Breaking
Tue. Dec 24th, 2024

ವ್ಯಕ್ತಿಯೊಬ್ಬರನ್ನು ಆರೋಪಿ ಮನೆಯಲ್ಲೇ ತುಂಡುತುಂಡಾಗಿ ಕತ್ತರಿಸಿ ಹತ್ಯೆ….!

ಬೆಂಗಳೂರಿ‌ನಲ್ಲೊಂದು ಬೀಭತ್ಸ ಕೊಲೆ  ಪ್ರಕರಣ ಬೆಳಕಿಗೆ ಬಂದಿದೆ. ವ್ಯಕ್ತಿಯೊಬ್ಬರನ್ನು ಆರೋಪಿ ಮನೆಯಲ್ಲೇ ತುಂಡುತುಂಡಾಗಿ ಕತ್ತರಿಸಿ ಹತ್ಯೆ ಮಾಡಿದ್ದಲ್ಲದೆ, ಮೃತದೇಹದ ಭಾಗಗಳನ್ನು ಬೇರೆ ಬೇರೆ ಮೋರಿಗೆ ಎಸೆದು ಸಾಕ್ಷ್ಯ ನಾಶ ಮಾಡಲಾಗಿದೆ. ಮೃತದೇಹದ ಪತ್ತೆಗೆ ನುರಿತ ತಜ್ಞರನ್ನು ಕರೆಸಿಕೊಂಡರೂ ಉಪಯೋಗವಾಗಿಲ್ಲ. ಮೂರು ದಿನಗಳಿಂದ ಹುಡುಕಿದರೂ ಮೃತದೇಹ ಇನ್ನೂ ಪತ್ತೆಯಾಗಿಲ್ಲ. ಬೆಂಗಳೂರಿನ ರಾಮಮೂರ್ತಿನಗರ ಪೊಲೀಸ್ ಠಾಣಾ  ವ್ಯಾಪ್ತಿಯಲ್ಲಿ ಈ ಕೃತ್ಯ ಎಸಗಲಾಗಿದೆ. ಕೊಲೆಯಾದ ದುರ್ದೈವಿ ಕೆವಿ ಶ್ರೀಕಾಂತ್ (34) ಎಂಬುದು ತಿಳಿದುಬಂದಿದೆ. ಮಾಧವ ರಾವ್ ಎಂಬಾತನೇ ಕೊಲೆ ಆರೋಪಿಯಾಗಿದ್ದು, ಸಂಪಿಗೆಹಳ್ಳಿ ಪೊಲೀಸರು ಭಯಾನಕ ಕೊಲೆಯ ಕೃತ್ಯವನ್ನು ಬಯಲಿಗೆಳೆದಿದ್ದಾರೆ.
ಬಸವೇಶ್ವರನಗರದಲ್ಲಿರುವ ಮಾರ್ಗದರ್ಶಿ ಚೀಟ್ ಫಂಡ್ನಲ್ಲಿ ಡೆವಲಪ್ಮೆಂಟ್ ಆಫೀಸರ್ ಆಗಿದ್ದ ಶ್ರೀಕಾಂತ್, ಥಣಿಸಂದ್ರದ ಅಂಜನಾದ್ರಿ ಲೇಔಟ್ನಲ್ಲಿ ವಾಸವಿದ್ದರು. ಮೇ 28ರ ಬೆಳಗ್ಗೆ ಮನೆಯಿಂದ ಹೊರಹೋಗಿದ್ದ ಶ್ರೀಕಾಂತ್ ಮನೆಗೆ ವಾಪಸ್ ಆಗಿಲ್ಲ. ಶ್ರೀಕಾಂತ್ ನಾಪತ್ತೆ ಬಗ್ಗೆ ಮೇ 29ರಂದು ಸಂಪಿಗೆಹಳ್ಳಿ ಪೊಲೀಸ್ ಠಾಣೆಗೆ ಅವರ ಪತ್ನಿ ದೂರು ನೀಡಿದ್ದರು. ಈ ಪ್ರಕರಣದ ಬಗ್ಗೆ ತನಿಖೆ ನಡೆಸಿದ ಪೊಲೀಸರಿಗೆ ಶ್ರೀಕಾಂತ್ ಮೇ 28ರಂದು ಮಾಧವರಾವ್ ಮನೆಗೆ ಹೋಗಿರುವುದು ಪತ್ತೆಯಾಗಿತ್ತು.
ಕೆಆರ್ ಪುರಂನ ವಿಜಿನಪುರದಲ್ಲಿರುವ ಮಾಧವ ರಾವ್ ಮನೆಗೆ ಹೋಗಿರುವುದು ತಿಳಿದುಬಂದಿತ್ತು. ಮನೆಯ ಸಿಸಿಟಿವಿಯಲ್ಲಿ ಮಾಧವ ರಾವ್ ಮನೆಗೆ ಶ್ರೀಕಾಂತ್ ಪ್ರವೇಶಿಸಿರುವ ದೃಶ್ಯ ಸಿಕ್ಕಿತ್ತು. ಆದರೆ ಶ್ರೀಕಾಂತ್ ಮನೆಯಿಂದ ಹೊರಗೆ ಹೋಗುವುದು ರೆಕಾರ್ಡ್ ಆಗಿರಲಿಲ್ಲ. ಹೀಗಾಗಿ ಜೊತೆಗೆ ಮನೆಯ ಒಳಗಡೆ ಪರಿಶೀಲನೆ ಮಾಡಿದಾಗ ರಕ್ತದ ಕಲೆಗಳು ಪತ್ತೆಯಾಗಿದ್ದವು. ಬಳಿಕ ಮಾಧವ ರಾವ್ ಬಗ್ಗೆ ವಿಚಾರಿಸಿದಾಗ ಆತನೂ ನಾಪತ್ತೆಯಾಗಿರುವುದು ಗೊತ್ತಾಗಿತ್ತು.  ಬಳಿಕ ಆಂಧ್ರ ಪ್ರದೇಶದಲ್ಲಿ ಮಾಧವ ರಾವ್ ಪತ್ತೆ ಮಾಡಿ ಪೊಲೀಸರು ಕರೆತಂದಿದ್ದರು. ಪೊಲೀಸರ ವಿಚಾರಣೆ ವೇಳೆ ಮಾಧವ ರಾವ್ ಬಾಯ್ಬಿಟ್ಟಿದ್ದು, ನಡೆದ ವಿಚಾರ ತಿಳಿಸಿದ್ದಾನೆ.
ಎರಡು ವರ್ಷಗಳಿಂದ ಇತ್ತು ಪರಿಚಯ :  ಮಾಧವ ರಾವ್ ಮತ್ತು ಶ್ರೀಕಾಂತ್ಗೆ ಎರಡು ವರ್ಷಗಳಿಂದ ಪರಿಚಯ ಇತ್ತು. ಶ್ರೀಕಾಂತ್ ಬಳಿ ಮಾಧವರಾವ್ 5 ಲಕ್ಷ ರೂ. ಹಣದ ಚೀಟಿ ಹಾಕಿದ್ದ. ಈ ಚೀಟಿ ಹಣದ ವಿಚಾರಕ್ಕೆ ಇಬ್ಬರ ನಡುವೆ ಗಲಾಟೆ ನಡೆಯುತ್ತಿತ್ತು. ಚೀಟಿ ಹಣ ವಾಪಸ್ ಕೊಡುವಂತೆ ಮಾಧವ ರಾವ್ ಒತ್ತಾಯ ಮಾಡುತ್ತಿದ್ದ. ಇಷ್ಟೇ ಅಲ್ಲದೆ, ಮಾಧವ ರಾವ್ ಪತ್ನಿ ಜೊತೆ ಶ್ರೀಕಾಂತ್ಗೆ ಅಕ್ರಮ ಸಂಬಂಧ ಇತ್ತು ಎಂಬ ಆರೋಪಗಳೂ ಇವೆ.
ಮೇ 28ರಂದು ಬೆಳಗ್ಗೆ ಮಾಧವ ರಾವ್ ಮನೆಗೆ ಶ್ರೀಕಾಂತ್ ತೆರಳಿದ್ದ. ಈ ವೇಳೆ ಮನೆಯಲ್ಲಿ ಇಬ್ಬರಿಗೂ ಹಣದ ವಿಚಾರಕ್ಕೆ ಗಲಾಟೆ ಆಗಿದೆ. ಬಳಿಕ ಮಾಧವ ರಾವ್ ಮನೆಯಲ್ಲಿದ್ದ ಜಾಕ್, ರಾಡ್ನಿಂದ ಶ್ರೀನಾಥ್ ತಲೆಗೆ ಹೊಡೆದಿದ್ದ. ಕುಸಿದು ಬಿದ್ದ ಶ್ರೀಕಾಂತ್ ದೇಹವನ್ನು ಮಚ್ಚಿನಿಂದ ತುಂಡು ತುಂಡಾಗಿ ಕತ್ತರಿಸಿದ್ದ. ಸಾಕ್ಷಿ ನಾಶ ಮಾಡಲು ಶ್ರೀಕಾಂತ್ ಮೃತದೇಹವನ್ನು ಮೂರು ಪ್ಲಾಸ್ಟಿಕ್ ಚೀಲದಲ್ಲಿ ತುಂಬಿದ್ದ. ಬಳಿಕ ಮೊದಲಿಗೆ ಒಂದು ಬ್ಯಾಗ್, ನಂತರ ಎರಡು ಬ್ಯಾಗ್ಗಳಲ್ಲಿ ಮೃತದೇಹದ ತುಂಡುಗಳನ್ನು ಬೆಳತ್ತೂರು ಬಳಿಯ ಮೋರಿಯಲ್ಲಿ (ಪಿನಾಕಿನಿ ನದಿ) ಹಾಕಿದ್ದ.
ನಂತರ ತನ್ನ ಮೊಬೈಲ್ ಸ್ವಿಚ್ಡ್ ಆಫ್ ಮಾಡಿ ಶ್ರೀಕಾಂತ್ ಆಂಧ್ರ ಪ್ರದೇಶಕ್ಕೆ ಪರಾರಿಯಾಗಿದ್ದ.  ಸದ್ಯ ಪ್ರಕರಣ ರಾಮಮೂರ್ತಿನಗರ ಪೊಲೀಸ್ ಠಾಣೆಗೆ ವರ್ಗಾವಣೆಯಾಗಿದೆ. ಕೊಲೆ ಮಾಡಿದ ಸ್ಥಳ‌ ರಾಮಮೂರ್ತಿ ನಗರ ಠಾಣಾ ವ್ಯಾಪ್ತಿಗೆ ಬರುವ ಹಿನ್ನೆಲೆ ಈ ಕ್ರಮ ಕೈಗೊಳ್ಳಲಾಗಿದೆ. ರಾಮಮೂರ್ತಿನಗರ ಪೊಲೀಸರಿಂದ ಕೊಲೆ (302) ಮತ್ತು ಸಾಕ್ಷಿ ನಾಶ (201)ರಡಿ ಕೇಸ್ ದಾಖಲಾಗಿದೆ.
ಸದ್ಯ ರಾಮಮೂರ್ತಿನಗರ ಪೊಲೀಸರಿಂದ ಶ್ರೀಕಾಂತ್ ಮೃತದೇಹದ ತುಂಡುಗಳಿಗೆ ಹುಡುಕಾಟ ನಡೆದಿದೆ. ಕಳೆದ ಮೂರು ದಿನಗಳಿಂದ ಹುಡುಕಾಡುತ್ತಿದ್ದರೂ ಪ್ರಯೋಜನವಾಗಿಲ್ಲ. ಮೋರಿಯಲ್ಲಿ ಮೃತದೇಹದ ತುಂಡುಗಳು ಕೊಚ್ಚಿಕೊಂಡು ಹೋಗಿರುವ ಸಾಧ್ಯತೆ ಇದೆ. ಮೃತದೇಹ ಹುಡುಕಲು ಮಂಗಳೂರಿನಿಂದ ನುರಿತರನ್ನು ಕರೆಸಿದರೂ ಪ್ರಯೋಜನವಾಗಿಲ್ಲ.

Related Post

Leave a Reply

Your email address will not be published. Required fields are marked *