ಬೆಂಗಳೂರು, ಜೂನ್ 14 : ನಟ ದುನಿಯಾ ವಿಜಯ್ ವಿಚ್ಛೇದನಕ್ಕೆ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಿನ್ನೆ ನಡೆದಿದ್ದು, ಅರ್ಜಿ ವಜಾ ಆಗಿದೆ. 2018ರಲ್ಲಿಯೇ ಪತ್ನಿ ನಾಗರತ್ನ ಅವರಿಂದ ವಿಚ್ಛೇದನ ಬೇಕು ಎಂದು ದುನಿಯಾ ವಿಜಯ್ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯ ವಿಚಾರಣೆ ನಡೆಸಿದ ಶಾಂತಿನಗರದ ಕೌಟುಂಬಿಕ ನ್ಯಾಯಾಲಯದ ಅರ್ಜಿಯನ್ನು ವಜಾಗೊಳಿಸಿದೆ.
ಈ ಬಗ್ಗೆ ದುನಿಯಾ ವಿಜಯ್ ಮೊದಲ ಪತ್ನಿ ನಾಗರತ್ನ ಖುಷಿ ವ್ಯಕ್ತಪಡಿಸಿದ್ದು, ಹೋರಾಟದಲ್ಲಿ ನಿಮ್ಮೆಲ್ಲರ ಆಶೀರ್ವಾದದಿಂದ ನನಗೆ ಜಯ ಸಿಕ್ಕಿದೆ. ನಾನು ನಂಬಿದ ದೇವರು ನನ್ನ ಕೈ ಬಿಡಲಿಲ್ಲ ಪೋಸ್ಟ್ ಹಂಚಿಕೊಂಡಿದ್ದಾರೆ.
ಈ ಬಗ್ಗೆ ತಮ್ಮ ಫೇಸ್‌ಬುಕ್‌ನಲ್ಲಿ ಪೋಸ್ಟ್ ಹಂಚಿಕೊಂಡಿರುವ ನಾಗರತ್ನ, ‘ಸಮಸ್ತ ನಾಡಿನ ಜನತೆಗೆ ನನ್ನ ನಮಸ್ಕಾರ. ಈ ದಿನ ತುಂಬಾ ಖುಷಿ ಕೊಟ್ಟ ದಿನವಾಗಿದೆ. ನನ್ನ ಪತಿ ವಿಜಯ್ ರವರು ತಮಗೆ ವಿಚ್ಛೇಧನ ಬೇಕೆಂದು ಸ್ವಲ್ಪ ವರ್ಷಗಳ ಹಿಂದೆ ಕೌಟುಂಬಿಕ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಲಾಗಿದೆ. ಆ ಹೋರಾಟದಲ್ಲಿ ನಿಮ್ಮೆಲ್ಲರ ಆಶೀರ್ವಾದದಿಂದ ನನಗೆ ಜಯ ಸಿಕ್ಕಿದೆ, ನಾನು ನಂಬಿದ ದೇವರು ನನ್ನ ಕೈ ಬಿಡಲಿಲ್ಲ.
ಇದು ನನ್ನ ಜಯ ಅನ್ನೋದಕ್ಕಿಂತ ನನ್ನ ಪತಿ ಅಧಿಕೃತವಾಗಿ ಇನ್ನೊಂದು ಮದುವೆಯಾಗಲು ಅವಕಾಶ ಸಿಕ್ಕಿಲ್ಲ ಅನ್ನೋ ನಿಜ. ಏಕೆಂದರೆ ನನಗೆ ಅಪ್ಪ ಅಮ್ಮ ಮದುವೆ ಮಾಡಿಕೊಟ್ಟಾಗ ಹೇಳಿದ್ದು ಕಲಿಸಿದ್ದು ಒಂದೇ. ಗಂಡನೇ ದೇವರು, ಅತ್ತೆ ಮಾವನೇ ನಿಮ್ಮವರು, ಗಂಡನ ಮನೆಯೇ ನಿನ್ನ ಮನೆ, ಎಷ್ಟು ಕಷ್ಟಗಳು, ಏನೇ ಸಮಸ್ಯೆ ಬಂದರೂ ಅದೇ ಮನೆಯಲ್ಲೇ ಇರ್ಬೇಕು ಅವರೇ ನಿನಗೆ ಎಲ್ಲಾ ಎಂದಿದ್ದರು.
ನಾನೂ ಅದನ್ನೇ ಪಾಲಿಸಿಕೊಂಡು ಬಂದವಳು. ಅದನ್ನೇ ಪಾಲಿಸಿಕೊಂಡು ಹೋಗುವಳು. ನನಗೆ ನನ್ನ ಗಂಡ ಮಕ್ಕಳು ಇಷ್ಟೇ ಸರ್ವಸ್ವ. ನನ್ನ ಜೀವ ಇರುವವರೆಗೂ ಅವರ ಜೊತೆಯಲ್ಲೇ ಇದ್ದು ಸಾಯುತ್ತೇನೆ. ನಮ್ಮ ಕಾನೂನಿನ ಪ್ರಕಾರ ವಿಚ್ಛೇದನ ಆದ ನಂತರನೇ ಇನ್ನೊಂದು ಮದುವೆಗೆ ಅವಕಾಶ ಇರುವುದು ಎಂಬ ಸತ್ಯ ನಿಮಗೂ ಗೊತ್ತು. ನನ್ನ ಪತಿ ಇನ್ನೊಂದು ಮದುವೆಯಾಗಿಲ್ಲ ಎಂದು ಅವರು ನಮಗೆ ಹೇಳುತ್ತಾರೆ.
ಈ ಕೇಸಿನಲ್ಲಿ ನಮ್ಮ ವಕೀಲರಾದ ಬಿಎನ್ ನಾಗರಾಜ್ ಸರ್ ಅವರ ಶ್ರಮ ಅಪಾರವಾದುದು. ದಯವಿಟ್ಟು ಬೇರೆ ವದಂತಿಗಳಿಗೆ ಕಿವಿಕೊಡದೆ ನಿಮ್ಮ ಆಶೀರ್ವಾದ ಸದಾ ನಮ್ಮ ಕುಟುಂಬದ ಮೇಲೆ ಇರಲಿ ಎಂದು ಸಮಸ್ತ ನಾಡಿನ ಜನತೆಗೆ ಈ ಮೂಲಕ ಕೇಳಿಕೊಳ್ಳುತ್ತೇನೆ. ದಯವಿಟ್ಟು ಮಾಧ್ಯಮ ಮಿತ್ರರಿಗೆ ಕೇಳಿಕೊಳ್ಳುವುದೇನೆಂದರೆ ಕೀರ್ತಿ ಪಟ್ಟವನ್ನು ೨ನೇ ಹೆಂಡ್ತಿ ಅಂತಾ ದಯವಿಟ್ಟು ಪ್ರಸಾರ ಮಾಡಬೇಡಿ. ನಮ್ಮ ಸಂಸಾರ ಚೆನ್ನಾಗಿರಲಿ ಅಂತ ಹರಸಿ ಹಾರೈಸಿ ಎಂದು ನಾಗರತ್ನ ಮನವಿ ಮಾಡಿದ್ದಾರೆ.