ಧಾರವಾಡ ಜೂನ್.12: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಕವಿವಿ ವಿದ್ಯಾರ್ಥಿ ಕಲ್ಯಾಣ ವಿಭಾಗ, ಸ್ನಾತಕೋತ್ತರ ಕ್ರೀಡಾಕೂಟ ವಿಭಾಗ, ಮಹಿಳಾ ಸಂಶೋಧನಾ ಅಧ್ಯಯನ ಕೇಂದ್ರ, ಸ್ನಾತಕೋತ್ತರ ಸಮಾಜಕಾರ್ಯ ಅಧ್ಯಯನ ವಿಭಾಗಗಳ ಸಹಯೋಗದಲ್ಲಿ ಇಂದು ಮಧ್ಯಾಹ್ನ (ಜೂ.12) ಕರ್ನಾಟಕ ವಿಶ್ವವಿದ್ಯಾಲಯ ಆವರಣದಲ್ಲಿ ಮಹಿಳಾ ಸುರಕ್ಷತೆ ಕುರಿತಂತೆ ಅರಿವು ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅಪರ ಜಿಲ್ಲಾಧಿಕಾರಿ ಗೀತಾ ಸಿ.ಡಿ. ಅವರು, ಮಹಿಳೆಯರು ಮತ್ತು ವಿದ್ಯಾರ್ಥಿಗಳು ತಮ್ಮ ವಿದ್ಯಾರ್ಥಿ ಜೀವನದಲ್ಲಿ ತಂದೆ-ತಾಯಿಗಳಿಗೆ ಗೌರವ ತರುವಂತಹ ರೀತಿಯಲ್ಲಿ ನಡೆದುಕೊಳ್ಳಬೇಕೆಂದು ತಿಳಿಸಿದರು. ಹಿರಿಯ ಸಿವ್ಹಿಲ್ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಪಿ.ಎಫ್.ದೊಡ್ಡಮನಿ ಅವರು ಮಾತನಾಡಿ, ಮಹಿಳೆಯರು ಮತ್ತು ವಿದ್ಯಾರ್ಥಿಗಳು ಕಾನೂನಿನಲ್ಲಿ ಇರುವಂತಹ ಎಲ್ಲ ಸೌಲಭ್ಯಗಳನ್ನು ಪಡೆದುಕೊಂಡು ಜಾಗೃತಿ ಹೊಂದುವುದರ ಜೊತೆಗೆ ಸಮಾಜದ ಮುಖ್ಯವಾಹಿನಿಯಲ್ಲಿ ಜಾಗರೂಕತೆಯಿಂದ ಇರಬೇಕೆಂದು ಮತ್ತು ಎಲ್ಲ ಮಹಿಳೆಯರು ವಿದ್ಯಾರ್ಥಿಗಳು ಉಚಿತ ಕಾನೂನು ಸೇವಾ ಪ್ರಾಧಿಕಾರದ ಸದುಪಯೋಗ ಪಡೆದುಕೊಳ್ಳಬೇಕೆಂದು ತಿಳಿಸಿದರು.
ಹುಬ್ಬಳ್ಳಿ-ಧಾರವಾಡ ಉಪಪೊಲೀಸ್ ಆಯುಕ್ತರಾದ ರವೀಶ್ ಸಿ.ಆರ್ ಅವರು ಮಾತನಾಡಿ, ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ದೂರವಾಣಿ, ಮೊಬೈಲ್, ಅಂತರ್ಜಾಲವನ್ನು ಶಿಕ್ಷಣಕ್ಕಾಗಿ ಸರಿಯಾದ ರೀತಿಯಲ್ಲಿ ಸದುಪಯೋಗ ಮಾಡಿಕೊಳ್ಳಬೇಕು. ಫೇಸ್ ಬುಕ್, ಇನ್‍ಸ್ಟಾಗ್ರಾಂ ನಂತಹ ಸಾಮಾಜಿಕ ಮಾಧ್ಯಮಗಳಿಂದ ದೂರವಿದ್ದು, ಪುಸ್ತಕಗಳನ್ನು ಓದುವುದರಿಂದ ಜ್ಞಾನ ವಿಸ್ತಾರವಾಗಿ ಜೀವನದಲ್ಲಿ ಗುರಿ ಸಾಧಿಸಲು ಸಾಧ್ಯವಾಗುತ್ತದೆ ಎಂದು ಅವರು ಹೇಳಿದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕಿ ಪದ್ಮಾವತಿ ಜಿ., ಅವರು ಮಾತನಾಡಿ, ವಿದ್ಯಾರ್ಥಿಗಳು, ತಮ್ಮ ವಿದ್ಯಾರ್ಥಿ ಜೀವನವನ್ನು ಸರಿಯಾಗಿ ರೂಪಿಸಿಕೊಂಡರೆ, ಮುಂದಿನ ದಿನಮಾನಗಳಲ್ಲಿ ಉನ್ನತ ಸ್ಥಾನ ಪಡೆದು ಸಾಧಕರಾಗಬಹುದು ಎಂದು ತಿಳಿಸಿದರು.
ಜಿಲ್ಲಾ ಆರೋಗ್ಯಾಧಿಕಾರಿ ಡಾ.ಶಶಿ ಪಾಟೀಲ ಅವರು ಮಾತನಾಡಿ, ಈಗೀನ ದಿನಮಾನಗಳಲ್ಲಿ ಮಹಿಳೆಯರು ಮತ್ತು ವಿದ್ಯಾರ್ಥಿಗಳು ಜೀವನದಲ್ಲಿ ಮಾನಸಿಕ ಒತ್ತಡದಿಂದಾಗಿ ಆತ್ಮಹತ್ಯೆ ಅಂತಹ ಹೀನ ಕೃತ್ಯಗಳಿಗೆ ಒಳಗಾಗುತ್ತಿದ್ದಾರೆ. ಅಂತಹ ಮಹಿಳೆಯರು ಮತ್ತು ವಿದ್ಯಾರ್ಥಿಗಳಿಗೆ ಆಪ್ತಸಮಾಲೋಚನೆ ಮಾಡಿ, ಮಾನಸಿಕ ಒತ್ತಡಿಂದ ದೂರವಿರಲು ನಮ್ಮ ಇಲಾಖೆಯಿಂದ “ಟೆಲಿ ಮಾನಸಾ” ಯೋಜನೆಯನ್ನು ಜಾರಿಗೊಳಿಸಲಾಗಿದೆ. ಇದರ ಸದುಪಯೋಗಪಡೆದುಕೊಂಡು ಮಹಿಳೆಯರು ಮತ್ತು ವಿದ್ಯಾರ್ಥಿಗಳು ಜಾಗೃತಿ ಹೊಂದುವುದರ ಜೊತೆಗೆ ಆರೋಗ್ಯಕರ ಜೀವನಶೈಲಿಯನ್ನು ತಮ್ಮದಾಗಿಸಿಕೊಳ್ಳಬೆಕೆಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ್ದ, ಕರ್ನಾಟಕ ವಿಶ್ವವಿದ್ಯಾಲಯ ಕುಲಸಿಚಿವ ಚನ್ನಪ್ಪ ಎ. ಅವರು ಮಾತನಾಡಿ, ವಿದ್ಯಾರ್ಥಿಗಳು ಯಾವುದೇ ಸಮಯದಲ್ಲಿಯೂ ಸಹ ಎಂತಹ ಸಮಸ್ಯೆಗಳು ಎದುರಾದರೂ ಅವುಗಳನ್ನು ಎದುರಿಸಿ ನಿಲ್ಲುವ ಮನೋಭಾವನೆಯನ್ನು ಬೆಳೆಸಿಕೊಂಡು ವಿದ್ಯಾರ್ಥಿಗಳು ಜಾಗೃತಿ ವಹಿಸಿಬೆಕೆಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಜಿಲ್ಲಾ ಅಧಿಕಾರಿ ಗೋಪಾಲ ಲಮಾಣಿ ಸೇರಿದಂತೆ ವಿವಿಧ ವಿಭಾಗಗಳ ಪ್ರಾಧ್ಯಾಪಕರು, ಸಿಬ್ಬಂದಿಗಳು, ಇಲಾಖೆಗಳ ಅಧಿಕಾರಿಗಳು, ಕವಿವಿ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.