ಚಿತ್ರದುರ್ಗ ಜೂ.15 : ತಪ್ಪು ಯಾರೇ ಮಾಡಿದರು ರಕ್ಷಿಸುವ ಮಾತೇ ಇಲ್ಲ. ಈ ನೆಲದ ಕಾನೂನು ಎಲ್ಲರಿಗೂ ಸಮಾನವಾಗಿದೆ. ತನಿಖೆ ಉತ್ತಮವಾಗಿ ನಡೆಯುತ್ತಿದೆ. ಇದರ ಬಗ್ಗೆ ಯಾವುದೇ ಅನುಮಾನ ಬೇಡ’ ಎಂದು ಶಾಸಕ ಕೆ.ಸಿ.ವೀರೇಂದ್ರ ಪಪ್ಪಿ ತಿಳಿಸಿದರು.
ನಟ ದರ್ಶನ್ ಮತ್ತು ಆತನ ಗ್ಯಾಂಗ್‍ನಿಂದ ಹತ್ಯೆಯಾದ ರೇಣುಕಾಸ್ವಾಮಿ ವಿಆರ್‍ಎಸ್ ಬಡಾವಣೆಯ ನಿವಾಸಕ್ಕೆ ಶನಿವಾರ ಭೇಟಿ ಮಾಡಿದ ಶಾಸಕ ವಿರೇಂದ್ರ ಪಪ್ಪಿ ತಂದೆ, ತಾಯಿ, ಪತ್ನಿಗೆ ಸಾಂತ್ವನ ಹೇಳಿದ ನಮತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರೇಣುಕಾ ಸ್ವಾಮಿಯ ಕೊಲೆಯ ಸಂಗತಿ ತಿಳಿದು ಮನಸ್ಸಿಗೆ ತುಂಬಾ ನೋವಾಯಿತು. ಕುಟುಂಬದವರಿಗೆ ಸಾಂತ್ವನ ಹೇಳಿ ವೈಯಕ್ತಿಕ ಸಹಾಯ ಮಾಡಿದ್ದೇನೆ.
ಶಿವಗಣಾರಾಧನೆ ಕಾರ್ಯ ಮುಗಿದ ಕೂಡಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಕುಟುಂಬಕ್ಕೆ ಭೇಟಿ ಮಾಡಿಸುವ ಕಾರ್ಯ ಮಾಡುತ್ತೇನೆ’ ಎಂದರು. ಸರ್ಕಾರದಿಂದ ಸೂಕ್ತ ಪರಿಹಾರ ಹಾಗೂ ರೇಣುಕಾಸ್ವಾಮಿ ಪತ್ನಿಗೆ ಸರ್ಕಾರಿ ಉದ್ಯೋಗ ಕಲ್ಪಿಸುವ ಕುರಿತು, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಜತೆ ಚರ್ಚೆ ನಡೆಸಲಾಗುವುದು. ಇಡೀ ಕುಟುಂಬದ ಜತೆ ನಾವಿದ್ದೇವೆ’ ಎಂದು ತಿಳಿಸಿದರು.
`ಒಬ್ಬ ಮನುಷ್ಯ ಇನ್ನೊಬ್ಬ ಮನುಷ್ಯನ ಜೀವ ತೆಗೆಯುವ ಮಟ್ಟಕ್ಕೆ ಹೋಗಬಾರದು. ಇಂತಹ ಪ್ರಯತ್ನ ಯಾರು ಮಾಡಬಾರದು. ಜನನಾಯಕರು, ಅಭಿಮಾನಿ ವರ್ಗ ಹೊಂದಿರುವವರು ಆದರ್ಶರಾಗಿರಬೇಕು. ಇಂತಹ ಹೀನ ಕೆಲಸ ಮಾಡಿದಾಗ ಬೇಲಿಯೇ ಎದ್ದು ಹೊಲ ಮೇದಂತೆ ಆಗುತ್ತದೆ’ ಎಂದರು.