Breaking
Tue. Dec 24th, 2024

ಶಕ್ತಿ ಯೋಜನೆಯಡಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಚಿತ್ರದುರ್ಗ ವಿಭಾಗಕ್ಕೆ ಮಹಿಳೆಯರಿಗೆ ನೀಡಿರುವ ಶೂನ್ಯ ದರದ ಟಿಕೆಟ್ ನೀಡಿಕೆ ಮೂಲಕ ರೂ.85.71 ಕೋಟಿ ಆದಾಯ….!

ಚಿತ್ರದುರ್ಗ. ಜೂನ್14 : ರಾಜ್ಯ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಶಕ್ತಿ ಯೋಜನೆ ಜಾರಿಯಾಗಿ ವರ್ಷ ತುಂಬಿದೆ. ಈ ಯೋಜನೆಯಡಿ ಕಳೆದ ಒಂದು ವರ್ಷದಲ್ಲಿ ಜಿಲ್ಲೆಯ ಸಾರಿಗೆ ಸಂಸ್ಥೆಯ ಬಸ್‍ಗಳಲ್ಲಿ 2.21 ಕೋಟಿ ನಾರಿಯರು ಉಚಿತ ಪ್ರಯಾಣ ಬೆಳೆಸಿರುವುದು ಗಮನಾರ್ಹ.
ಮಹಿಳಾ ಸಬಲೀಕರಣ ಉದ್ದೇಶದಿಂದ ಜಾರಿಗೊಳಿಸಿದ ಮಹಿಳೆಯರಿಗೆ ಉಚಿತ ಸಾರಿಗೆ ಸೇವೆ ನೀಡುವ ಶಕ್ತಿ ಯೋಜನೆಯಡಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಚಿತ್ರದುರ್ಗ ವಿಭಾಗಕ್ಕೆ ಮಹಿಳೆಯರಿಗೆ ನೀಡಿರುವ ಶೂನ್ಯ ದರದ ಟಿಕೆಟ್ ನೀಡಿಕೆ ಮೂಲಕ ರೂ.85.71 ಕೋಟಿ ಆದಾಯ ಲಭಿಸಿದೆ.
ಮಹಿಳೆಯರು, ವಿದ್ಯಾರ್ಥಿನಿಯರು ಮತ್ತು ಲಿಂಗತ್ವ ಅಲ್ಪಸಂಖ್ಯಾತರು ಸೇರಿದಂತೆ ಸಮಸ್ತ ನಾರಿಯರ ಸಂಚಾರಕ್ಕೆ ಶಕ್ತಿಯನ್ನು ನೀಡಿದೆ ರಾಜ್ಯ ಸರ್ಕಾರದ ಶಕ್ತಿ ಯೋಜನೆ. ಇದರ ಮೂಲಕ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ನಗರ ಸಾರಿಗೆ, ಸಾಮಾನ್ಯ ಮತ್ತು ವೇಗದೂತ ಬಸ್ಸುಗಳಲ್ಲಿ ರಾಜ್ಯಾದ್ಯಂತ ಉಚಿತವಾಗಿ ಪ್ರಯಾಣಿಸಲು ನಾರಿಯರಿಗೆ ಅವಕಾಶ ಲಭಿಸಿದ್ದು, ಜಿಲ್ಲೆಯಲ್ಲಿ ವಾರ್ಷಿಕ ರೂ.85.71 ಕೋಟಿ ವಹಿವಾಟುನೊಂದಿಗೆ ಶಕ್ತಿ ಯೋಜನೆಯು ಮುಂದುವರೆದಿದ್ದು, ಶಕ್ತಿ ಯೋಜನೆಗೆ ಚಾಲನೆ ನೀಡಿದ 2023 ರ ಜೂನ್ 11 ಮೊದಲ ದಿನದಿಂದಲೂ ಇಂದಿನವರೆಗೂ ಮಹಿಳಾ ಪ್ರಯಾಣಿಕರು ಹೆಚ್ಚಿನ ಸಂಖ್ಯೆಯಲ್ಲಿ ಯೋಜನೆಯನ್ನು ಬಳಸಿಕೊಳ್ಳುತ್ತಿದ್ದಾರೆ.
ಸಕಾರದ ಶಕ್ತಿ ಯೋಜನೆಯು ಸಾಮಾಜಿಕ ಕ್ಷೇತ್ರದಲ್ಲಿ ಹಲವು ರೀತಿಯ ಬದಲಾವಣೆಗೆ ಸಾಕ್ಷಿಯಾಗಿದೆ. ಮುಖ್ಯವಾಗಿ ಗ್ರಾಮೀಣ ಭಾಗದಿಂದ ನಗರ ಪಟ್ಟಣಗಳಿಗೆ ತೆರಳಿ ದುಡಿಯುವ ಮಹಿಳೆಯರಿಗೆ ವರದಾನವಾಗಿದೆ. ಖಾಸಗಿ ಹಾಗೂ ಅಸಂಘಟಿತ ವಲಯಗಳಲ್ಲಿ ಕೆಲಸ ನಿರ್ವಹಿಸುವ ಮಹಿಳೆಯರು ಸಂಚಾರಿ ವೆಚ್ಚದಿಂದ ಮುಕ್ತರಾಗಿದ್ದಾರೆ.
ಮಹಿಳೆಯರು ಸಾಮಾನ್ಯವಾಗಿ ದುಡಿಯಲೆಂದೆ ತಮ್ಮ ತಿಂಗಳ ಆದಾಯದ ಶೇ.10ರಷ್ಟು ಹಣವವನ್ನು ಸಂಚಾರಕ್ಕಾಗಿ ವ್ಯಯಿಸಬೇಕಿತ್ತು. ಇನ್ನು ಶಾಲಾ-ಕಾಲೇಜು ವಿದ್ಯಾರ್ಥಿನಿಯರು ವಾರ್ಷಿಕ ಪಾಸ್ ಪಡೆಯಲು ನೀಡಬೇಕಿದ್ದ ಹಣದಲ್ಲಿಯೂ ಉಳಿತಾಯವಾಗಿದೆ. ಉದ್ಯೋಗ, ಶಿಕ್ಷಣ ಹಾಗೂ ಪ್ರವಾಸ ಸೇರಿದಂತೆ ಹಲವು ಚಟುವಟಿಕೆಗಳಿಗೆ ಶಕ್ತಿ ಯೋಜನೆಯಿಂದ ಶಕ್ತಿ ಲಭಿಸಿದೆ.
ಕೆಎಸ್‍ಆರ್‍ಟಿಸಿ ಬಸ್‍ಗಳ ಭರ್ತಿಯ ಜೊತೆಗೆ ನಾರಿಯರು ಆದಾಯ ಹೆಚ್ಚಿಸಿದ್ದಾರೆ. ಧಾರ್ಮಿಕ ಕೇಂದ್ರ ಹಾಗೂ ಪ್ರವಾಸಿ ತಾಣಗಳಿಗೂ ಭೇಟಿ ನೀಡುವವರ ಸಂಖ್ಯೆಯೂ ಹೆಚ್ಚಳಕ್ಕೆ ಕಾರಣವಾಗಿದೆ. ಇದರಿಂದ ಧಾರ್ಮಿಕ ಕೇಂದ್ರಗಳಲ್ಲೂ ದೇಣಿಗೆ ಸಂಗ್ರಹವೂ ಸಹ ದುಪ್ಪಾಟ್ಟಾಗಿದೆ.
20 ಹೆಚ್ಚುವರಿ ಮಾರ್ಗ: ಶಕ್ತಿ ಯೋಜನೆ ಜಾರಿಯಾದ ನಂತರ ಪ್ರಯಾಣಿಕರಿಗೆ ಅನುಕೂಲವಾಗುವಂತೆ ಜಿಲ್ಲೆಯಾದ್ಯಂತ 20 ಕ್ಕೂ ಹೆಚ್ಚು ಹೆಚ್ಚುವರಿ ಮಾರ್ಗಗಳನ್ನು ಹೆಚ್ಚಿಸಲಾಗಿದ್ದು, ಪ್ರಯಾಣ ಜನಸಂದಣಿಗೆ ಅನುಗುಣವಾಗಿ ಬೇಡಿಕೆಗೆ ಅನುಸಾರವಾಗಿ ವಾಹನಗಳನ್ನು ಕಾರ್ಯಾಚರಣೆ ಮಾಡಲಾಗುತ್ತಿದೆ.
30 ಹೊಸ ವಾಹನ ಸೇರ್ಪಡೆ: ಕೆಎಸ್‍ಆರ್‍ಟಿಸಿ ಚಿತ್ರದುರ್ಗ ವಿಭಾಗಕ್ಕೆ ಅಶ್ವಮೇಧ, ವೇಗದೂತ ಸೇರಿದಂತೆ 30 ಹೊಸ ವಾಹನಗಳು ಸೇರ್ಪಡೆಯಾಗಿವೆ. ಬೇಡಿಕೆ ಅನುಸಾರ ವಾಹನ ಕಾರ್ಯಾಚರಣೆಗೆ ಕ್ರಮ: ಶಕ್ತಿ ಯೋಜನೆ ಜಾರಿಯಾದಾಗಿನಿಂದ ಪ್ರತಿದಿನ ಸರಾಸರಿ 60 ಸಾವಿರಕ್ಕೂ ಹೆಚ್ಚು ಮಹಿಳೆಯರು ಚಿತ್ರದುರ್ಗ ಜಿಲ್ಲೆಯಿಂದ ವಿವಿಧ ಮಾರ್ಗಗಳ ಬಸ್‍ಗಳಲ್ಲಿ ಉಚಿತವಾಗಿ ಪ್ರಯಾಣಿಸುತ್ತಿದ್ದಾರೆ.
ಕಳೆದ ಒಂದು ವರ್ಷದಲ್ಲಿ ಜಿಲ್ಲೆಯ ಸಾರಿಗೆ ಸಂಸ್ಥೆಯ ಬಸ್‍ಗಳಲ್ಲಿ 2.21 ಕೋಟಿ ನಾರಿಯರು ಉಚಿತ ಪ್ರಯಾಣ ಮಾಡಿದ್ದು, ರೂ.85.71 ಕೋಟಿ ಆದಾಯ ಲಭಿಸಿದೆ. ಶಕ್ತಿ ಯೋಜನೆಯಿಂದ ಸಾರಿಗೆ ಸಂಸ್ಥೆಗೆ ವಾರ್ಷಿಕ ಆದಾಯ ಹೆಚ್ಚಾಗಿದೆ. ಮಾರ್ಗಸೂಚಿ ಹಾಗೂ ಬಸ್ ಬೇಡಿಕೆಗಳನ್ನು ಪರಿಗಣಿಸಿ ಹೆಚ್ಚುವರಿ ಮಾರ್ಗಗಳಿಗೆ ಪ್ರಯಾಣ ಜನಸಂದಣಿಗೆ ಅನುಗುಣವಾಗಿ ವಾಹನ ಕಾರ್ಯಾಚರಣೆ ಮಾಡಲು ತಕ್ಷಣ ಕ್ರಮಕೈಗೊಳ್ಳಲಾಗುವುದು ಎನ್ನುತ್ತಾರೆ ಕೆಎಸ್‍ಆರ್‍ಟಿಸಿ ಚಿತ್ರದುರ್ಗ ವಿಭಾಗದ ವಿಭಾಗೀಯ ನಿಯಂತ್ರಣಾಧಿಕಾರಿ ಸಿದ್ದೇಶ್ವರ ಹೆಬ್ಬಾಳ್.
ಶಕ್ತಿ ಯೋಜನೆಯಿಂದ ಬಹಳಷ್ಟು ಅನುಕೂಲ: ಕೆಎಸ್‍ಆರ್‍ಟಿಸಿ ಬಸ್‍ಗಳಲ್ಲಿ ಉಚಿತ ಪ್ರಯಾಣ ಇರುವುದರಿಂದ ಬಹಳ ಅನುಕೂಲವಾಗಿದೆ. ಆಧಾರ್ ಕಾರ್ಡ್ ತೋರಿಸಿದರೆ ಸಾಕು ನಯಾಪೈಸೆ ಇಲ್ಲದಿದ್ದರೂ ಬಸ್‍ನಲ್ಲಿ ಪ್ರಯಾಣ ಬೆಳೆಸಬಹುದಾಗಿದೆ. ರಾಜ್ಯ ಸರ್ಕಾರದ ಈ ಯೋಜನೆಯಿಂದ ಮಹಿಳೆಯರಿಗೆ ಬಹಳಷ್ಟು ಅನುಕೂಲವಾಗುತ್ತಿದೆ ಎನ್ನುತ್ತಾರೆ ಚಳ್ಳಕೆರೆ ತಾಲ್ಲೂಕಿನ ಕುರುಡಿಹಳ್ಳಿಯ ಗೌರಮ್ಮ.

Related Post

Leave a Reply

Your email address will not be published. Required fields are marked *