ಇತ್ತೀಚೆಗಷ್ಟೇ ಸ್ಯಾಂಡಲ್ವುಡ್ ಜೋಡಿ ಚಂದನ್ ಶೆಟ್ಟಿ ಹಾಗೂ ನಿವೇದಿತಾ ಗೌಡ ಅವರು ವಿಚ್ಛೇದನ ಪಡೆದಿದ್ದಾರೆ. ಈ ಬೆನ್ನಲ್ಲೇ ಸ್ಯಾಂಡಲ್ವುಡ್ನಲ್ಲಿ ಮತ್ತೊಂದು ವಿಚ್ಛೇದನ ನಡೆದಿದೆ. ರಾಜ್ ಕುಮಾರ್ ಕುಟುಂಬದ ಕುಡಿ ಯುವ ಅವರು ವಿಚ್ಛೇದನ ಪಡೆಯಲು ಮುಂದಾಗಿದ್ದಾರೆ. ಪತ್ನಿ ಶ್ರೀದೇವಿಯಿಂದ ಡಿವೋರ್ಸ್ ಕೋರಿ ಅವರು ಕೌಟುಂಬಿಕ ನ್ಯಾಯಾಲಯದ ಮೆಟ್ಟಿಲೇರಿದ್ದಾರೆ. ಇಬ್ಬರ ಮಧ್ಯೆ ಕೆಲವು ವಿಚಾರಕ್ಕೆ ಮನಸ್ತಾಪ ಬಂದಿತ್ತು ಎನ್ನಲಾಗಿದೆ. ಈ ಕಾರಣಕ್ಕೆ ಇವರು ಬೇರೆ ಆಗುತ್ತಾರೆ.
ಯುವ ಹಾಗೂ ಶ್ರೀದೇವಿ ನಾಲ್ಕು ವರ್ಷಗಳ ಹಿಂದೆ ವಿವಾಹ ಆಗಿದ್ದರು. ಅನೇಕ ಸೆಲೆಬ್ರಿಟಿಗಳು ಇವರ ವಿವಾಹದಲ್ಲಿ ಭಾಗಿ ಆಗಿದ್ದರು. ಇವರದ್ದು ಲವ್ ಮ್ಯಾರೇಜ್. ಮದುವೆ ಬಳಿಕ ರಾಜ್ಕುಮಾರ್ ಅಕಾಡೆಮಿಯನ್ನು ಶ್ರೀದೇವಿ ನಡೆಸಿಕೊಂಡು ಹೋಗುತ್ತಿದ್ದರು. ಈಗ ಇವರ ಮಧ್ಯೆ ಮನಸ್ತಾಪ ಉಂಟಾಗಿದ್ದು ಬೇರಾಗುವ ನಿರ್ಧಾರಕ್ಕೆ ಬಂದಿದ್ದಾರೆ. ಪತ್ನಿಯಿಂದ ಅಗೌರವ ಹಾಗೂ ಮಾನಸಿಕ ಕ್ರೌರ್ಯ ಉಂಟಾಗಿದೆ ಎಂದು ಯುವ ವಿಚ್ಛೇದನ ಅರ್ಜಿಯಲ್ಲಿ ಉಲ್ಲೇಖ ಮಾಡಿದ್ದಾರೆ. ಸದ್ಯ ಸಮನ್ಸ್ ಜಾರಿ ಮಾಡಿ ಜುಲೈ 4ಕ್ಕೆ ಪ್ರಕರಣ ಮುಂದೂಡಲಾಗಿದೆ. ಸದ್ಯ ಶ್ರೀದೇವಿ ಅಮೆರಿಕದಲ್ಲಿ ಇದ್ದಾರೆ ಎನ್ನಲಾಗಿದೆ.
ಯುವ ಈಗತಾನೇ ಚಿತ್ರರಂಗದಲ್ಲಿ ಗುರುತಿಸಿಕೊಳ್ಳುತ್ತಿದ್ದಾರೆ. ಇತ್ತೀಚೆಗೆ ಅವರ ನಟನೆಯ ‘ಯುವ’ ಸಿನಿಮಾ ರಿಲೀಸ್ ಆಗಿ ಮೆಚ್ಚುಗೆ ಪಡೆದಿದೆ. ಅವರ ಹೊಸ ಸಿನಿಮಾದ ಬಗ್ಗೆ ಮಾತುಕತೆ ಕೂಡ ನಡೆಯುತ್ತಿದೆ. ಹೀಗಿರುವಾಗಲೇ ಅವರು ವಿಚ್ಛೇದನಕ್ಕೆ ಅರ್ಜಿ ಸಲ್ಲಿಕೆ ಮಾಡಿದ್ದು ಅವರ ಫ್ಯಾನ್ಸ್ಗೆ ಬೇಸರ ಮೂಡಿಸಿದೆ. ರಾಜ್ಕುಮಾರ್ ಕುಟುಂಬದಲ್ಲಿ ನಡೆಯುತ್ತಿರುವ ಮೊದಲ ವಿಚ್ಛೇದನ ಇದು. ಈ ಕಾರಣಕ್ಕೆ ಅಣ್ಣಾವ್ರ ಅಭಿಮಾನಿಗಳಿಗೆ ಶಾಕಿಂಗ್ ಎನಿಸಿದೆ.
ರಾಜ್ ಕುಮಾರ್ ಹಾಗೂ ಪಾರ್ವತಮ್ಮ ಒಟ್ಟಾಗಿ ಬಾಳಿದ್ದರು. ರಾಜ್ ಕುಮಾರ್ ನಟನೆ ಮಾಡಿದರೆ, ಪಾರ್ವತಮ್ಮ ನಿರ್ಮಾಣ ನೋಡಿಕೊಳ್ಳುತ್ತಿದ್ದರು. ಹಾಲು-ಜೇನಿನಂತೆ ಅವರ ಬದುಕು ನಡೆಯುತ್ತಿತ್ತು. ಈಗ ಅವರ ಮೊಮ್ಮಗನ ಸಂಸಾರದಲ್ಲಿ ಬಿರುಗಾಳಿ ಎದ್ದಿರುವುದು ಸಹಜವಾಗಿಯೇ ಚರ್ಚೆ ಹುಟ್ಟುಹಾಕಿದೆ.