ಇಂಫಾಲ್ : ಮಣಿಪುರದ ಹಿಂಸಾಚಾರ ಪೀಡಿತ ಜಿರಿಬಾಮ್ ಜಿಲ್ಲೆಗೆ ಭೇಟಿ ನೀಡಿದ್ದ ಸಿಎಂ ಎನ್. ಬಿರೇನ್ ಸಿಂಗ್ ಅವರ ಬೆಂಗಾವಲು ಪಡೆ ವಾಹನದ ಮೇಲೆ ಉಗ್ರರು ದಾಳಿ ನಡೆಸಿರುವ ಘಟನೆ ಬೆಳಕಿಗೆ ಬಂದಿದೆ.
ಸೋಮವಾರ ಕಾಂಗ್‌ಪೋಕ್ಪಿ ಜಿಲ್ಲೆಯಲ್ಲಿ ಸಿಎಂ ಬಿರೇನ್ ಸಿಂಗ್ ಅವರ ಬೆಂಗಾವಲು ವಾಹನದ ಮೇಲೆ ಶಂಕಿತ ಉಗ್ರರು ಹೊಂಚುದಾಳಿ ನಡೆಸಿದ್ದಾರೆ. ಗುಂಡಿನ ದಾಳಿಯಲ್ಲಿ ಇಬ್ಬರು ಸಿಬ್ಬಂದಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಬೆಂಗಾವಲು ಪಡೆ ಹಿಂಸಾಚಾರ ಪೀಡಿತ ಜಿರಿಬಾಮ್ ಜಿಲ್ಲೆಗೆ ತೆರಳುತ್ತಿತ್ತು ಎನ್ನಲಾಗಿದೆ.
ಭದ್ರತಾ ಪಡೆ ವಾಹನಗಳ ಮೇಲೆ ಗುಂಡಿನ ದಾಳಿ ನಡೆಸಿದಾಗ ಮುಖ್ಯಮಂತ್ರಿಗಳು ಇರಲಿಲ್ಲ. ತಕ್ಷಣವೇ ಬೆಂಗಾವಲು ಪಡೆ ಸಹ ಪ್ರತಿದಾಳಿ ನಡೆಸಿದೆ. ರಾಷ್ಟ್ರೀಯ ಹೆದ್ದಾರಿ -53ರ ಉದ್ದಕ್ಕೂ ಕೋಟ್ಲೆನ್ ಗ್ರಾಮದ ಬಳಿ ಇನ್ನೂ ಶೂಟೌಟ್ ನಡೆಯುತ್ತಿದೆ. ದಾಳಿಯ ವೇಳೆ ಕನಿಷ್ಠ ಒಬ್ಬ ಸಿಬ್ಬಂದಿಗೆ ಗುಂಡು ತಗುಲಿ ಗಾಯಗೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ದೆಹಲಿಯಿಂದ ಇಂಫಾಲ್‌ಗೆ ತೆರಳುತ್ತಿದ್ದ ಸಿಎಂ ಬಿರೇನ್ ಸಿಂಗ್, ಜಿಲ್ಲೆಯ ಪರಿಸ್ಥಿತಿಯನ್ನು ಪರಿಶೀಲಿಸಲು ಜಿರಿಬಾಮ್‌ಗೆ ಭೇಟಿ ನೀಡಲು ಯೋಜಿಸಿದ್ದರು. ಏಕೆಂದರೆ ಶಂಕಿತ ಉಗ್ರರು ಕಳೆದ ಶನಿವಾರ ಜಿರಿಬಾಮ್‌ನಲ್ಲಿ ಎರಡು ಪೊಲೀಸ್ ಔಟ್‌ಪೋಸ್ಟ್ ಮತ್ತು ಕನಿಷ್ಠ 70 ಮನೆಗಳಿಗೆ ಬೆಂಕಿ ಹಚ್ಚಿದ್ದರು ಎಂದು ತಿಳಿದುಬಂದಿದೆ.
ಹಿಂಸಾಚಾರ ಪೀಡಿದ ಜಿರಬಾಮ್ ಜಿಲ್ಲೆಯು ರಾಜ್ಯ ರಾಜಧಾನಿ ಇಂಫಾಲ್‌ನಿಂದ 220 ಕಿಮೀ ದೂರದಲ್ಲಿದೆ. ಇದು ಅಸ್ಸಾಂ ಗಡಿ ಪ್ರದೇಶಕ್ಕೆ ಸಮೀಪದಲ್ಲಿದೆ. ಕುಕಿ ಸಮುದಾಯದ ಬಹುಪಾಲು ಜನ ಇಲ್ಲಿ ನೆಲೆಸಿದ್ದಾರೆ.