ಚಿತ್ರದುರ್ಗ, ಜೂ.13 : ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಈಗಾಗಲೇ ದರ್ಶನ್ ಅಂಡ್ ಗ್ಯಾಂಗ್ ಅನ್ನು ಅರೆಸ್ಟ್ ಮಾಡಿ ಬೆಂಡೆತ್ತುತ್ತಿದ್ದಾರೆ. ಕೊಲೆ ಮಾಡಿದ ಸ್ಥಳ, ಕೊಲೆ ಮಾಡಿದ್ದು ಹೇಗೆ ಎಂಬೆಲ್ಲಾ ವಿಚಾರಗಳನ್ನು ಈಗಾಗಲೇ ತನಿಖಾಧಿಕಾರಿಗಳು ಕಲೆ ಹಾಕಿದ್ದಾರೆ. ತನಿಖೆ ಮುಂದುವರೆದಿದೆ.
ಈ ಕೇಸಲ್ಲಿ ಸದ್ಯ ದರ್ಶನ್ ಸೇರಿದಂತೆ ಹದಿಮೂರು ಜನರನ್ನು ಬಂಧಿಸಲಾಗಿದೆ. ಆದರೆ ಈ ಕೊಲೆ ಕೇಸಲ್ಲಿ ಇನ್ವಾಲ್ ಆಗಿದ್ದದ್ದು ಹದಿನೇಳು ಜನ ಎಂದೇ ಹೇಳಲಾಗುತ್ತಿದೆ. ಉಳಿದವರು ಎಸ್ಕೇಪ್ ಆಗಿದ್ದರು. ಇದೀಗ ನಾಪತ್ತೆಯಾಗಿದ್ದ ಆರೋಪಿಯಲ್ಲಿ ರವಿ ಇಂದು ಪೊಲೀಸರಿಗೆ ಶರಣಾಗಿದ್ದಾನೆ.
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಾಪತ್ತೆಯಾಗಿದ್ದ ರವಿ 8ನೇ ಆರೋಪಿಯಾಗಿದ್ದಾನೆ. ಇಂದು ಪೊಲೀಸರಿಗೆ ಶರಣಾಗಿದ್ದು, ಈತ ದಂಡಿನ ಕುರಬರಹಟ್ಟಿ ನಿವಾಸಿಯಾಗಿದ್ದಾನೆ. ಸದ್ಯ ಶರಣಾಗಿರುವ ಆರೋಪಿ ಡಿವೈಎಸ್ಪಿ ದಿನಕರನ್ ವಶದಲ್ಲಿದ್ದಾನೆ.
ಚಿತ್ರದುರ್ಗದ ರೇಣುಕಾ ಸ್ವಾಮಿ ಕೊಲೆ ಕೇಸ್ ನ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ದರ್ಶನ್, ಪವಿತ್ರ ಗೌಡ ಸೇರಿದಂತೆ ಒಟ್ಟು 13 ಮಂದಿ ಆರೋಪಿಗಳು ಪೊಲೀಸರ ವಶದಲ್ಲಿದ್ದಾರೆ. 17 ಜನರ ಪೈಕಿ ಈಗಾಗಲೇ 13 ಆರೋಪಿಗಳು ಪೊಲೀಸರ ವಶದಲ್ಲಿದ್ದು, ನಾಲ್ವರು ಆರೋಪಿಗಳು ತಲೆಮರೆಸಿಕೊಂಡಿದ್ದರು. ಇದೀಗ ತಲೆಮರೆಸಿಕೊಂಡಿದ್ದ ರವಿ ನೇರವಾಗಿ ಬಂದು ಪೊಲೀಸರಿಗೆ ಶರಣಾಗಿದ್ದಾನೆ.
ಪವಿತ್ರ ಗೌಡಗೆ ಅಶ್ಲೀಲ ಮೆಸೇಜ್ ಮಾಡಿದ ಎಂದು ಚಿತ್ರದುರ್ಗದ ರೇಣುಕಾ ಸ್ವಾಮಿ ಅವರನ್ನು ಬೆಂಗಳೂರಿಗೆ ಕರೆಸಿಕೊಂಡು ದರ್ಶನ್ ಅಂಡ್ ಟೀಮ್ ಚಿತ್ರ ಹಿಂಸೆ ನೀಡಿ ಕೊಲೆ ಮಾಡಿ, ಮೃತ ದೇಹವನ್ನು ಮೊರಿಯಲ್ಲಿ ಬೀಡಾಡಿ ಹೋಗಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ದರ್ಶನ್ ಮತ್ತು ಟೀಂ ನ್ನು ಕಾಮಾಕ್ಷಿಪಾಳ್ಯ ಪೊಲೀಸರು ಬಂಧಿಸಿ ವಿಚಾರಣೆ ನಡೆಸಿದ್ದರು. ಬಳಿಕ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದು, ಆರು ದಿನಗಳ ಕಾಲ ಪೊಲೀಸ್ ಕಸ್ಟಡಿಯಲ್ಲಿ ಇರುವಂತೆ ನ್ಯಾಯಾಲಯ ಆದೇಶ ಹೊರಡಿಸಿತ್ತು.