Breaking
Wed. Dec 25th, 2024

ರಾಮೋಜಿ ಸಮೂಹ ಸಂಸ್ಥೆಗಳ ಅಧ್ಯಕ್ಷ, ‘ಈಟಿವಿ’ ಸಂಸ್ಥಾಪಕ ರಾಮೋಜಿ ರಾವ್ ಇನ್ನಿಲ್ಲ….!

ಹೈದರಾಬಾದ್ : ರಾಮೋಜಿ ಸಮೂಹ ಸಂಸ್ಥೆಗಳ ಅಧ್ಯಕ್ಷ, ‘ಈಟಿವಿ’ ಸಂಸ್ಥಾಪಕ ರಾಮೋಜಿ ರಾವ್ ಅವರು ಇಂದು (ಜೂನ್ 8) ನಮ್ಮನ್ನು ಅಗಲಿದ್ದಾರೆ. ‘ಈಟಿವಿ ಕನ್ನಡ’ ಚಾನಲ್ ಮೂಲಕ ರಾಮೋಜಿ ರಾವ್ ಅವರು ಕನ್ನಡದ ಪ್ರತಿ ಮನೆಯ ಮಾತೂ ಆಗಿದ್ದರು. ‘ಈಟಿವಿ ಕನ್ನಡ’ವು ಕನ್ನಡದ ಅಗ್ರ ಶ್ರೇಷ್ಠ ಕನ್ನಡಿಗರನ್ನು ಗುರುತಿಸಿ ಅವರಿಗೆ ‘ವರ್ಷದ ಕನ್ನಡಿಗ’ ಎಂಬ ಪ್ರಶಸ್ತಿಯನ್ನು ಕೊಟ್ಟು ಗೌರವಿಸುವ ಕಾರ್ಯ ಮಾಡಿತ್ತು. ಈ ಪ್ರಶಸ್ತಿಯು ನಟಸಾರ್ವಭೌಮ, ಕನ್ನಡಿಗರ ಆರಾಧ್ಯದೈವ ದಿವಂಗತ ಡಾ.ರಾಜ್ ಕುಮಾರ್ ಅವರಿಗೂ ಸಂದಿತ್ತು.

2003ರಲ್ಲಿ ವರನಟ ಡಾ.ರಾಜ್ ಕುಮಾರ್ ಅವರಿಗೆ ‘ಈಟಿವಿ ಕನ್ನಡ’ದಿಂದ ‘ವರ್ಷದ ಕನ್ನಡಿಗ’ ಪ್ರಶಸ್ತಿಯನ್ನು ಪ್ರದಾನ ಮಾಡಲಾಗಿತ್ತು. ಅಂದು ಸಮಾರಂಭದಲ್ಲಿ ಆಗಿನ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಅವರು ಡಾ.ರಾಜ್ ಅವರಿಗೆ ಪ್ರಶಸ್ತಿ ಪ್ರದಾನ ಮಾಡಿದ್ದರು. ಈ ಕಾರ್ಯಕ್ರಮದಲ್ಲಿ ಖುದ್ದು ರಾಮೋಜಿ ರಾವ್ ಅವರು ಸಹ ಪಾಲ್ಗೊಂಡಿದ್ದರು. ಅಂದಿನ ಕಾರ್ಯಕ್ರಮ ಉದ್ದೇಶಿಸಿ ರಾಮೋಜಿ ರಾವ್ ಕನ್ನಡದಲ್ಲೇ ಮಾತನಾಡಿದ್ದರು.

ರಾಮೋಜಿ ಅವರ ಮಾತಿನ ಒಂದು ನೆನಪು ಇಲ್ಲಿದೆ: ”ನಮಸ್ಕಾರ. ಈ ಸಭೆಯ ಎಲ್ಲ ಮಹನೀಯರಿಗೂ ಸ್ವಾಗತ. ಬರುವ ಡಿಸೆಂಬರ್ಗೆ ‘ಈಟಿವಿ ಕನ್ನಡ’ ಚಾನಲ್ಗೆ ಮೂರು ವರ್ಷಗಳು ತುಂಬುತ್ತವೆ. ಮೂರು ವರ್ಷಗಳ ಹಿಂದೆ ನಮ್ಮನೆಯ ಅಂಗಳದ ಹೂವನ್ನು ನಿಮಗೆ ಅರ್ಪಿಸಿದ್ದೆವು. ಆ ಹೂವನ್ನು ಒಪ್ಪಿಕೊಂಡಿದ್ದೀರಿ. ಆರೈಕೆ ಮಾಡಿದ್ದೀರಿ. ನೀರೆರೆದು ಪೋಷಿಸಿದ್ದೀರಿ. ತಪ್ಪು ಮಾಡಿದಾಗ ತಿದ್ದಿದ್ದೀರಿ. ಮೆಚ್ಚುಗೆಯ ಕೆಲಸ ಮಾಡಿದಾಗ ಬೆನ್ನು ತಟ್ಟಿದ್ದೀರಿ. ಕೈ ಹಿಡಿದು ನಡೆಸಿದ್ದೀರಿ. ನೀವು ತೋರಿದ ಆದರದ ಪ್ರೀತಿಗೆ ನಾನು ಕೃತಜ್ಞ. ಈ ಮೂರು ವರ್ಷಗಳ ‘ಈಟಿವಿ ಕನ್ನಡ’ ಚಾನಲ್ ಬೆಳೆದು ಬಂದ ಬಗೆಯನ್ನು ನೀವೇ ಗಮನಿಸಿದ್ದೀರಿ. ನಿಮ್ಮ ಮನೆ, ಮನ ಮುಟ್ಟಲು ನಮಗೆ ಸಿಕ್ಕ ಎಲ್ಲ ಅವಕಾಶಗಳನ್ನು ನಾವು ಬಳಸಿಕೊಂಡಿದ್ದೇವೆ. ನಿಮ್ಮ ಪ್ರೀತಿಯನ್ನು ಗಳಿಸುವ ಅವಕಾಶ ದೊರೆತಾಗೆಲ್ಲ, ಕನ್ನಡದ ಡಿಂಡಿಮವನ್ನು ಬಾರಿಸಿದ್ದೇವೆ”.
”ಕರ್ನಾಟಕದ ಹೃದಯ ಶಿವನನ್ನು ಹೆಮ್ಮೆಯಿಂದ ಮೆರೆದಿದ್ದೇವೆ. ಕನ್ನಡ ಸೇವೆಯಲ್ಲಿ ಕಿಂಚಿತ್ತಾದರೂ ಸಾಧನೆಗೈದ ತೃಪ್ತಿ ‘ಈಟಿವಿ’ ಚಾನಲ್ಗೆ ಇದೆ. ಬೆಳೆಯುವ ನನಗೆ, ಬೆಳೆಸುವ ನಿಮ್ಮ ನಿರಂತರ ಪ್ರೋತ್ಸಾಹ ಗಳಿಸಿದ ಹೆಮ್ಮೆ ಇದೆ. ‘ವರ್ಷದ ಕನ್ನಡಿಗ’ ಪ್ರಶಸ್ತಿಯು ಭಾರತ ತನುಜಾತೆಯ ಸಂಜಾತರಾದ ನಿಮ್ಮ ಮನದಂಗಳ ತಲುಪಲು ನನಗೆ ದೊರೆತ ಮತ್ತೊಂದು ಅವಕಾಶ. ಎಲ್ಲೇ ಇರಲಿ, ಹೇಗೆ ಇರಲಿ, ಎಂದೆಂದಿಗೂ ಕನ್ನಡವೇ ಆಗಿರುವ ಕನ್ನಡದ ಏಳ್ಗೆಗಾಗಿ ದುಡಿಯುತ್ತಿರುವ ಅಸದೃಶ್ಯ ರತ್ನಗಳು ಈ ನಾಡಿನಲ್ಲಿದ್ದಾರೆ. ನಿಜವಾಗಿಯೂ ಶ್ರೇಷ್ಠ ಕನ್ನಡಿಗ ಮನ್ನಣೆ ಎಲ್ಲ ಮಹನೀಯರಿಗೂ ಸಲ್ಲಬೇಕು. ಈ ಪ್ರಶಸ್ತಿ ನಿರಂತರವಾಗಿ ಇರುವುದರಿಂದ ಪ್ರತಿ ವರ್ಷವೂ ಒಬ್ಬ ಕನ್ನಡಿಗನನ್ನು ಗುರುತಿಸಿ ಗೌರವಿಸುವ ಅಪೂರ್ವ ಅವಕಾಶವನ್ನು ನಾವು ಕಲ್ಪಿಸಿಕೊಂಡೆವು”.
”ಕನ್ನಡಿಗರು ಆರಿಸಿದ ಮಹನೀಯರನ್ನು ಗೌರವಿಸುವುದಷ್ಟೇ ನಮ್ಮ ಕರ್ತವ್ಯ. ಹೀಗಾಗಿ, ಈ ಮಹೋದ್ದೇಶ ಸಾಧನೆಯಲ್ಲಿ ನಾವು ನಿಮಿತ್ತ ಮಾತ್ರ. ಇದು ಕೆರೆಯ ನೀರನ್ನು ಕೆರೆಗೆ ಚೆಲ್ಲಿ, ಕನ್ನಡಿಗರ ವರ ಪಡೆಯುವಂತ ಸಾರ್ಥಕ. ‘ವರ್ಷದ ಕನ್ನಡಿಗ’ನ ಆಯ್ಕೆಯಲ್ಲಿ ಭಾಗವಹಿಸಿದ್ದೀರಿ. ಸಾವಿರಾರು ಸಂಖ್ಯೆಯಲ್ಲಿ ಬಂದು ನಿಮ್ಮ ಆಯ್ಕೆಯನ್ನು ದಾಖಲು ಮಾಡಿದ್ದೀರಿ. ಕನ್ನಡಿಗನ ಆಯ್ಕೆಯಲ್ಲಿ ಪ್ರೀತಿಯನ್ನು ಮೆರೆದಿದ್ದೀರಿ. ‘ಈಟಿವಿ ಕನ್ನಡ’ದ ಮೇಲಿನ ಪ್ರೀತಿಯನ್ನು ಜಾಹೀರು ಮಾಡಿದ್ದೀರಿ. ಇದು ನನಗೆ ಧನ್ಯತೆ ತಂದುಕೊಟ್ಟಿದೆ. ನಿಮ್ಮ ಪ್ರೀತಿಗೆ, ಪ್ರೋತ್ಸಾಹಕ್ಕೆ ನಾನು ಋಣಿಯಾಗಿದ್ದೇನೆ”. ಹೀಗೆ ತಮ್ಮ ಮಾತುಗಳನ್ನು ರಾಮೋಜಿ ರಾವ್ ಕನ್ನಡದಲ್ಲಿ ದಾಖಲು ಮಾಡಿದ್ದರು. ಅದು ಕನ್ನಡಿಗರಾದ ನಮ್ಮೆಲ್ಲರಿಗೂ ನೆನಪಿನ ಬುತ್ತಿಯಾಗಿರಲಿದೆ. ಅವರ ಆತ್ಮಕ್ಕೆ ಶಾಂತಿ ಕೋರೋಣ..

Related Post

Leave a Reply

Your email address will not be published. Required fields are marked *