ಹೈದರಾಬಾದ್ : ಚುನಾವಣೆಯಲ್ಲಿ ಹಲವು ಭರವಸೆ ನೀಡಿ ಆಂಧ್ರಪ್ರದೇಶದ ಅಧಿಕಾರ ಹಿಡಿದಿರುವ ಚಂದ್ರಬಾಬು ನಾಯ್ಡು ನೇತೃತ್ವದ ತೆಲುಗು ದೇಶಂ ಪಕ್ಷ ಈ ಭರವಸೆಯನ್ನು ಹೇಗೆ ಈಡೇರಿಸುತ್ತದೆ ಎನ್ನುವುದೇ ದೊಡ್ಡ ಪ್ರಶ್ನೆಯಾಗಿದೆ.
ನಿರುದ್ಯೋಗಿ ಯುವಕರಿಗೆ ನಗದು ಪಾವತಿ, ಮಹಿಳೆಯರಿಗೆ ಉಚಿತ ಪ್ರಯಾಣ ಮತ್ತು ಉಚಿತ ಎಲ್‌ಪಿಜಿ ಸಿಲಿಂಡರ್ ಸೇರಿದಂತೆ ಹಲವು ಭರವಸೆ ಈಡೇರಿಸಲು ಸರ್ಕಾರಕ್ಕೆ ವಾರ್ಷಿಕ ಸುಮಾರು 60 ಸಾವಿರ ಕೋಟಿ ರೂ. ಬೇಕಾಗಬಹುದು ಎಂದು ಅಂದಾಜಿಸಲಾಗಿದೆ.
ಸಾಲ ಎಷ್ಟಿದೆ ? ವೈಎಸ್ ಜಗನ್ ಮೋಹನ್ ರೆಡ್ಡಿ ಸರ್ಕಾರ ಅಧಿಕಾರ ವಹಿಸಿಕೊಂಡ ನಾಲ್ಕು ವರ್ಷದಲ್ಲಿ ಆಂಧ್ರಪ್ರದೇಶದ ಒಟ್ಟು ಸಾಲವು 2023 ರ ಮಾರ್ಚ್ ಅಂತ್ಯದ ವೇಳೆಗೆ 67% ಏರಿಕೆಯಾಗಿ 4,42,442 ಕೋಟಿ ರೂ.ಗೆ ಜಿಗಿದಿದೆ. 2018-19 ರಲ್ಲಿ ರಾಜ್ಯದ ಒಟ್ಟು ವಿತ್ತೀಯ ಕೊರತೆಯು 35,441 ಕೋಟಿ ರೂ. ಇದ್ದರೆ ಮಾರ್ಚ್ 31, 2024 ಕ್ಕೆ ಇದು 57% ಏರಿಕೆಯಾಗಿ 55,817.50 ಕೋಟಿ ರೂ. ತಲುಪಿದೆ.
ಆಡಳಿತದ ವಿಕೇಂದ್ರಿಕರಣ ಮಾಡಲು ಆಂಧ್ರಕ್ಕೆ ಮೂರು ರಾಜಧಾನಿ ಮಾಡಲು ಜಗನ್ ಮುಂದಾಗಿದ್ದರೆ ಚಂದ್ರಬಾಬು ನಾಯ್ಡು ಅಮರಾವತಿಯನ್ನೇ ರಾಜಧಾನಿ ಮಾಡಲು ಮುಂದಾಗಿದ್ದರು. ಜಗನ್ ಸರ್ಕಾರ ಅಧಿಕಾರಕ್ಕೆ ಏರಿದ ಬಳಿಕ ಅಮರಾವತಿ ಅಭಿವೃದ್ಧಿಗೆ ಹೆಚ್ಚಿನ ಅನುದಾನ ಬಿಡುಗಡೆಯಾಗಿರಲಿಲ್ಲ. ಆದರೆ ಈಗ ಚಂದ್ರಬಾಬು ನಾಯ್ಡು ಮರಳಿ ಮುಖ್ಯಮಂತ್ರಿಯಾಗಿರುವ ಕಾರಣ ಹೆಚ್ಚಿನ ಅನುದಾನ ಬಿಡುಗಡೆ ಮಾಡಿದರೆ ಸಾಲ ಮತ್ತಷ್ಟು ಹೆಚ್ಚಾಗುವ ಸಾಧ್ಯತೆಯಿದೆ.
ಈ ವರ್ಷ ಮಂಡನೆಯಾದ ಬಜೆಟ್(ಲೇಖಾನುದಾನ)ನಲ್ಲಿ 2024-2025 ರಲ್ಲಿ ಆದಾಯ ಸ್ವೀಕೃತಿಯಿಂದ 2,05,352.19 ರೂ ಬಂದರೆ 2,30,110.41 ಕೋಟಿ ರೂ. ವೆಚ್ಚವಾಗಬಹುದು ಎಂದು ಅಂದಾಜಿಸಲಾಗಿತ್ತು.
ಸೂಪರ್ ಸಿಕ್ಸ್ ಘೋಷಣೆಗಳು : ಕರ್ನಾಟಕದಲ್ಲಿ ಕಾಂಗ್ರೆಸ್ ಹೇಗೆ 5 ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡಿತ್ತೋ ಅದೇ ಮಾದರಿಯಲ್ಲಿ ಆಂಧ್ರದಲ್ಲಿ ಚಂದ್ರಬಾಬು ನಾಯ್ಡು ʼಸೂಪರ್ ಸಿಕ್ಸ್ ಗ್ಯಾರಂಟಿʼ ಹೆಸರಿನಲ್ಲಿ ಘೋಷಣೆ ಪ್ರಕಟಿಸಿದ್ದರು. ಪ್ರತಿ ತಿಂಗಳು ನಿರುದ್ಯೋಗಿಗಳಿಗೆ 3000 ರೂ. ನಿರುದ್ಯೋಗ ಭತ್ಯೆ, ಶಾಲೆಗೆ ತೆರಳು ಪ್ರತಿ ಮಗುವಿಗೆ ವರ್ಷಕ್ಕೆ 15,000 ರೂ., ಪ್ರತಿ ರೈತರಿಗೆ ವಾರ್ಷಿಕ 20,000 ರೂ., ಸರ್ಕಾರದಿಂದ ಪ್ರತಿ ಮನೆಗೆ ವರ್ಷಕ್ಕೆ 3 ಗ್ಯಾಸ್ ಸಿಲಿಂಡರ್ ಉಚಿತ, 18 ವರ್ಷ ಮೇಲ್ಪಟ್ಟ ಪ್ರತಿ ಮಹಿಳೆಗೆ ತಿಂಗಳಿಗೆ 1,500 ರೂ., ರಾಜ್ಯಾದ್ಯಂತ ಎಲ್ಲಾ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಘೋಷಣೆಗಳನ್ನು ಟಿಡಿಪಿ ಘೋಷಣೆ ಮಾಡಿತ್ತು.
ಕರ್ನಾಟಕದಲ್ಲಿ ಹೇಗೆ ಮನೆ ಮನೆಗೆ ಕಾಂಗ್ರೆಸ್ ಗ್ಯಾರಂಟಿ ಕಾರ್ಡ್‌ಗಳನ್ನು ಹಂಚಿಕೆ ಮಾಡಿತ್ತೋ ಅದೇ ರೀತಿಯಾಗಿ ಆಂಧ್ರದಲ್ಲೂ ಟಿಡಿಪಿ ಮನೆಗೆ ಸೂಪರ್ ಸಿಕ್ಸ್ ಭರವಸೆಯ ಕಾರ್ಡ್‌ಗಳನ್ನು ಹಂಚಿಕೆ ಮಾಡಿತ್ತು. ಈ ಭರವಸೆಯ ಪರಿಣಾಮ ಆಂಧ್ರ ಚುನಾವಣೆಯಲ್ಲಿ ಜಗನ್ ಪಕ್ಷವನ್ನು ಹೀನಾಯವಾಗಿ ಸೋಲಿಸಿತ್ತು.
ಕೇಂದ್ರದ ಅನುದಾನ ಸಿಗುತ್ತಾ? ಟಿಡಿಪಿ ತನ್ನ ಮೈತ್ರಿಪಕ್ಷವಾಗಿರುವ ಕಾರಣ ಕೇಂದ್ರದಲ್ಲಿರುವ ಎನ್‌ಡಿಎ ಸರ್ಕಾರದ ಅನುದಾನದ ಮೇಲೆ ಚಂದ್ರಬಾಬು ನಾಯ್ಡ ಗಮನ ಕೇಂದ್ರಿಕರಿಸಿದ್ದಾರೆ. ಕೇಂದ್ರದ ವಿಶೇಷ ಅನುದಾನ ಪ್ರಕಟಿಸಿದರೆ ಈ ಯೋಜನೆಗಳನ್ನು ಈಡೇರಿಸಲು ಸ್ವಲ್ಪ ನೆರವಾಗಬಹುದು. ಆದರೆ ಆಂಧ್ರಪ್ರದೇಶಕ್ಕೆ ವಿಶೇಷ ಅನುದಾನ ನೀಡಿದರೆ ಬೇರೆ ರಾಜ್ಯಗಳು ಇದನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ ಮೊರೆ ಹೋಗಬಹುದು. ಹೀಗಾಗಿ ಘೋಷಣೆ ಮಾಡಿದ ಭರವಸೆ ಈಡೇರಿಕೆಗೆ ಟಿಡಿಪಿ ಹಣ ಎಲ್ಲಿಂದ ತರುತ್ತದೆ ಎನ್ನುವುದು ದೊಡ್ಡ ಪ್ರಶ್ನೆ
ಈ ಬಾರಿ ಒಟ್ಟು 175 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಟಿಡಿಪಿ 135, ಜನಸೇನಾ 21, ವೈಎಸ್‌ಆರ್‌ಸಿಪಿ 11, ಬಿಜೆಪಿ 8 ಸ್ಥಾನಗಳನ್ನು ಗೆದ್ದುಕೊಂಡಿತ್ತು. 2019ರ ಚುನಾವಣೆಯಲ್ಲಿ ಜಗನ್ ಸರ್ಕಾರ ಬಹಳಷ್ಟು ಸೊಷಿಯಲಿಸ್ಟ್, ಜನಪ್ರಿಯ ಯೋಜನೆಗಳನ್ನು ಘೋಷಣೆ ಮಾಡಿದ್ದ ಪರಿಣಾಮ ವೈಎಸ್‌ಅರ್‌ಸಿಪಿ ಕಾಂಗ್ರೆಸ್ 151, ಟಿಡಿಪಿ 23, ಜನಸೇನಾ 1 ಸ್ಥಾನವನ್ನು ಗೆದ್ದುಕೊಂಡಿತ್ತು.