ಹಾಸನ : ಇಡೀ ನಗರವನ್ನೇ ಬೆಚ್ಚಿ ಬೀಳಿಸಿದ್ದ ರವಿಕುಮಾರ್ ಅಲಿಯಾಸ್ ಚೈಲ್ಡ್ ರವಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿಗಳನ್ನು ರಂಗೋಲಿ ಹಳ್ಳದ ಪ್ರೀತಂ ಅಲಿಯಾಸ್ ಗುಂಡಿಪ್ರೀತು (27), ಕೀರ್ತಿ ಅಲಿಯಾಸ್ ಕಿರಿಕ್ ಕೀರ್ತಿ (26), ರಂಗನಾಥ್ ಅಲಿಯಾಸ್ ರಂಗ ಚೇತು (26) ಮತ್ತು ಅಮಿತ್ ಅಲಿಯಾಸ್ ಅಮ್ಮಿ (32) ಎಂದು ಗುರುತಿಸಲಾಗಿದೆ. ಯಾವ ಕಾರಣಕ್ಕೆ ಕೊಲೆ ನಡೆದಿದೆ ಎಂಬ ಬಗ್ಗೆ ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಮೊಹಮ್ಮದ್ ಸುಜೀತಾ ತಿಳಿಸಿದ್ದಾರೆ.
ಚೈಲ್ಡ್ ರವಿ ಮತ್ತು ಪ್ರೀತಂ ಇಬ್ಬರೂ ಒಂದು ಕಾಲದಲ್ಲಿ ಸ್ನೇಹಿತರಾಗಿದ್ದರು. ನಂತರದ ದಿನಗಳಲ್ಲಿ ಇಬ್ಬರ ನಡುವೆ ಗಲಾಟೆ ನಡೆದು ದೂರ ಆಗಿದ್ದರು. ಇತ್ತೀಚೆಗೆ ಚೈಲ್ಡ್ ರವಿ ಆಗಾಗ ಪ್ರೀತಂಗೆ ಕರೆ ಮಾಡಿ ಬೆದರಿಕೆ ಹಾಕುತ್ತಿದ್ದ ಎನ್ನಲಾಗಿದೆ.
ಇದೇ ಕಾರಣಕ್ಕೆ ರವಿ ಹತ್ಯೆ ನಡೆದಿದೆ ಎಂಬ ಮಾಹಿತಿ ಇದೆ ಎಂದು ಅವರು ತಿಳಿಸಿದ್ದಾರೆ. ಬಂಧಿತ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಪ್ರಕರಣ ಸಂಬಂಧ ಹೆಚ್ಚಿನ ತನಿಖೆ ನಡೆಯುತ್ತಿದೆ.