ಬೆಂಗಳೂರು, ಜೂನ್ 09: ರಾಜ್ಯದ ಉದ್ದಗಲಕ್ಕೂ ಮುಂಗಾರು ವ್ಯಾಪಿಸಿದ್ದು ಎಲ್ಲೆಡೆ ಮಳೆ ಆರ್ಭಟ ಶುರುವಾಗಿದೆ. ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ಜೂನ್ 8 ರಿಂದ 11ರವರೆಗೂ ಅಂದರೆ ಮೂರು ದಿನಗಳ ಕಾಲ ಮಳೆ ಸಾಧ್ಯತೆ ಇದೆ ಎಂದು ನಿನ್ನೆ ಹವಾಮಾನ ಇಲಾಖೆ ಮುನ್ಸೂಚನೆ ನೀಡಿತ್ತು. ಅದರ ಬೆನ್ನೆಲ್ಲೇ ಇಂದು ಕೂಡ ಬೆಂಗಳೂರು ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಮಳೆ ಅಬ್ಬರಿಸಿದೆ.
ಧಾರಾಕಾರ ಮಳೆಗೆ ಅವಾಂತರಗಳು ಕೂಡ ಸಂಭವಿಸಿವೆ. ಸಿಲಿಕಾನ್ ಸಿಟಿಯಲ್ಲಿ ವರುಣ ಅಬ್ಬರ ಶುರುವಾಗಿದೆ. ವಿಕೆಂಡ್ ಮೂಡ್ನಲ್ಲಿದ್ದವರಿಗೆ ವರುಣ ಕಾಟ ಕೊಟ್ಟಿದ್ದಾನೆ. ಚಾಮರಾಜಪೇಟೆ, ಕೆಆರ್ ಮಾರುಕಟ್ಟೆ, ಲಾಲ್ ಬಾಗ್, ಹೆಬ್ಬಾಳ, ಮಲ್ಲೇಶ್ವರಂ, ರಾಜಾಜಿನಗರ ಸದಾಶಿವನಗರ, ಶಿವಾಜಿನಗರ, ಕೋರಮಂಗಲ, ಸರ್ಜಾಪುರ ರಸ್ತೆ, ಬ್ರಿಗೇಡ್ ರೋಡ್, ಶಾಂತಿನಗರ, ಸೂಳೆ ಸರ್ಕಲ್, ಎಂಜಿ ರೋಡ್, ಸೇರಿದಂತೆ ಬನ್ನೇರುಘಟ್ಟ ರೋಡ್ನಲ್ಲೂ ಮಳೆ ಸುರಿದಿದೆ. ರಸ್ತೆ ಮೇಲೆ ನೀರು ನಿಂತ ಕಾರಣ ಕಿಲೋಮೀಟರ್ ಗಟ್ಟಲೆ ಟ್ರಾಫಿಕ್ ಉಂಟಾಗಿದೆ.