ಬೆಂಗಳೂರು : ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ದರ್ಶನ್ ಸೇರಿ 18 ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕಿಚ್ಚ ಸುದೀಪ್ ಮೊದಲ ಬಾರಿಗೆ ಪ್ರತಿಕ್ರಿಯಿಸಿದ್ದಾರೆ.
ಈ ಕುರಿತು ಖಾಸಗಿ ಕಾರ್ಯಕ್ರಮವೊಂದರಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನೀವು ನಮಗೆ ಏನು ತೋರಿಸುತ್ತಿದ್ದೀರೋ ನಾವು ಅದರಿಂದಲೇ ತಿಳಿದುಕೊಳ್ಳುತ್ತಿದ್ದೇವೆ. ಇದರಿಂದ ಅರ್ಥವಾಗುತ್ತಿರುವುದು ಏನಂದ್ರೆ, ಮಾಧ್ಯಮಗಳಾಗಲಿ, ಪೊಲೀಸರಾಗಲಿ ಸತ್ಯಾಂಶ ಹೊರಬರಲಿ ಎಂಬ ನಿಟ್ಟಿನಲ್ಲಿ ತುಂಬಾ ಕೆಲಸ ಮಾಡುತ್ತಿದ್ದೀರಿ ಎಂದರು.
ನಾನು ಅವರ ಪರ, ಇವರ ಪರ ಮಾತನಾಡುವುದು ತಪ್ಪಾಗುತ್ತೆ. ಬಾಳಿ ಬದುಕಬೇಕಿದ್ದ ರೇಣುಕಾಸ್ವಾಮಿಯವರಿಗೆ ನ್ಯಾಯ ಸಿಗಬೇಕು. ಜನಿಸಬೇಕಾಗಿರುವ ಮಗುವಿಗೆ ನ್ಯಾಯ ಸಿಗಬೇಕು. ಎಲ್ಲದಕ್ಕಿಂತ ಹೆಚ್ಚಿನದಾಗಿ ನ್ಯಾಯದ ಮೇಲೆ ಎಲ್ಲರಿಗೂ ನಂಬಿಕೆ ಹುಟ್ಟಬೇಕು ಎಂದು ಹೇಳಿದರು. ಏನೋ ಸರಿ ಕಾಣುತ್ತಿಲ್ಲ. ಇಡೀ ಚಿತ್ರರಂಗಕ್ಕೆ ನ್ಯಾಯ ಸಿಗಬೇಕಾಗಿದೆ. ಹಿಂದೆಯಿಂದ ತೆಗೆದುಕೊಂಡರೂ ಬಹಳ ಚಿಕ್ಕ ಚಿಕ್ಕ ವಿಚಾರಗಳಿಗೂ ಪ್ರತಿ ಟೈಮ್ನಲ್ಲೂ ಚಿತ್ರರಂಗದ ಮೇಲೆ ಏನಾದ್ರು ಒಂದು ಬರ್ತಾ ಇರುತ್ತೆ. ಚಿತ್ರರಂಗಕ್ಕೆ ಒಂದು ಕ್ಲೀನ್ ಚಿಟ್ ಬೇಕಾಗಿದೆ ಎಂದು ತಿಳಿಸಿದರು.
ಜಸ್ಟಿಸ್ ಬೇರೆ, ಫ್ರೆಂಡ್ಶಿಪ್ ಬೇರೆ, ರಿಲೇಶನ್ ಶಿಪ್ ಬೇರೆ. ನಾನು ಯಾರ ಬಗ್ಗೆಯೂ ಮಾತನಾಡಿದವನಲ್ಲ. ನನಗೆ ಬೇಕಾಗಿಲ್ಲ. ಆದ್ರೆ ಚಿತ್ರರಂಗ ಅಂತ ಬಂದಮೇಲೆ ನಾನು ಅದರಲ್ಲಿ ಸೇರ್ಪಡೆಯಾಗಿರುವುದರಿಂದ ಚಿತ್ರರಂಗದ ಮೇಲೆ ಒಂದು ಕಪ್ಪು ಚುಕ್ಕೆ ಬರುವುದು ನಮ್ಗೂ ಇಂಟ್ರೆಸ್ಟ್ ಇಲ್ಲ.
ತುಂಬಾ ಜನ ಸೇರಿ ತ್ಯಾಗಗಳನ್ನು ಮಾಡಿ ದುಡಿದಿದ್ದಕ್ಕೆ ಚಿತ್ರರಂಗ ಈ ಹಂತಕ್ಕೆ ಬಂದು ನಿಂತಿದೆ. ಇದಕ್ಕೆ ಎಷ್ಟೋ ವರ್ಷಗಳ ಇತಿಹಾಸವಿದೆ. ಯಾರೋ ಒಬ್ಬರಿಂದ ಹೆಸರು ಹಾಳಾಗುವುದು ತಪ್ಪಾಗುತ್ತೆ. ಆರೋಪಿ ಯಾರು ಅಂತ ಹೇಳುವುದಕ್ಕೆ ಜಡ್ಜ್ ಅಂತ ಒಬ್ರು ಕುಳಿತುಕೊಳ್ಳುತ್ತಾರೆ. ನಾವು ಅವರಿಗೆ ತಲೆ ಬಾಗಬೇಕಾಗುತ್ತೆ ಎಂದರು.