ಚಿತ್ರದುರ್ಗ : ರೋಟರಿ ಕ್ಲಬ್ ಚಿತ್ರದುರ್ಗ ವತಿಯಿಂದ ಹೊಳಲ್ಕೆರೆ ರಸ್ತೆಯಲ್ಲಿ ಗಿಡ ನೆಡುವ ಮೂಲಕ ವಿಶ್ವ ಪರಿಸರ ದಿನಾಚರಣೆ ಆಚರಿಸಲಾಯಿತು. ರೋಟರಿ ಕ್ಲಬ್ ಚಿತ್ರದುರ್ಗ ಅಧ್ಯಕ್ಷ ಕನಕರಾಜ್ ಗಿಡ ನೆಟ್ಟು ಮಾತನಾಡುತ್ತ 1973 ರಿಂದಲೂ ಪ್ರತಿ ವರ್ಷ ವಿಶ್ವ ಪರಿಸರ ದಿನಾಚರಣೆಯನ್ನು ಆಚರಿಸಿಕೊಂಡು ಬರಲಾಗುತ್ತಿದೆ.
ರಸ್ತೆ ಅಗಲೀಕರಣದ ಸಂದರ್ಭದಲ್ಲಿ ರಸ್ತೆ ಬದಿಯಲ್ಲಿದ್ದ ದೊಡ್ಡ ದೊಡ್ಡ ಮರಗಳನ್ನು ಕಡಿಯಲಾಗಿದೆ. ಇದಕ್ಕೆ ಪರ್ಯಾಯವಾಗಿ ರಸ್ತೆ ಬದಿಯಲ್ಲಿ ಗಿಡಗಳನ್ನು ನೆಟ್ಟು ಪೋಷಿಸಬೇಕಾಗಿದೆ. ಗಿಡ-ಮರಗಳನ್ನು ಕಡಿದು ನಾಶಪಡಿಸುವುದರಿಂದ ಪರಿಸರದಲ್ಲಿ ಅಸಮತೋಲನ ಉಂಟಾಗಿ ಸಮಯಕ್ಕೆ ಸರಿಯಾಗಿ ಮಳೆ ಬರುವುದಿಲ್ಲ. ಹಾಗಾಗಿ ಪರಿಸರ ಸಂರಕ್ಷಣೆ ಕುರಿತು ಎಲ್ಲರಲ್ಲಿಯೂ ಜಾಗೃತಿ ಮೂಡಬೇಕು ಎಂದು ತಿಳಿಸಿದರು.
ನಗರಸಭೆ ಪೌರಾಯುಕ್ತರಾದ ಶ್ರೀಮತಿ ರೇಣುಕ ಮಾತನಾಡಿ ಪ್ರತಿಯೊಬ್ಬರು ಒಂದೊಂದು ಗಿಡ ನೆಡುವ ಮೂಲಕ ವಿಶ್ವ ಪರಿಸರ ದಿನಾಚರಣೆಯನ್ನು ಆಚರಿಸಬೇಕು. ಆಗ ಮುಂದಿನ ಪೀಳಿಗೆಗೆ ಹಸಿರು ಪರಿಸರವನ್ನು ಕೊಡುಗೆಯಾಗಿ ನೀಡಬಹುದು. ಗಿಡ-ಮರಗಳಿಲ್ಲದಿದ್ದರೆ ಮಾನವನ ಉಸಿರಾಟಕ್ಕೆ ಶುದ್ದವಾದ ಗಾಳಿ ಸಿಗುವುದಿಲ್ಲ ಎಂದು ಹೇಳಿದರು.
ರೋಟರಿ ಕ್ಲಬ್ ಚಿತ್ರದುರ್ಗ ನಿಯೋಜಿತ ಅಧ್ಯಕ್ಷ ವೀರಣ್ಣ, ಜಿ.ಎ.ವಿಶ್ವನಾಥ್, ಜಯಶ್ರಿಷಾ, ತರುಣ್‍ಷಾ, ಶಿವಣ್ಣ, ಗುರುರಾಜ್, ಹೆಗ್ಗನಗೌಡ್ರು, ಡಾ.ತಿಪ್ಪೇಸ್ವಾಮಿ, ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಶಿವರಶ್ಮಿ ಅಕ್ಕ ಇನ್ನು ಅನೇಕರು ವಿಶ್ವಪರಿಸರ ದಿನಾಚರಣೆಯಲ್ಲಿ ಭಾಗವಹಿಸಿದ್ದರು.