ಶ್ರೀನಗರ : ಜಮ್ಮು ಮತ್ತು ಕಾಶ್ಮೀರದ ರಿಯಾಸಿಯಲ್ಲಿ ಯಾತ್ರಾರ್ಥಿಗಳನ್ನು ಹೊತ್ತೊಯ್ಯುತ್ತಿದ್ದ ಬಸ್‍ನ ಮೇಲೆ ನಡೆದ ಭಯೋತ್ಪಾದಕ ದಾಳಿಯ ಹೊಣೆಯನ್ನು ಪಾಕಿಸ್ತಾನ ಬೆಂಬಲಿತ ಉಗ್ರ ಸಂಘಟನೆ ದಿ ರೆಸಿಸ್ಟೆನ್ಸ್ ಫ್ರಂಟ್ ಹೊತ್ತುಕೊಂಡಿದೆ.
ಉಗ್ರ ಸಂಘಟನೆ ದಾಳಿ ಬಗ್ಗೆ ಸಂದೇಶವನ್ನು ರವಾನಿಸಿದೆ. ಸಂದೇಶದಲ್ಲಿ ಇದು ಆರಂಭ, ಪ್ರವಾಸಿಗರು ಮತ್ತು ಸ್ಥಳೀಯರಲ್ಲದವರ ಮೇಲೆ ಹೆಚ್ಚಿನ ದಾಳಿ ನಡೆಸಲಾಗುವುದು ಎಂಬ ಎಚ್ಚರಿಕೆಯನ್ನು ನೀಡಿದೆ.
ಭಯೋತ್ಪಾದಕರ ಪತ್ತೆಗೆ ಭಾರತೀಯ ಸೇನೆ ವ್ಯಾಪಕ ಶೋಧ ಕಾರ್ಯಾಚರಣೆ ಆರಂಭಿಸಿದೆ. ಈ ಪ್ರದೇಶದಲ್ಲಿ ಭದ್ರತೆಯನ್ನು ಬಲಪಡಿಸಲಾಗಿದೆ. ದಾಳಿಯ ತನಿಖೆಯನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (NIA)ಗೆ ವಹಿಸಲಾಗಿದೆ ಎಂದು ಗೃಹ ಸಚಿವಾಲಯದ ಮೂಲಗಳು ತಿಳಿಸಿವೆ.
ಭಾನುವಾರ (ಜೂ.9) ಮಾತಾ ವೈಷ್ಣೋ ದೇವಿ ದೇಗುಲದ ಕತ್ರಾ ಮಾರ್ಗವಾಗಿ ಶಿವ ಖೋರಿ ದೇಗುಲದಿಂದ ಯಾತ್ರಾರ್ಥಿಗಳು ಬಸ್‍ನಲ್ಲಿ ಹಿಂತಿರುಗುತ್ತಿದ್ದ ವೇಳೆ ಉಗ್ರರು ದಾಳಿ ನಡೆಸಿದ್ದರು. ಏಕಾಏಕಿ ಉಗ್ರರು ಗುಂಡಿನ ದಾಳಿ ನಡೆಸಿದ್ದ ಪರಿಣಾಮ ಬಸ್ಸಿನ ಚಾಲಕನಿಗೆ ಬುಲೆಟ್ ತಗುಲಿ ವಾಹನ ಕಮರಿಗೆ ಉರುಳಿತ್ತು. ಘಟನೆಯಲ್ಲಿ ಬಸ್ ಕಂಡಕ್ಟರ್ ಮತ್ತು ಚಾಲಕ ಸೇರಿ 9 ಮಂದಿ ಸಾವನ್ನಪ್ಪಿದ್ದರು.
ಭಾರತವು 2023 ರಲ್ಲಿ ದಿ ರೆಸಿಸ್ಟೆನ್ಸ್ ಫ್ರಂಟ್‍ನ್ನು ಭಯೋತ್ಪಾದಕ ಸಂಘಟನೆ ಎಂದು ಗೊತ್ತುಪಡಿಸಿತು. ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನವನ್ನು ನೀಡಿದ 370ನೇ ವಿಧಿಯನ್ನು ರದ್ದುಗೊಳಿಸಿದ ನಂತರ ಈ ಸಂಘಟನೆ ಸ್ಥಾಪನೆಯಾಗಿತ್ತು. ಇದಾದ ಬಳಿಕ ಹಲವಾರು ಭಯೋತ್ಪಾಕ ಕೃತ್ಯಗಳಲ್ಲಿ ಸಂಘಟನೆ ಭಾಗಿಯಾಗಿತ್ತು.