ದೆಹಲಿ ಜೂನ್ 18 : ಶ್ರೀನಗರದಲ್ಲಿ ಜೂನ್ 21ರಂದು ನಡೆಯಲಿರುವ 10ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಗವಹಿಸಲಿದ್ದಾರೆ. ಯೋಗ ದಿನವನ್ನು ಶ್ರೀನಗರದ ಶೇರ್-ಇ-ಕಾಶ್ಮೀರ್ ಇಂಟರ್‌ನ್ಯಾಶನಲ್ ಕನ್ವೆನ್ಷನ್ ಸೆಂಟರ್‌ನಲ್ಲಿ ಆಚರಿಸಲಾಗುವುದು. ಈ ವರ್ಷದ ಅಂತರಾಷ್ಟ್ರೀಯ ಯೋಗ ದಿನದ ಥೀಮ್ ವೈಯಕ್ತಿಕ ಮತ್ತು ಸಮಾಜಕ್ಕಾಗಿ ಯೋಗ.
ಯೋಗ ದಿನಾಚರಣೆ ಬಗ್ಗೆ ದೆಹಲಿಯಲ್ಲಿ ಇಂದು ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದ ಕೇಂದ್ರ ಆಯುಷ್ ಸಚಿವ ಪ್ರತಾಪ್ ರಾವ್ ಜಾಧವ್, ಈ ವರ್ಷದ ಥೀಮ್ ವೈಯಕ್ತಿಕ ಮತ್ತು ಸಾಮಾಜಿಕ ಯೋಗಕ್ಷೇಮವನ್ನು ಬೆಳೆಸುವಲ್ಲಿ ಯೋಗದ ಪಾತ್ರವನ್ನು ಎತ್ತಿ ತೋರಿಸುತ್ತದೆ. ಯೋಗವು ದೈಹಿಕ, ಮಾನಸಿಕ ಮತ್ತು ಆಧ್ಯಾತ್ಮಿಕ ಬೆಳವಣಿಗೆಯನ್ನು ಬೆಳೆಸುತ್ತದೆ. ಇದು ಸಾಮಾಜಿಕ ಸಾಮರಸ್ಯವನ್ನು ಉತ್ತೇಜಿಸುತ್ತದೆ. ಇತ್ತೀಚಿನ ವರ್ಷಗಳಲ್ಲಿ ಲಕ್ಷಾಂತರ ಜನರು ಉತ್ಸಾಹದಿಂದ ಭಾಗವಹಿಸುತ್ತಿರುವುದು ಸಮುದಾಯಗಳ ಮೇಲೆ ಯೋಗದ ತೀವ್ರ ಪ್ರಭಾವವನ್ನು ಪ್ರತಿಬಿಂಬಿಸುತ್ತದೆ ಎಂದು ಹೇಳಿದ್ದಾರೆ.
ಈ ಸಂದರ್ಭದಲ್ಲಿ ಜಾಧವ್ ಅವರು ಬ್ರೈಲ್ ಲಿಪಿಯಲ್ಲಿ ಸಾಮಾನ್ಯ ಯೋಗ ಪ್ರೋಟೋಕಾಲ್ ಪುಸ್ತಕವನ್ನು ಬಿಡುಗಡೆ ಮಾಡಿದರು. ಇದು ದೃಷ್ಟಿಹೀನರಿಗೆ ಯೋಗವನ್ನು ಕಲಿಯಲು ಮತ್ತು ಅಭ್ಯಾಸ ಮಾಡಲು ಅನುಕೂಲವಾಗುವಂತದ್ದು. ಯೋಗದ ಕುರಿತು ಪ್ರೊಫೆಸರ್ ಆಯುಷ್ಮಾನ್ ಅವರ ಕಾಮಿಕ್ ಅನ್ನು ಸಹ ಬಿಡುಗಡೆ ಮಾಡಿದ್ದಾರೆ. ಈ ಪುಸ್ತಕವು ಮಕ್ಕಳಿಗೆ ಆಸಕ್ತಿ ಮತ್ತು ಮನರಂಜನೆಯೊಂದಿಗೆ ಯೋಗವನ್ನು ಕಲಿಯಲು ಮತ್ತು ಅಭ್ಯಾಸ ಮಾಡಲು ಸಹಾಯ ಮಾಡುತ್ತದೆ.
ವಿಶೇಷ ಉಪಕ್ರಮವಾಗಿ, ಈ ವರ್ಷ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಅಂತರಾಷ್ಟ್ರೀಯ ಯೋಗ ದಿನವನ್ನು ಗುರುತಿಸಲು ‘ಯೋಗಾ ಫಾರ್ ಸ್ಪೇಸ್’ ಎಂಬ ವಿಶಿಷ್ಟ ಉಪಕ್ರಮವನ್ನು ಆಯೋಜಿಸುತ್ತಿದೆ. ಸಾಮಾನ್ಯ ಯೋಗ ಪ್ರೋಟೋಕಾಲ್ ಮಾರ್ಗಸೂಚಿಗಳ ಪ್ರಕಾರ ಇಸ್ರೋದ ಎಲ್ಲಾ ವಿಜ್ಞಾನಿಗಳು ಮತ್ತು ಅಧಿಕಾರಿಗಳು ಒಟ್ಟಾಗಿ ಯೋಗವನ್ನು ಮಾಡುತ್ತಾರೆ. ಗಗನ್ ಯಾನ್ ಯೋಜನೆಯ ತಂಡವು ಈ ಸಂದರ್ಭದಲ್ಲಿ ಯೋಗಾಭ್ಯಾಸ ಮಾಡುವ ಮೂಲಕ ಅಂತರಾಷ್ಟ್ರೀಯ ಯೋಗ ದಿನದ ಜಾಗತಿಕ ಅಭಿಯಾನಕ್ಕೆ ಸೇರಿಕೊಳ್ಳಲಿದೆ.
ಯೋಗ ಕ್ಷೇತ್ರದಲ್ಲಿ ತಂತ್ರಜ್ಞಾನ ಮತ್ತು ಸ್ಟಾರ್ಟ್‌ಅಪ್‌ಗಳನ್ನು ಉತ್ತೇಜಿಸಲು, ಆಯುಷ್ ಸಚಿವಾಲಯವು MyGov ಪೋರ್ಟಲ್ ಮತ್ತು MyBharat ಪೋರ್ಟಲ್‌ನಲ್ಲಿ ಯೋಗಟೆಕ್ ಚಾಲೆಂಜ್ ಅನ್ನು ಆಯೋಜಿಸಿದೆ. ಇದು ಯೋಗಕ್ಕೆ ಸಂಬಂಧಿಸಿದ ಉಪಕರಣಗಳು, ಸಾಫ್ಟ್‌ವೇರ್ ಮತ್ತು ಅಭಿವೃದ್ಧಿಪಡಿಸಿದ ಸ್ಟಾರ್ಟ್ ಅಪ್‌ಗಳು ಮತ್ತು ವ್ಯಕ್ತಿಗಳನ್ನು ಗುರುತಿಸುವ ಮತ್ತು ಉತ್ತೇಜಿಸುವ ಗುರಿಯನ್ನು ಹೊಂದಿದೆ.