ಚಿತ್ರದುರ್ಗ. ಜೂನ್11: ಜಿಲ್ಲೆಯಲ್ಲಿ ಪ್ರಸಕ್ತ ಸಾಲಿನ ಮುಂಗಾರು ಮಳೆಯು ರೈತರ ಮೊಗದಲ್ಲಿ ನೆಮ್ಮದಿ ಮತ್ತು ಸಂತಸ ಮೂಡಿಸಿದೆ. ಪ್ರಸ್ತುತ ಜಿಲ್ಲೆಯಾದ್ಯಂತ ಕೃಷಿ ಚಟುವಟಿಕೆಗಳು ಅತ್ಯಂತ ಬಿರುಸಿನಿಂದ ನಡೆಯುತ್ತಿದ್ದು, ಜಿಲ್ಲೆಯಲ್ಲಿ 25,045 ಮೆಟ್ರಿಕ್ ಟನ್ ರಸಗೊಬ್ಬರ ಹಾಗೂ 35,000 ಕ್ವಿಂಟಲ್ ಬಿತ್ತನೆ ಬೀಜದ ದಾಸ್ತಾನು ಮಾಡಲಾಗಿದ್ದು, ಬಿತ್ತನೆ ಬೀಜ ಹಾಗೂ ರಸಗೊಬ್ಬರ ವಿತರಣೆ ಕಾರ್ಯವು ಸುಗಮವಾಗಿ ನಡೆಯುತ್ತಿದೆ ಎಂದು ಜಂಟಿ ಕೃಷಿ ನಿರ್ದೇಶಕ ಬಿ.ಮಂಜುನಾಥ ಅವರು ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ವಾಡಿಕೆಗಿಂತ ಹೆಚ್ಚು ಮಳೆ : ಜಿಲ್ಲೆಯ ವಾರ್ಷಿಕ ಮಳೆಯು 540 ಮಿ.ಮೀ ಇದೆ. 2024ರ ಜನವರಿಯಿಂದ ಜೂನ್-10 ರವರೆಗೆ 127 ಮಿ.ಮೀ ವಾಡಿಕೆ ಮಳೆಯಾಗಬೇಕಿದ್ದು, ವಾಸ್ತವವಾಗಿ 203 ಮಿ.ಮೀ (ಹೆಚ್ಚುವರಿ ಶೇ.60) ಮಳೆ ಸುರಿದಿತ್ತು. ಬಳಿಕ ಜೂನ್-01 ರಿಂದ ಜೂನ್ 10ರ ವರೆಗಿನ 10 ದಿನಗಳಲ್ಲಿ 24 ಮಿ.ಮೀ ವಾಡಿಕೆ ಮಳೆಗಿಂತ 53 ಮಿ.ಮೀ ಮಳೆ (ಶೇ.121) ಸುರಿದಿದೆ. ಇದರಿಂದಾಗಿ ಜಿಲ್ಲೆಯಾದ್ಯಂತ ಕೃಷಿ ಚಟುವಟಿಕೆಗಳು ಹೆಚ್ಚು ಭರದಿಂದ ನಡೆಯುತ್ತಿವೆ.
35,000 ಕ್ವಿಂಟಾಲ್ ಬಿತ್ತನೆ ಬೀಜ ದಾಸ್ತಾನು: ಜಿಲ್ಲೆಯಲ್ಲಿ ಮುಂಗಾರು ಹಂಗಾಮಿಗೆ ಜೋಳ, ಮೆಕ್ಕೆಜೋಳ, ಸೂರ್ಯಕಾಂತಿ, ಶೇಂಗಾ, ತೊಗರಿ, ರಾಗಿ ಸೇರಿ ಒಟ್ಟು 31,801 ಕ್ವಿಂಟಾಲ್ ಬಿತ್ತನೆ ಬೀಜದ ಬೇಡಿಕೆ ಇದ್ದು, ಕೆಎಸ್‍ಎಸ್‍ಸಿ, ಎನ್‍ಎಸ್‍ಸಿ, ಕೆಒಎಫ್ ಸಂಸ್ಥೆಗಳು ಹಾಗೂ ಖಾಸಗಿ ಬಿತ್ತನೆ ಬೀಜ ಸರಬರಾಜುದಾರ ಸಂಸ್ಥೆಗಳಲ್ಲಿ 35,000 ಕ್ವಿಂಟಾಲ್ ಬಿತ್ತನೆ ಬೀಜ ದಾಸ್ತಾನಿದೆ. ರೈತರ ಬೇಡಿಕೆಗೆ ಅನುಗುಣವಾಗಿ ಬಿತ್ತನೆ ಬೀಜಗಳನ್ನು ರೈತ ಸಂಪರ್ಕ ಕೇಂದ್ರಗಳಲ್ಲಿ ದಾಸ್ತಾನು ಮಾಡಲಾಗಿದೆ. ವಿತರಣೆ ಕಾರ್ಯ ಪ್ರಾರಂಭವಾಗಿದ್ದು, 3228 ಕ್ವಿಂಟಾಲ್ ಬಿತ್ತನೆ ಬೀಜ ವಿತರಣೆಯಾಗಿದೆ.