ಚಿತ್ರದುರ್ಗ, ಜೂನ್ 18 : ಎ.ಪಿ.ಎಂ.ಸಿ. ಆವರಣದಲ್ಲಿರುವ ಹೂವಿನ ಮಾರುಕಟ್ಟೆಯಲ್ಲಿ ಅಳತೆಯಲ್ಲಿ ಮೋಸವಾಗುತ್ತಿರುವುದನ್ನು ವಿರೋಧಿಸಿ ಕರ್ನಾಟಕ ರಾಜ್ಯ ರೈತ ಸಂಘದವರು ಜಿಲ್ಲಾಧಿಕಾರಿ ಕಚೇರಿ ಎದುರು ಮಂಗಳವಾರ ಪ್ರತಿಭಟನೆ ನಡೆಸಿ ಸಿ.ಸಿ.ಕ್ಯಾಮರಾ ಅಳವಡಿಸುವಂತೆ ಅಪರ ಜಿಲ್ಲಾಧಿಕಾರಿಗೆ ಮನವಿ ಮಾಡಿದರು.
ಐವತ್ತಕ್ಕೂ ಹೆಚ್ಚು ಹಳ್ಳಿಗಳಲ್ಲಿ ರೈತರು ಹೂವು ಬೆಳೆಯುತ್ತಿದ್ದು, ಚಿತ್ರದುರ್ಗದಿಂದ ಬೇರೆ ಬೇರೆ ಜಿಲ್ಲೆಗಳಿಗೆ ಹಾಗೂ ಹೊರ ರಾಜ್ಯಗಳಾದ ಕೇರಳ, ಮಹಾರಾಷ್ಟ್ರಕ್ಕೂ ಹೂವು ಇಲ್ಲಿಂದ ಹೋಗುತ್ತದೆ. ಆರು ಅಡಿಗೆ ಒಂದು ಮಾರು ಹೂವಿನ ಅಳತೆ ಸೀಮಿತಗೊಳಿಸಿರುವುದನ್ನು ಈಗ ಹತ್ತು ಅಡಿಗೆ ಒಂದು ಮಾರು ಅಳತೆ ಮಾಡಲಾಗುತ್ತಿದೆ. ಇದರಿಂದ ಹೂವು ಬೆಳೆಯುವ ರೈತರಿಗೆ ನಷ್ಟವಾಗುತ್ತಿದೆ. ಅನೇಕ ಬಾರಿ ಎ.ಪಿ.ಎಂ.ಸಿ. ಕಾರ್ಯದರ್ಶಿ ಗಮನಕ್ಕೆ ತಂದಿದ್ದರೂ ಇದುವರೆವಿಗೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ರೈತರು ದೂರಿದರು.
ಮೊದಲೆ ರೈತರು ಬರಗಾಲದಿಂದ ತತ್ತರಿಸುತ್ತಿರುವ ಇಂದಿನ ಸಂದರ್ಭದಲ್ಲಿ ರಾಜ್ಯ ಸರ್ಕಾರ ಪೆಟ್ರೋಲ್-ಡೀಸೆಲ್ ಬೆಲೆಯನ್ನು ಏರಿಸಿದೆ. ಇದರಿಂದ ಪ್ರತಿ ವಸ್ತುಗಳ ಬೆಲೆ ತನ್ನಷ್ಟಕ್ಕೆ ತಾನೆ ಹೆಚ್ಚಳವಾಗುತ್ತದೆ. ಗೃಹಲಕ್ಷ್ಮಿ ಯೋಜನೆಯ ಹಣವನ್ನು ಸರ್ಕಾರ ರೈತರ ಖಾತೆಗಳಿಗೆ ಜಮ ಮಾಡುತ್ತಿದೆ. ಬ್ಯಾಂಕ್‍ನವರು ಸಾಲಕ್ಕೆ ಜಮ ಮಾಡಿಕೊಳ್ಳುತ್ತಿದ್ದಾರೆ.
ಬೆಳೆ ಪರಿಹಾರ, ಕಿಸಾನ್ ಸಮ್ಮಾನ್, ಉದ್ಯೋಗ ಖಾತರಿ ಹಾಗೂ ವದ್ದಾಪ್ಯ ವಿಧವಾ ವೇತನ ಹಣವನ್ನು ಹೇಗೆ ಸಾಲಕ್ಕೆ ಜಮ ಮಾಡಿಕೊಳ್ಳುವುದಿಲ್ಲವೋ ಅದೇ ರೀತಿ ಗೃಹಲಕ್ಷ್ಮಿ ಯೋಜನೆ ಹಣವನ್ನು ಸಾಲಕ್ಕೆ ಜಮ ಮಾಡಿಕೊಳ್ಳದಂತೆ ಬ್ಯಾಂಕ್‍ನವರಿಗೆ ಸೂಚನೆ ನೀಡುವಂತೆ ಪ್ರತಿಭಟನಾನಿರತ ರೈತರು ಅಪರ ಜಿಲ್ಲಾಧಿಕಾರಿಯವರಲ್ಲಿ ಒತ್ತಾಯಿಸಿದರು.
ಹೂವಿನ ಅಳತೆಯಲ್ಲಿ ರೈತರಿಗೆ ಆಗುತ್ತಿರುವ ಮೋಸವನ್ನು ನಿಯಂತ್ರಿಸಬೇಕಾದರೆ ಕೂಡಲೆ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ರೈತರ, ಅಂಗಡಿ ಮಾಲೀಕರ ಹಾಗೂ ಎ.ಪಿ.ಎಂ.ಸಿ. ಅಧಿಕಾರಿಗಳ ಸಭೆ ನಡೆಸುವಂತೆ ರೈತರು ವಿನಂತಿಸಿದರು.
ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯ ಉಪಾಧ್ಯಕ್ಷ ಕೆ.ಪಿ.ಭೂತಯ್ಯ, ಜಿಲ್ಲಾ ಉಪಾಧ್ಯಕ್ಷ ಚಿಕ್ಕಪ್ಪನಹಳ್ಳಿ ರುದ್ರಸ್ವಾಮಿ, ಕಾರ್ಯಾಧ್ಯಕ್ಷ ಕೆ.ಸಿ.ಹೊರಕೇರಪ್ಪ, ತಾಲ್ಲೂಕು ಅಧ್ಯಕ್ಷ ಧನಂಜಯ ಹಂಪಯ್ಯನಮಾಳಿಗೆ, ಕರಿಬಸಪ್ಪ, ಎಸ್.ಕೆ.ಕುಮಾರ್‍ಸ್ವಾಮಿ, ಜಿ.ಪಿ.ತಿಪ್ಪೇಸ್ವಾಮಿ, ಕೆ.ಎಂ.ಕಾಂತರಾಜು, ಎ.ತಿಪ್ಪೇಸ್ವಾಮಿ, ಮಲ್ಲಿಕಾರ್ಜುನಪ್ಪ, ಸುಧಾ ಡಿ.ಎಸ್.ಹಳ್ಳಿ ಇನ್ನು ಅನೇಕರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.