ಬೆಂಗಳೂರು : ಪ್ರಧಾನಿ ನರೇಂದ್ರ ಮೋದಿ ಅವರ ಮೂರನೇ ಅಧಿಕಾರ ಅವಧಿಯಲ್ಲಿ ಮಾಜಿ ಸಿಎಂ ಹೆಚ್‌ಡಿ ಕುಮಾರಸ್ವಾಮಿ ಅವರಿಗೆ ಕ್ಯಾಬಿನೆಟ್ ಮಂತ್ರಿಗಿರಿ ಸಿಕ್ಕಿದೆ. ಈ ಮೂಲಕ ಬರೋಬ್ಬರಿ 25 ವರ್ಷದ ಬಳಿಕ ಜೆಡಿಎಸ್‌ಗೆ ಕೇಂದ್ರದಲ್ಲಿ ಮಂತ್ರಿಗಿರಿ ಒಲಿದಂತಾಗಿದೆ.
ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷರಾಗಿದ್ದ ಅವಧಿಯಲ್ಲಿ 1996-97ರಲ್ಲಿ ದೇವೇಗೌಡರು ಪ್ರಧಾನಿಯಾಗಿದ್ದರು. ಈ ಸಂದರ್ಭದಲ್ಲಿ ಕೆಲ ಕಾಲ ಗೃಹ ಖಾತೆಯನ್ನು ತಮ್ಮ ಬಳಿಯೇ ಇಟ್ಟುಕೊಂಡಿದ್ದರು.
ದೇವೇಗೌಡರು ಪ್ರಧಾನಿಯಾಗಿದ್ದ ಸಮಯದಲ್ಲಿ ಅಂದು ಜೆಡಿಎಸ್ ನಾಯಕರಾಗಿದ್ದ ಎಸ್.ಆರ್. ಬೊಮ್ಮಾಯಿ ಮತ್ತು ಸಿಎಂ ಇಬ್ರಾಹಿಂ ಅವರಿಗೆ ಕೇಂದ್ರದಲ್ಲಿ ಮಂತ್ರಿ ಸ್ಥಾನ ಸಿಕ್ಕಿತ್ತು. ಆ ನಂತರ ಜೆಡಿಎಸ್‌ನಿಂದ ಸಂಸತ್‌ಗೆ ಆಯ್ಕೆ ಆಗುತ್ತಿದ್ದರೂ ಯಾರಿಗೂ ಮಂತ್ರಿ ಸ್ಥಾನ ಸಿಕ್ಕಿರಲಿಲ್ಲ.
2004, 2009ರ ಚುನಾವಣೆಯಲ್ಲಿ ಯುಪಿಎ (UPA) ಸರ್ಕಾರ ಅಧಿಕಾರದಲ್ಲಿದ್ದರೆ 2014 ರಿಂದ 2024ರ ವರೆಗೆ ಎನ್‌ಡಿಎ (NDA) ಸರ್ಕಾರ ಕೇಂದ್ರದಲ್ಲಿ ಅಧಿಕಾರದಲ್ಲಿತ್ತು. 2014ರ ಚುನಾವಣೆಯಲ್ಲಿ ಯಾರೊಂದಿಗೂ ಮೈತ್ರಿ ಮಾಡಿಕೊಳ್ಳದ ಜೆಡಿಎಸ್ 2019ರಲ್ಲಿ ಕಾಂಗ್ರೆಸ್ ಜೊತೆ ಮೈತ್ರಿ ಮಾಡಿಕೊಂಡು ಕೇವಲ ಒಂದು ಸ್ಥಾನ ಮಾತ್ರ ಗೆದ್ದುಕೊಂಡಿತ್ತು.
ಚುನಾವಣೆಯಲ್ಲಿ ಮೊದಲೇ ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡಿದ್ದ ಜೆಡಿಎಸ್ ಹಾಸನ, ಮಂಡ್ಯ, ಕೋಲಾರದಲ್ಲಿ ಸ್ಪರ್ಧಿಸಿತ್ತು. ಹಾಸನದಲ್ಲಿ ಪ್ರಜ್ವಲ್ ರೇವಣ್ಣ ಸೋತರೆ, ಮಂಡ್ಯದಲ್ಲಿ ಹೆಚ್‌ಡಿ ಕುಮಾರಸ್ವಾಮಿ, ಕೋಲಾರದಲ್ಲಿ ಮಲ್ಲೇಶ್ ಬಾಬು ಜಯಗಳಿಸಿದ್ದರು.
ಎನ್‌ಡಿಎ ಸರ್ಕಾರದಲ್ಲಿ ಜೆಡಿಎಸ್ ಪ್ರಮುಖ ಮಿತ್ರಪಕ್ಷವಾಗಿರುವ ಕಾರಣ ಕುಮಾರಸ್ವಾಮಿ ಅವರಿಗೆ ಮೋದಿ ಸಂಪುಟದಲ್ಲಿ ಸಚಿವ ಸ್ಥಾನ ಸಿಕ್ಕಿದೆ. ಅಷ್ಟೇ ಅಲ್ಲದೇ ಮೊದಲ ಬಾರಿಗೆ ಕೇಂದ್ರದಲ್ಲಿ ಕುಮಾರಸ್ವಾಮಿ ಅವರಿಗೆ ಮಂತ್ರಿ ಸ್ಥಾನ ಒಲಿದಿದೆ.