹಾರಕ್ಕೆ ಬಳಸುತ್ತಿದ್ದ 45,000 ಮೌಲ್ಯದ ಮೊಬೈಲ್ ಅನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಆರೋಪಿ ಬಿಳಿ ಬಣ್ಣದ ಹಾಳೆಯಲ್ಲಿ ಗಾಂಜಾ ತುಂಬಿಸಿ ವಿದ್ಯಾರ್ಥಿಗಳಿಗೆ ಮಾರಾಟ ಮಾಡಿ, ಒಂದು ರೋಲ್‌ನಿಂದ ಒಂದು ಸಾವಿರ ರೂಪಾಯಿ ಹಣ ಗಳಿಸುತ್ತಿದ್ದ. ಆರೋಪಿ ಬಳಿ ಸಿಗರೇಟ್ ಮಾದರಿಯ 43 ರೋಲ್‌ಗಳು ಪತ್ತೆಯಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ. ಸದ್ಯ ಮಣಿಪಾಲ ಪೊಲೀಸರು ಆರೋಪಿಯನ್ನು ಬಂಧಿಸಿದ್ದು ಕಾರ್ಯಾಚರಣೆ ಮುಂದುವರಿಸಿದ್ದಾರೆ.