ಈ ವರ್ಷದ ಬಹುನಿರೀಕ್ಷಿತ ಸಿನಿಮಾಗಳು ಬಿಡುಗಡೆಗೆ ಸಜ್ಜಾಗುತ್ತಿವೆ. ಕಳೆದ ವರ್ಷವೇ ಬರಬೇಕಿದ್ದ ಸಿನಿಮಾ ಈ ವರ್ಷ ಸೆಕೆಂಡ್ ಆಫ್‌ನಲ್ಲಿ ಬರುವಂತಾಗಿದೆ. ಸದ್ಯ ಧನಂಜಯ್ ನಟನೆಯ ‘ಕೋಟಿ’ ಸಿನಿಮಾ ತೆರೆಕಂಡು ಒಳ್ಳೆ ಪ್ರತಿಕ್ರಿಯೆ ಪಡೆದುಕೊಂಡಿದೆ. ಇನ್ನು ಧ್ರುವ ಸರ್ಜಾ ನಟನೆಯ ‘ಮಾರ್ಟಿನ್’ ಹಾಗೂ ‘ಕೆಡಿ’ ಆರ್ಭಟಕ್ಕೂ ಮುಹೂರ್ತ ಫಿಕ್ಸ್ ಆಗಿದೆ.
ದೊಡ್ಡ ಸಿನಿಮಾಗಳನ್ನು ಬಿಡುಗಡೆ ಮಾಡಲು ಲಾಂಗ್ ವೀಕೆಂಡ್ ಬೇಕು. ಪ್ಯಾನ್ ಇಂಡಿಯಾ ಸಿನಿಮಾಗಳ ವಿಚಾರದಲ್ಲಿ ಇದು ಮತ್ತಷ್ಟು ಮುಖ್ಯವಾಗುತ್ತದೆ. ಬೇರೆ ಯಾವುದೇ ದೊಡ್ಡ ಸಿನಿಮಾ ಜೊತೆಗೆ ಕ್ಲ್ಯಾಶ್ ಆಗದಂತೆ ಸಿನಿಮಾಗಳನ್ನು ತೆರೆಗೆ ತರುವುದು ಸೇಫ್ ಎನ್ನುವ ಲೆಕ್ಕಾಚಾರ ನಡೆಯುತ್ತದೆ. ಕನ್ನಡದಲ್ಲಿ ಈ ವರ್ಷ ‘ಮ್ಯಾಕ್ಸ್’, ‘ಭೀಮ’, ‘ಯುಐ’, ‘ಭೈರತಿ ರಣಗಲ್’, ‘ಬಘೀರ’ ಹಾಗೂ ‘ಉತ್ತರಕಾಂಡ’ ರೀತಿಯ ಸ್ಟಾರ್‌ಗಳ ಸಿನಿಮಾ ರಿಲೀಸ್ ಡೇಟ್ ಅನೌನ್ಸ್ ಆಗಬೇಕಿದೆ.
ಧ್ರುವ ಸರ್ಜಾ ನಟನೆಯ ‘ಮಾರ್ಟಿನ್’ ಸಿನಿಮಾ ಅಕ್ಟೋಬರ್ 11ಕ್ಕೆ ತೆರೆಗೆ ಬರಲಿದೆ. ‘ಕೆಡಿ’ ಚಿತ್ರ ಡಿಸೆಂಬರ್‌ನಲ್ಲಿ ರಿಲೀಸ್ ಎಂದು ಚಿತ್ರತಂಡ ಘೋಷಿಸಿದೆ. ಇದೀಗ ಉಪೇಂದ್ರ ನಿರ್ದೇಶಿಸಿ ನಟಿಸಿರುವ ‘ಯುಐ’ ಸಿನಿಮಾ ಆಗಸ್ಟ್ 15ಕ್ಕೆ ತೆರೆಗೆ ಬರುತ್ತದೆ ಎನ್ನಲಾಗ್ತಿದೆ. ಈ ಬಗ್ಗೆ ಸ್ವತಃ ಉಪೇಂದ್ರ ಮಾಹಿತಿ ನೀಡಿದ್ದಾರೆ. ‘A’ ಸಿನಿಮಾ ತೆಲುಗು ವರ್ಷನ್ ರೀ ರಿಲೀಸ್ ಸುದ್ದಿಗೋಷ್ಠಿ ಈ ಬಗ್ಗೆ ಸುಳಿವು ನೀಡಿದ್ದಾರೆ.
ಸದ್ಯ ‘ಯುಐ’ ಚಿತ್ರದ ಕೆಲಸಗಳು ಚೆನ್ನೈನಲ್ಲಿ ನಡೆಯುತ್ತಿದೆ. ಇನ್ನು ಒಂದೂವರೆ ತಿಂಗಳಲ್ಲಿ ಸಿನಿಮಾ ರಿಲೀಸ್ ಆಗುತ್ತದೆ. ಆಗ ಮತ್ತೆ ಬರ್ತೀನಿ ಸುದ್ದಿಗೋಷ್ಠಿ ನಡೆಸಿ ಸಿನಿಮಾ ಬಗ್ಗೆ ಮಾತನಾಡ್ತೀನಿ ಎಂದು ಹೈದರಾಬಾದ್‌ನಲ್ಲಿ ಉಪ್ಪಿ ಹೇಳಿದ್ದಾರೆ. ಆಗಸ್ಟ್ 15ಕ್ಕೆ ಅಲ್ಲು ಅರ್ಜುನ್ ನಟನೆಯ ‘ಪುಷ್ಪ’-2 ಸಿನಿಮಾ ರಿಲೀಸ್ ಆಗಬೇಕಿದೆ. ಆದರೆ ಕಾರಣಾಂತರಗಳಿಂದ ಆ ಸಿನಿಮಾ ಬರುವುದು ತಡವಾಗುತ್ತದೆ ಎನ್ನಲಾಗ್ತಿದೆ. ಹಾಗಾಗಿ ಅದೇ ದಿನ ಉಪ್ಪಿ ‘ಯುಐ’ ಪ್ರಪಂಚ ಅನಾವರಣವಾಗುವ ನಿರೀಕ್ಷೆಯಿದೆ.
ಉಪ್ಪಿ-2′ ಬಳಿಕ ರಿಯಲ್ ಸ್ಟಾರ್ ನಿರ್ದೇಶಿಸಿ ನಟಿಸಿರು ಸಿನಿಮಾ ಇದು. ಬರೀ ಟೈಟಲ್‌ನಿಂದಲೇ ಸಿನಿಮಾ ಹೈಪ್ ಕ್ರಿಯೇಟ್ ಮಾಡಿದೆ. ಈಗಾಗಲೇ ಅಜನೀಶ್ ಲೋಕನಾಥ್ ಮ್ಯೂಸಿಕ್‌ನಲ್ಲಿ ಸಿನಿಮಾ ಸಾಂಗ್ಸ್ ಸದ್ದು ಮಾಡ್ತಿದೆ. ಮನೋಹರ್ ಹಾಗೂ ಕೆ. ಪಿ ಶ್ರೀಕಾಂತ್ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ರೀಷ್ಮಾ ನಾಣಯ್ಯ, ನಿಧಿ ಸುಬ್ಬಯ್ಯ, ಸಾಧು ಕೋಕಿಲ, ರವಿಶಂಕರ್ ಸೇರಿದಂತೆ ಘಟಾನುಘಟಿ ಕಲಾವಿದರು ಚಿತ್ರದಲ್ಲಿದ್ದಾರೆ. ಶೂಟಿಂಗ್ ತಡವಾಗಿದ್ದರಿಂದ ಶಿವಣ್ಣ ನಟನೆಯ ‘ಬೈರತಿ ರಣಗಲ್’ ಕೂಡ ಆಗಸ್ಟ್ 15ಕ್ಕೆ ತೆರೆ ಬರುವುದು ಅನುಮಾನ.
ಜುಲೈ 26ಕ್ಕೆ ದುನಿಯಾ ವಿಜಯ್ ನಿರ್ದೇಶಿಸಿ ನಟಿಸಿರುವ ‘ಭೀಮ’ ಸಿನಿಮಾ ರಿಲೀಸ್ ಆಗುವ ಸಾಧ್ಯತೆಯಿದೆ. ‘ಸಲಗ’ ಬಳಿಕ ಮತ್ತೆ ವಿಜಿ ಈ ಚಿತ್ರಕ್ಕಾಗಿ ಡೈರೆಕ್ಟರ್ ಕ್ಯಾಪ್ ತೊಟ್ಟಿದ್ದಾರೆ. ಚರಣ್ ರಾಜ್ ಮ್ಯೂಸಿಕ್‌ನಲ್ಲಿ 2 ಹಾಡು ರಿಲೀಸ್ ಆಗಿ ಗಮನ ಸೆಳೆದಿದೆ. ಅಶ್ವಿನಿ ಚಿತ್ರದಲ್ಲಿ ನಾಯಕಿಯಾಗಿ ನಟಿಸಿದ್ದು ಕೃಷ್ಣ ಸಾರ್ಥಕ್ ಬಂಡವಾಳ ಹೂಡಿದ್ದಾರೆ.
‘ಭೀಮ’, ‘ಯುಐ’ ಬಳಿಕ ಸೆಪ್ಟೆಂಬರ್‌ನಲ್ಲಿ ‘ಬಘೀರ’ ಸಿನಿಮಾ ತೆರೆಗೆ ಬರಬಹುದು ಎನ್ನಲಾಗ್ತಿದೆ. ಹೊಂಬಾಳೆ ಫಿಲ್ಮ್ಸ್ ಸಂಸ್ಥೆ ಚಿತ್ರಕ್ಕೆ ಹಣ ಹೂಡಿದೆ. ಪ್ರಶಾಂತ್ ನೀಲ್ ಕಥೆ ಬರೆದಿದ್ದು ಡಾ. ಸೂರಿ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ರುಕ್ಮಿಣಿ ವಸಂತ್ ನಾಯಕಿಯಾಗಿ ಮಿಂಚಿದ್ದು ಪ್ರಕಾಶ್ ರಾಜ್, ರಂಗಾಯಣ ರಘು, ಅಚ್ಯುತ್‌ಕುಮಾರ್ ತಾರಾಗಣದಲ್ಲಿದ್ದಾರೆ. ಇನ್ನು ಸುದೀಪ್ ನಟನೆಯ ‘ಮ್ಯಾಕ್ಸ್’ ಸಿನಿಮಾ ಯಾವಾಗ ರಿಲೀಸ್ ಎನ್ನುವ ಚರ್ಚೆಯೂ ನಡೀತಿದೆ.