Breaking
Thu. Dec 26th, 2024

ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಹಗರಣದಲ್ಲಿ ಸಚಿವ ನಾಗೇಂದ್ರ  ಬೆನ್ನಲ್ಲೇ ಮತ್ತೊಬ್ಬ ಸಚಿವರ ಹೆಸರು

ಬೆಂಗಳೂರು, ಜೂನ್ 08 : ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ  ಬಹು ಕೋಟಿ ಹಣ ಅಕ್ರಮ ವರ್ಗಾವಣೆ ಪ್ರಕರಣ ಸ್ಪೋಟಕ ತಿರುವು ಪಡೆದುಕೊಂಡಿದೆ. ಹಗರಣದಲ್ಲಿ ಸಚಿವ ನಾಗೇಂದ್ರ  ಬೆನ್ನಲ್ಲೇ ಮತ್ತೊಬ್ಬ ಸಚಿವರ ಹೆಸರು ತಳುಕು ಹಾಕಿಕೊಂಡಿದೆ.
ಅಕ್ರಮದ ಸಾಕ್ಷ್ಯಗಳ ನಾಶಕ್ಕೆ ಸಚಿವ ಡಾ.ಶರಣಪ್ರಕಾಶ್ ಪಾಟೀಲ್ ಕಚೇರಿಯಲ್ಲೇ ಸಂಚು ನಡೆದಿತ್ತು ಎಂಬ ಅಂಶ ಪ್ರಕರಣದ ಎಂಟನೇ ಆರೋಪಿಯಾಗಿರುವ ನಿಗಮದ ಲೆಕ್ಕಾಧಿಕಾರಿ ಪರಶುರಾಮ್ ನ್ಯಾಯಾಲಯಕ್ಕೆ ಸಲ್ಲಿಸಿರುವ ಅಫಿಡವಿಟ್ನಲ್ಲಿ ಉಲ್ಲೇಖಿಸಲಾಗಿದೆ. ಬೆಂಗಳೂರಿನ ಮೂರನೇ ಅಪರ ಮುಖ್ಯ ಮೆಟ್ರೋಪಾಲ್ಟೇನ್ ಮ್ಯಾಜಿಸ್ಟ್ರೇಟ್ ಕೋರ್ಟ್ಗೆ 8ನೇ ಆರೋಪಿ ಪರ ವಕೀಲರು ಈ ಅಫಿಡವಿಟ್ನ್ನು ಸಲ್ಲಿಸಿದರು.
ವೈದ್ಯಕೀಯ ಶಿಕ್ಷಣ ಸಚಿವರ ಕಚೇರಿಯಲ್ಲಿ ಮೇ 24ರಂದು ಸಭೆ ನಡೆದು, ಅಕ್ರಮದ ಸಾಕ್ಷ್ಯಗಳ ನಾಶ ಕುರಿತು ಚರ್ಚೆಯಾಗಿದೆ. ಮಾ.24ರ ಬೆಳಗ್ಗೆ 10 ರಿಂದ ಮಧ್ಯಾಹ್ನ 3ರವರೆಗಿನ ಕಚೇರಿ ಸಿಸಿಟಿವಿ ಫೂಟೇಜ್ಗಳನ್ನು ವಶಪಡಿಸಿಕೊಂಡು ಸಂರಕ್ಷಿಸಲು ತನಿಖಾಧಿಕಾರಿಗೆ ನಿರ್ದೇಶಿಸಬೇಕೆಂದು ಕೋರ್ಟ್‌ಗೆ ಎಂಟನೇ ಆರೋಪಿ ಮೊರೆಯಿಟ್ಟಿದ್ದಾರೆ. ಈ ಸಭೆಯಲ್ಲಿ ಸಚಿವರಾದ ಶರಣ ಪ್ರಕಾಶ್ ಪಾಟೀಲ, ಬಿ.ನಾಗೇಂದ್ರ, ನಿಗಮದ ಅಧ್ಯಕ್ಷ ಹಾಗೂ ಶಾಸಕ ಬಸನಗೌಡ ದಲ್ ಕೂಡ ಭಾಗವಹಿಸಿದ್ದರು ಎಂದು ಹೇಳಲಾಗಿದೆ.
ತನಿಖೆ ನಡೆಯುತ್ತಿರುವಾಗ ಅನೇಕ ವಿಚಾರ ಬರುತ್ತದೆ : ಪರಮೇಶ್ವರ್  ಸಚಿವ ಶರಣಪ್ರಕಾಶ್ ಪಾಟೀಲ್ ಹೆಸರು ತಳುಕು ಹಾಕಿಕೊಂಡಿರುವ ವಿಚಾರವಾಗಿ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಮಾತನಾಡಿ, ತನಿಖೆ ನಡೆಯುತ್ತಿರುವಾಗ ಅನೇಕ ವಿಚಾರ ಬರುತ್ತದೆ. ಯಾರು ಅಪರಾಧಿ ಸ್ಥಾನದಲ್ಲಿ ಇರುತ್ತಾರೆ ಅವರು ಹೇಳಿಕೆ ನೀಡುತ್ತಾರೆ. ಈ ಬಗ್ಗೆ SIT ತನಿಖೆ ಮಾಡುತ್ತೆ ಎಂದು ಹೇಳಿದರು. ಶರಣಪ್ರಕಾಶ್ ಪಾಟೀಲ್‌ ರಾಜೀನಾಮೆಗೆ ಬಿಜೆಪಿ ಒತ್ತಾಯ ವಿಚಾರವಾಗಿ ಮಾತನಾಡಿದ ಅವರು, ಯಾರು ಏನೇ ಹೇಳಿದರೂ ಅದನ್ನ ಪರಿಶೀಲನೆ ಮಾಡಬೇಕಾಗುತ್ತದೆ. ಅಗತ್ಯವಿದ್ದರೆ ಎಸ್ಐಟಿ ಅಧಿಕಾರಿಗಳು ಸಹ ವಿಚಾರಣೆ ಮಾಡುತ್ತಾರೆ ಎಂದರು.
ಶರಣಪ್ರಕಾಶ್ ಪಾಟೀಲ್ ಒಬ್ಬ ಅಪ್ಪಟ ಪ್ರಾಮಾಣಿಕ ವ್ಯಕ್ತಿ: ಎಂಬಿ ಪಾಟೀಲ್ : ಸಚಿವ ಶರಣಪ್ರಕಾಶ್ ಪಾಟೀಲ್ ಒಬ್ಬ ಅಪ್ಪಟ ಪ್ರಾಮಾಣಿಕ ವ್ಯಕ್ತಿ. ಈ ಮಾತನ್ನು ಬಹಳ ಗರ್ವದಿಂದ ಹೇಳುತ್ತೇನೆ. ಸಾಕ್ಷ್ಯ ನಾಶ ಮಾಡುವಂತ ಕೆಲಸಕ್ಕೆ ಶರಣಪ್ರಕಾಶ್ ಹೋಗುವುದಿಲ್ಲ. ದಯವಿಟ್ಟು ಶರಣಪ್ರಕಾಶ್ ಪಾಟೀಲ್ ಹೆಸರನ್ನು ತಳುಕು ಹಾಕಬೇಡಿ. ವಾಲ್ಮೀಕಿ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಒಬ್ಬ ಫ್ರಾಡ್ ಎಂದು ಎಂ.ಬಿ.ಪಾಟೀಲ್ ಹೇಳಿದರು.

Related Post

Leave a Reply

Your email address will not be published. Required fields are marked *