ತ್ರಿವಿಕ್ರಮನಂತೆ ಮೂರನೇ ಬಾರಿಗೆ ಚುಕ್ಕಾಣಿ ಹಿಡಿಯಲಿರುವ ನರೇಂದ್ರ ಮೋದಿ : ಪಟ್ಟಾಭಿಷೇಕಕ್ಕೆ ಇನ್ನೇನು ಕ್ಷಣಗಣನೆ ಆರಂಭವಾಗಿದೆ. ಎನ್ಡಿಎ ಮಿತ್ರರೊಂದಿಗೆ ಮತ್ತೊಮ್ಮೆ ದೇಶ ಆಳಲಿರುವ ಮೋದಿ ಸರ್ವಾನುಮತದಿಂದ ಆಡಳಿತ ಚುಕ್ಕಾಣಿ ಹಿಡಿಯಲಿದ್ದಾರೆ. ಇಂದು (ಜೂನ್ 09) ಸಂಜೆ 7ಗಂಟೆ 15 ನಿಮಿಷಕ್ಕೆ ರಾಷ್ಟ್ರಪತಿ ಭವನದ ಮುಂಭಾಗದಲ್ಲಿ ಮೋದಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ರಾಷ್ಟ್ರಪತಿ ದ್ರೌಪದಿ ಮುರ್ಮು ಪ್ರಮಾಣ ವಚನ ಬೋಧಿಸಲಿದ್ದಾರೆ. ಇನ್ನು ರಾಷ್ಟ್ರರಾಜಧಾನಿ ನವದೆಹಲಿಯಲ್ಲಿ ಮಹತ್ವದ ಬೆಳವಣಿಗೆಗಳು ನಡೆಯುತ್ತಿದ್ದು, ಅದರ ಕ್ಷಣ ಕ್ಷಣದ ಅಪ್ಡೇಟ್ಸ್
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಡ್ಡಾಗೆ ಕೇಂದ್ರ ಸಚಿವಸ್ಥಾನ? ಬಿಜೆಪಿ ರಾಷ್ಟ್ರಾಧ್ಯಕ್ಷರಾಗಿರುವ ಜಗತ್ ಪ್ರಕಾಶ್ ನಡ್ಡಾ (ಜೆಪಿ ನಡ್ಡಾ) ಕೂಡ ನರೇಂದ್ರ ಮೋದಿ ಸರ್ಕಾರದಲ್ಲಿ ಸಚಿವರಾಗಿ ಇಂದು ಪ್ರಮಾಣ ವಚನ ಸ್ವೀಕರಿಸುವ ಸಾಧ್ಯತೆ ಇದೆ. ಪ್ರಧಾನ ಮಂತ್ರಿಯಾಗಿ ಅಧಿಕಾರ ಸ್ವೀಕರಿಸುವ ನರೇಂದ್ರ ಮೋದಿ ಜೊತೆಗೆ ಕೆಲವು ಸಚಿವರು ಮಾತ್ರ ಇಂದು ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಅವರಲ್ಲಿ ಜೆಪಿ ನಡ್ಡಾ ಕೂಡ ಒಬ್ಬರು ಎನ್ನಲಾಗುತ್ತಿದೆ.
ಯಾವ ರಾಜ್ಯಕ್ಕೆ ಎಷ್ಟು ಸಚಿವ ಸ್ಥಾನ? ಕೆಲವೇ ಕ್ಷಣಗಳಲ್ಲಿ ಮೂರನೇ ಬಾರಿಗೆ ಪ್ರಧಾನಿಯಾಗಿ ಮೋದಿ ಪದಗ್ರಹಣ ಮಾಡಲಿದ್ದಾರೆ. ಇನ್ನು ಯಾರ್ಯಾರು ಸಚಿವರಾಗುತ್ತಾರೆ ಎನ್ನುವುದೇ ಕುತೂಹಲ. ಇದೀಗ ಬಂದ ಮಾಹಿತಿ ಪ್ರಕಾರ, 63 ಸಂಸದರು ಕೇಂದ್ರ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಇನ್ನು ಉತ್ತರ ಪ್ರದೇಶ, ಬಿಹಾರದಿಂದ ತಲಾ 8 ಸಂಸದರಿಗೆ ಮಂತ್ರಿಗಿರಿ ದೊರಕಿದೆ. ಮಹಾರಾಷ್ಟ್ರದಿಂದ 6 ಸಂಸದರಿಗೆ ಕೇಂದ್ರ ಸಚಿವ ಸ್ಥಾನ. ಗುಜರಾತ್ ಐವರು, ಆಂಧ್ರ ಪ್ರದೇಶದಲ್ಲಿ ಮೂವರಿಗೆ ಮಂತ್ರಿಗಿರಿ. ಪಶ್ಚಿಮ ಬಂಗಾಳ, ತೆಲಂಗಾಣದಲ್ಲಿ ತಲಾ ಇಬ್ಬರಿಗೆ ಸಚಿವ ಸ್ಥಾನ. ಕೇರಳದಲ್ಲಿ ಗೆದ್ದ ಓರ್ವ ಬಿಜೆಪಿ ಸಂಸದನಿಗೆ ಸಚಿವ ಸ್ಥಾನ ಒಲಿದಿದೆ. ಇನ್ನು ಕರ್ನಾಟಕ್ಕೆ ಐದು ಸಚಿವ ಸ್ಥಾನ ಸಿಕ್ಕಿವೆ.
65 ಸಚಿವರು ಪ್ರಮಾಣವಚನ ಸ್ವೀಕರಿಸುವ ಸಾಧ್ಯತೆ ಇಂದು ಸಂಜೆ ಪ್ರಧಾನಿ ನರೇಂದ್ರ ಮೋದಿ ಅವರ ಜೊತೆ ಸುಮಾರು 65 ಸಚಿವರು ಪ್ರಮಾಣವಚನ ಸ್ವೀಕರಿಸುವ ಸಾಧ್ಯತೆ ಇದೆ. ಈ ಬಾರಿ ಸ್ಮೃತಿ ಇರಾನಿ, ಅನುರಾಗ್ ಠಾಕೂರ್‌ಗೆ ಸಚಿವ ಸ್ಥಾನ ಕೈತಪ್ಪಿದೆ ಎನ್ನಲಾಗಿದ್ದು, ಉಳಿದಂತೆ ಹಿಂದಿನ ಸಂಪುಟದಲ್ಲಿದ್ದ ಎಲ್ಲರಿಗೂ ಸಚಿವ ಸ್ಥಾನ ಫಿಕ್ಸ್ ಎನ್ನಲಾಗಿದೆ. ಅಲ್ಲದೇ ಮೈತ್ರಿ ಪಕ್ಷಗಳಲ್ಲಿ ಬಹುತೇಕ ಹೊಸಬರಿಗೆ ಸಚಿವ ಸ್ಥಾನ ಸಿಗುವ ನಿರೀಕ್ಷೆಗಳಿವೆ.
ಮೋದಿ ಸಂಪುಟದಲ್ಲಿ ಕರ್ನಾಟಕಕ್ಕೆ 3+2 ಸಚಿವ ಸ್ಥಾನ? ಈ ಬಾರಿ ಮೋದಿ ಸಂಪುಟದಲ್ಲಿ ಕರ್ನಾಟಕದಿಂದ ಐವರು ಸಚಿವರಾಗುವ ಸಾಧ್ಯೆತಗಳಿವೆ. ಮೂವರಿಗೆ ಕ್ಯಾಬಿನೆಟ್ ದರ್ಜೆ ಸಿಕ್ಕರೆ, ಇನ್ನುಳಿದಂತೆ ಇಬ್ಬರಿಗೆ ರಾಜ್ಯ ದರ್ಜೆ ಖಾತೆ ಸಿಗುವ ಸಾಧ್ಯತೆಗಳಿವೆ. ನಿರ್ಮಲಾ ಸೀತಾರಾಮನ್(ಕರ್ನಾಟ ರಾಜ್ಯಸಭಾ ಸದಸ್ಯೆ), ಪ್ರಹ್ಲಾದ್ ಜೋಶಿ, ಎಚ್.ಡಿ.ಕುಮಾರಸ್ವಾಮಿಗೆ ಅವರಿಗೆ ಕ್ಯಾಬಿನೆಟ್ ದರ್ಜೆ ಸಚಿವ ಸ್ಥಾನ ದೊರೆಯುವ ಸಾಧ್ಯೆತೆಗಳಿವೆ, ಇನ್ನು ರಾಜ್ಯ ದರ್ಜೆ ಸಚಿವರಾಗಿ ಶೋಭಾ ಕರಂದ್ಲಾಜೆ ಮತ್ತು ತುಮಕೂರು ಸಂಸದ ಸೋಮಣ್ಣಗೆ ಅವಕಾಶ ಸಿಗುವ ನಿರೀಕ್ಷೆಗಳಿವೆ.