ಚಿತ್ರದುರ್ಗ, ಜೂ.12 : ಗ್ರಾಮ ಪಂಚಾಯಿತಿಗಳಲ್ಲಿ ಮಹಿಳಾ ನೌಕರರನ್ನು ಪಂಚಾಯಿತಿ ನೌಕರರೆಂದು ಪರಿಗಣಿಸುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಕರ್ನಾಟಕ ರಾಜ್ಯ ಗ್ರಾಮ ಪಂಚಾಯಿತಿ ಮಹಿಳಾ ಸ್ವಚ್ಚ ವಾಹಿನಿ ಆಟೋ ಚಾಲಕರು ಹಾಗೂ ಸಹಾಯಕರ ಸಂಘ ಜಿಲ್ಲಾ ಸಮಿತಿಯಿಂದ ಜಿಲ್ಲಾ ಪಂಚಾಯಿತಿ ಎದುರು ಬುಧವಾರದಿಂದ ಅನಿರ್ಧಿಷ್ಠಾವಧಿ ಧರಣಿ ಆರಂಭಗೊಂಡಿದೆ.
ಬಾಕಿ ವೇತನ ಹಾಗೂ ವರ್ಷ ಪೂರ್ತಿ ವೇತನ ನೀಡಬೇಕು. ತರಬೇತಿ ಪಡೆದ ಎಲ್ಲರಿಗೂ ನೌಕರಿ ಹಾಗೂ ಸರ್ಕಾರಿ ಆದೇಶದಂತೆ ಆಟೋ ನೀಡಬೇಕು. ಗ್ರಾಮ ಪಂಚಾಯಿತಿಗಳಲ್ಲಿ ಹಾಜರಾತಿ ಬುಕ್ ಇಡಬೇಕು. ಪಂಚಾಯಿತಿಗಳಲ್ಲಿ ಗುರುತಿನ ಚೀಟಿ ನೀಡಿ ಪ್ರತಿ ತಿಂಗಳು ವೇತನ ಪಾವತಿಸಬೇಕು. ಪ್ರತಿ ತಿಂಗಳು ಉಚಿತ ಆರೋಗ್ಯ ತಪಾಸಣೆಯಾಗಬೇಕು. ಕೆಲಸ ಮಾಡುವವರಿಗೆ ಕಡ್ಡಾಯವಾಗಿ ಗ್ಲೌಸ್ ಮತ್ತು ಮಾಸ್ಕ್ ನೀಡಬೇಕು.
ಶಾಸನಬದ್ದ ಅನುದಾನದಲ್ಲಿಯೇ ವರ್ಷ ಪೂರ್ತಿ ವೇತನ ನೀಡಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಆದೇಶಿಸಬೇಕು. ಇಲ್ಲವಾದಲ್ಲಿ ಜಾಗ ಬಿಟ್ಟು ಕದಲುವುದಿಲ್ಲ ಎಂದು ಪ್ರತಿಭಟನಾನಿರತ ಮಹಿಳೆಯರು ಪಟ್ಟು ಹಿಡಿದರು.
ಪ್ರತಿಭಟನೆ ನೇತೃತ್ವ ವಹಿಸಿದ್ದ ಕರ್ನಾಟಕ ರಾಜ್ಯ ಗ್ರಾಮ ಪಂಚಾಯಿತಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಡಿ.ಎಂ.ಮಲಿಯಪ್ಪ ಮಾತನಾಡಿ ಅನೇಕ ಬಾರಿ ಪ್ರತಿಭಟನೆ ನಡೆಸಿ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿದ್ದರೂ ಇದುವರೆವಿಗೂ ಯಾವ ಬೇಡಿಕೆಗಳು ಈಡೇರಿಲ್ಲ. ಜಿಲ್ಲೆಯ ಆರು ತಾಲ್ಲೂಕಿನ ಕಾರ್ಯನಿರ್ವಾಹಕ ಅಧಿಕಾರಿಗಳು ಹಾಗೂ ಪಿ.ಡಿ.ಓ.ಗಳ ಸಭೆ ನಡೆಸಿ ಎಲ್ಲರಿಗೂ ವೇತನ ನೀಡುವ ಕುರಿತು ತೀರ್ಮಾನ ತೆಗೆದುಕೊಂಡು ನ್ಯಾಯಯುತವಾದ ಬೇಡಿಕೆಗಳನ್ನು ಈಡೇರಿಸಬೇಕು.
ಇಲ್ಲವಾದಲ್ಲಿ ಮುಂದೆ ಆಗುವ ಅನಾಹುತಗಳಿಗೆ ನೀವುಗಳೆ ಜವಾಬ್ದಾರರು ಎಂದು ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿಗೆ ಎಚ್ಚರಿಸಿದರು. ಜಯಲಕ್ಷ್ಮಿ ವೈ. ಎನ್.ನಿಂಗಮ್ಮ, ಸಂಗೀತ, ರೇಖ, ತನುಜ, ಆಶಾ, ಅಕ್ಷತಾ, ಆಶಾ ರಾಣಿ, ಸುನಿತಾ ಇನ್ನು ಅನೇಕರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.