ರ‍್ಯಾಪರ್ ಚಂದನ್ ಶೆಟ್ಟಿ ಹಾಗೂ ನಿವೇದಿತಾ ಗೌಡ ಡಿವೋರ್ಸ್ ಸುದ್ದಿ ಇಂದು ಸಂಜೆ ವೇಳೆ ಭಾರೀ ಬಿರುಗಾಳಿಯನ್ನೇ ಎಬ್ಬಿಸಿತ್ತು. ಮೊದ ಮೊದಲು ಇದು ಸಿನಿಮಾ ಪ್ರಮೋಷನ್ ಎಂದುಕೊಂಡಿದ್ದವರಿಗೆ ದಂಪತಿ ಕೊನೆಗೂ ಶಾಕ್ ಕೊಟ್ಟರು.
ಹೌದು. ಚಂದನ್ ಹಾಗೂ ನಿವೇದಿತಾ ವಿಚ್ಛೇದನಕ್ಕಾಗಿ ಗುರುವಾರ ಶಾಂತಿನಗರದ ಫ್ಯಾಮಿಲಿ ಕೋರ್ಟ್ ಮೆಟ್ಟಿಲೇರಿದ್ದರು. ಈ ಬೆನ್ನಲ್ಲೇ ಎಲ್ಲರೂ ಹಾಜರಾಗಿದ್ದು, ಕೋರ್ಟ್ ವಿವೇಚನೆ ಕೂಡ ಮಂಜೂರು ಮಾಡಿದೆ. ಬಳಿಕ ಇಬ್ಬರೂ ಕೈ ಹಿಡಿದುಕೊಂಡು ಕೋರ್ಟ್‌ನಿಂದ ಹೊರ ನಡೆದಿದ್ದಾರೆ. ಇಷ್ಟೆಲ್ಲಾ ಆದರೂ ಈ ಸುದ್ದಿ ನಿಜವೋ ಸುಳ್ಳೋ ಎಂಬ ಗೊಂದಲ ಎಲ್ಲರಲ್ಲಿಯೂ ಮೂಡಿತು.
ಈ ನಡುವೆ ಸಂಜೆ ಇಬ್ಬರೂ ತಮ್ಮ ತಮ್ಮ ಸೋಶಿಯಲ್ ಮೀಡಿಯಾ ಖಾತೆಗಳಲ್ಲಿ ಡಿವೋರ್ಸ್ ವಿಚಾರವನ್ನು ಅಧಿಕೃತವಾಗಿ ಬಹಿರಂಗಪಡಿಸಿದ್ದಾರೆ. ಕಾನೂನು ಬದ್ಧವಾಗಿ ಪರಸ್ಪರ ಒಪ್ಪಂದದಿಂದ ಸಂಬಂಧವನ್ನು ಕೊನೆಗೊಳಿಸುವುದಾಗಿ ಹೇಳಲಾಗಿದೆ. ಈ ಮೂಲಕ ತಮ್ಮ 4 ವರ್ಷಗಳ ದಾಂಪತ್ಯಕ್ಕೆ ಬ್ರೇಕ್ ಹಾಕಿರುವುದು ನಿಜವಾಗಿದೆ.
ಚಂದನ್ ಶೆಟ್ಟಿ ಬರೆದಿದ್ದೇನು..?: ಇಂದು ನಾನು ಮತ್ತು ನಿವೇದಿತಾ ಮದುವೆಯಾಗಿ ನಾಲ್ಕು ವರ್ಷಗಳ ನಂತರ ಕಾನೂನುಬದ್ಧವಾಗಿ ಬೇರೆಯಾಗಲು ನಿರ್ಧರಿಸಿದ್ದೇವೆ. ನಮ್ಮ ಸ್ವಂತ ಸಂತೋಷ ಮತ್ತು ಬೆಳವಣಿಗೆಯ ಮೇಲೆ ಕೇಂದ್ರೀಕರಿಸುವುದು ಮುಖ್ಯ ಆಹಾರದ ಮೂಲಕ ನಾವು ನಮ್ಮ ಮದುವೆಯನ್ನು ಉತ್ತಮ ರೀತಿಯಲ್ಲಿ ಕೊನೆಗೊಳಿಸಬಹುದು.
ಈ ಕಷ್ಟದ ಸಮಯದಲ್ಲಿ ನಾವು ಮಾಧ್ಯಮಗಳು, ನಮ್ಮ ಸ್ನೇಹಿತರು ಮತ್ತು ಅಭಿಮಾನಿಗಳ ಬೆಂಬಲವನ್ನು ಕೇಳುತ್ತೇವೆ. ನಾವು ನಮ್ಮ ದಾರಿಯಲ್ಲಿ ಹೋಗುತ್ತಿದ್ದರೂ ಸಹ, ನಾವು ಪರಸ್ಪರ ಬಲವಾದ ಸ್ನೇಹ ಮತ್ತು ಗೌರವವನ್ನು ಹೊಂದಿದ್ದೇವೆ. ಈ ಸವಾಲಿನ ಸಮಯದಲ್ಲಿ ನಿಮ್ಮ ಬೆಂಬಲ ನಮ್ಮಿಬ್ಬರ ಮೇಲಿರಲಿ ಎಂದು ಬರೆದುಕೊಂಡಿದ್ದಾರೆ.
ಇದೇ ರೀತಿ ನಿವೇದಿತಾ ಕೂಡ ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಬರೆದುಕೊಂಡಿದ್ದಾರೆ. ಸದ್ಯ ಇಬ್ಬರ ಡಿವೋರ್ಸ್ ವಿಚಾರ ಅಭಿಮಾನಿಗಳಂತೂ ಶಾಕ್ ತಂದಿದ್ದು, ಈ ಕುರಿತು ಭಾರೀ ಚರ್ಚೆಯಾಗುತ್ತಿದೆ. ಒಟ್ಟಿನಲ್ಲಿ ಪರಸ್ಪರ ಮಾತುಕತೆ ನಡೆಸಿ ಒಂದು ನಿರ್ಧಾರಕ್ಕೆ ಬಂದಿರುವುದಂತೂ ಸತ್ಯ. ಈ ನಡುವೆ ಡಿವೋರ್ಸ್ ಆದರೂ ಬಲವಾದ ಸ್ನೇಹ ಮತ್ತು ಗೌರವವನ್ನು ಹೊಂದಿರಬಹುದು. ಇದಕ್ಕೆ ಸಾಕ್ಷಿಯಾಗಿ ಕೋರ್ಟ್ ನಿಂದ ಇಬ್ಬರೂ ಕೈಕೈ ಹಿಡಿದುಕೊಂಡೇ ತೆರಳಿದ್ದಾರೆ.