ಚಿತ್ರದುರ್ಗ : ದೇಶದಲ್ಲಿಯೇ ಬರದ ಪರಿಸ್ಥಿತಿ ಎದುರಿಸುವ ಜಿಲ್ಲೆಗಳಲ್ಲಿ ಚಿತ್ರದುರ್ಗ ಎರಡನೇ ಸ್ಥಾನದಲ್ಲಿದೆ . ಈ ಜಿಲ್ಲೆಗಳಿಂದ ಪ್ರತಿ ವರ್ಷ ಐವತ್ತು ಸಾವಿರ ಮಂದಿ ಗುಳೇ ಹೋಗುತ್ತಿದ್ದಾರೆ. ಬೆಂಗಳೂರಿಗೆ ಚಿತ್ರದುರ್ಗ ಹತ್ತಿರದಲ್ಲಿದ್ದರೂ ಏಕೆ ಅಭಿವೃದ್ದಿಯಾಗಿಲ್ಲವೆಂಬುದು ತಿಳಿಯದಾಗಿದೆ ಎಂದರು.
ರಾಜ್ಯದಲ್ಲಿ 66 ಲಕ್ಷ ಹೆಕ್ಚೇರು ಪ್ರದೇಶದಲ್ಲಿ ನೀರಾವರಿ ಸೌಲಭ್ಯ ಕಲ್ಪಿಸುವ ಅವಕಾಶವಿದೆ ಎಂದು ಚಿತ್ರದುರ್ಗ ಲೋಕಸಭೆ ಕ್ಷೇತ್ರದ ನೂತನ ಸದಸ್ಯ ಗೋವಿಂದ ಕಾರಜೋಳ ಹೇಳಿದರು.
ಜಿಲ್ಲಾ ನೀರಾವರಿ ಅನುಷ್ಠಾನ ಹೋರಾಟ ಸಮಿತಿ ವತಿಯಿಂದ ಬುಧವಾರ ಸ್ಕೌಟ್ ಭವನದಲ್ಲಿ ಹಮ್ಮಿಕೊಳ್ಳಲಾದ ಗೌರವ ಸಮರ್ಪಣೆ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು ಇದರಲ್ಲಿ 40 ಲಕ್ಷ ಬೃಹತ್ ನೀರಾವರಿ, 10 ಲಕ್ಷ ಹೆಕ್ಟೇರು ಸಣ್ಣನೀರಾವರಿ ಹಾಗೂ 16 ಲಕ್ಷ ಹೆಕ್ಟೇರು ರೈತರಿಂದ ಸ್ವಂತ ಖರ್ಚಿನಲ್ಲಿ ಅಂದರೆ ಬೋರ್ ವೆಲ್ ಮೂಲಕ ನೀರಾವರಿ ಮಾಡಿಕೊಳ್ಳಬಹುದಾಗಿದೆ.
ಇದುವರೆಗೂ 30 ಲಕ್ಷ ಹೆಕ್ಟೇರು ಮಾತ್ರ ಬೃಹತ್ ನೀರಾವರಿಯಾಗಿದ್ದು ಇನ್ನೂ ಹತ್ತ ಲಕ್ಷ ಹೆಕ್ಟೇರು ಬಾಕಿ ಇದೆ. ಅದೇ ರೀತಿ ಸಣ್ಣ ನೀರಾವರಿಯ ಹತ್ತು ಲಕ್ಷ ಹೆಕ್ಚೇರ್ ನಲ್ಲಿ ಏಳು ಲಕ್ಷ ಮಾತ್ರ ಸಾಧ್ಯವಾಗಿದ್ದು ಇನ್ನೂ ಮೂರು ಲಕ್ಷ ಹೆಕ್ಚೇರು ಬಾಕಿ ಇದೆ ಎಂದರು.
ಬೃಹತ್ ಕೈಗಾರಿಕೆಗಳು ಬಂದರೆ ಒಂದಿಷ್ಟು ಲಾರಿಗಳು, ಲಾರೀ ಮಾಲೀಕರಿಗೆ ಅನುಕೂಲವಾಗುತ್ತದೆ. ಆದರೆ ನೀರಾವರಿ ಮಾತ್ರ ಎಲ್ಲ ವರ್ಗ, ಸಮುದಾಯದ ಬದುಕನ್ನು ಹಸನಾಗಿಸಬಲ್ಲದು. ಆಲಮಟ್ಟಿ ಜಲಾಶಯ ನಿರ್ಮಾಣಕ್ಕಾಗಿ ಬಾಗಲಕೋಟೆ ಜಿಲ್ಲೆ ಜನ ನಿರಂತರ 40 ವರ್ಷ ಹೋರಾಟ ಮಾಡಿ ಯಶ ಕಂಡಿದ್ದಾರೆ. ಆಲಮಟ್ಟಿ ಜಲಾಶಯದಿಂದ 22 ಲಕ್ಷ ಹೆಕ್ಟೇರು ಪ್ರದೇಶವ ನೀರಾವರಿಗೆ ಒಳಪಡಿಸಬಹುದಾಗಿದ್ದು ಏಷ್ಯಾದಲ್ಲಿಯೇ ಅತಿ ದೊಡ್ಡ ಯೋಜನೆಯಾಗಿದೆ. ಜಲಾಶಯ ನಿರ್ಮಾಣಕ್ಕಾಗಿ 1.32 ಲಕ್ಷ ಹೆಕ್ಚೇರು ಭೂಮಿ ಮುಳುಗಡೆಯಾಗಿದೆ ಎಂದರು.
ಬಾಗಲಕೋಟೆಯಿಂದ ನಿಜಲಿಂಗಪ್ಪ ಅವರನ್ನು ಅಲ್ಲಿನ ಮಂದಿ ಗೆಲ್ಲಿಸಿದಾಗ ಸುಮ್ಮನೆ ಬಿಡಲಿಲ್ಲ. ಆಲಮಟ್ಟಿ ಜಲಾಶಯಕ್ಕೆ ಗುದ್ದಲಿ ಪೂಜೆ ಹಾಕಿಸಿದರು. 1964 ಮೇ ತಿಂಗಳಲ್ಲಿ ನಡೆದ ಅಡಿಗಲ್ಲು ಸಮಾರಂಭಕ್ಕೆ ಲಾಲ್ ಬಹದ್ದೂರ್ ಶಾಸ್ತಿ, ಎಸ್.ನಿಜಲಿಂಗಪ್ಪ, ಇಂದಿರಾಗಾಂಧಿ ಬಂದಿದ್ದರು. ಚೀನಾ ಯುದ್ದದಿಂದಾಗಿ ದೇಶದಲ್ಲಿ ಬರ ಪರಿಸ್ಥಿತಿ ಇದ್ದರೂ ವಿಜಯಪುರದ ಮಂದಿ ಈ ಮೂವರನ್ನು ಬಂಗಾರದಿಂದ ತುಲಾಭಾರ ಮಾಡಿದ್ದರು.
ತುಲಾಭಾರ ಮಾಡುವಾಗ ಬಂಗಾರ ಸಾಲದು ಬಂದಾಗ ಕಾರ್ಯಕ್ರಮದಲ್ಲಿದ್ದ ಮಹಿಳೆಯರು ತಮ್ಮ ಮೈಮೇಲಿನ ಬಂಗಾರದ ಸರ ಹಾಕಿ ಸರಿದೂಗಿಸಿದ್ದರು. ನಮ್ಮ ಭಾಗಕ್ಕೆ ನೀರಾವರಿ ಆಗಬೇಕೆಂಬ ತುಡಿತ ಆ ಮಹಿಳೆಯರಲ್ಲಿ ಇತ್ತು. ಇಂದು ಸಾಕಾರಗೊಂಡಿದೆ ಎಂದರು.