ತುಮಕೂರು : ಕಲುಷಿತ ನೀರು ಸೇವಿಸಿ ಅಸ್ವಸ್ಥಗೊಂಡು ತುಮಕೂರು ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವವರ “ಆರೋಗ್ಯವನ್ನು ವಿಚಾ- ರಿಸಿದ ಗೃಹ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಜೆ. ಪರಮೇಶ್ವರ್. ಕಲುಷಿತ ನೀರು ಸೇವಿಸಿ ಮೂವರು ಮೃತಪಟ್ಟು, ಇನ್ನೂ ಕೆಲವರು ಚಿಕಿತ್ಸೆ ಪಡೆಯುತ್ತಿರುವ ವಿಚಾರ ತಿಳಿದು ಆಸತ್ರೆಗೆ ಭೇಟಿ ನೀಡಿ, ಚಿಕಿತ್ಸೆ ಪಡೆಯುತ್ತಿರುವ ಹಿರಿಯರು ಹಾಗೂ ಮಕ್ಕಳ ಆರೋಗ್ಯ ವಿಚಾರಿಸಿದರು.
ಬಳಿಕ ಮಾತನಾಡಿದ ಅವರು, “ಕುಡಿಯುವ ನೀರಿನ ಸಮಸ್ಯೆ ಇರುವ ಕಡೆಗೆ ಗಮನ ಹರಿಸಿ ಎಂದು ಅಧಿಕಾರಿಗಳಿಗೆ ಸೂಚಿಸಲಾಗಿದೆ. ಆದರೂ ಸಣ್ಣಪುಟ್ಟ ವ್ಯತ್ಯಾಸಗಳಾಗಿವೆ. ಮೂವರು ಮೃತಪಟ್ಟಿದ್ದು ಬೇಸರ ಸಂಗತಿ. ಈಗಾಗಲೇ ಪರಿಸ್ಥಿತಿ ಸುಧಾರಿಸಿದ್ದು, ಬೇರೆ ಕಡೆಯೂ ಇಂತಹ ಸಮಸ್ಯೆ ಆಗದಂತೆ ಗಮನಹರಿಸಲು ಸೂಚಿಸಲಾಗಿದೆ” ಎಂದು ಮಾಹಿತಿ ನೀಡಿದರು. “ಕಲುಷಿತ ನೀರು ಸರಬರಾಜಿಗೆ ಸಂಬಂಧಪಟ್ಟಂತೆ ಈಗಾಗಲೇ ಇಬ್ಬರು ವಾಟರ್ ಮ್ಯಾನ್ ಗಳನ್ನು ಅಮಾನತುಗೊಳಿಸಲಾಗಿದೆ” ಎಂದು ತಿಳಿಸಿದರು.
ಮಧುಗಿರಿ ತಾಲೂಕಿನ ಚಿನ್ನೇನಹಳ್ಳಿ ಗ್ರಾಮದಲ್ಲಿ ಜೂ7 ರಿಂದ ಲಕ್ಷ್ಮಿದೇವಿ ಮತ್ತು ಕೆಂಪಮ್ಮ ಜಾತ್ರೆ ಇತ್ತು. ಈ ವೇಳೆ ನಾನಾ ಭಾಗಗಳಿಂದ ಜನರೂ ಆಗಮಿಸಿದ್ದರು. ಗ್ರಾಮದಲ್ಲಿ ನೀರಿನ ವ್ಯವಸ್ಥೆ ಇಲ್ಲದೇ ಕೆಲವರು ಕಲುಷಿತ ನೀರನ್ನು ಸೇವಿಸಿದ್ದರು. ಜೂ 10 ರಂದು ರಾತ್ರಿ 54 ಮಂದಿಗೆ ದಿಢೀರನೇ ವಾಂತಿ, ಬೇಧಿ ಶುರುವಾಗಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಕೆಲವರು ತುಮಕೂರು ಜಿಲ್ಲಾಸ್ಪತ್ರೆ, ಇನ್ನು ಕೆಲವರು ಮಧುಗಿರಿ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು. ಕೆಲವರು ಖಾಸಗಿ ಆಸತ್ರೆಗೆ ದಾಖಲಾಗಿದ್ದರು. ಕೆಲವರು ಬಿಡುಗಡೆಯಾಗಿದ್ದರು. ಇದರಲ್ಲಿ ಮಧುಗಿರಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದ ಮೀನಾಕ್ಷಿ (3) ಮತ್ತು ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಚಿಕ್ಕದಾಸಪ್ಪ (76) ಮತ್ತು ಪೆದ್ದಣ್ಣ (74) ಮೃತಪಟ್ಟಿದ್ದಾರೆ.