ಆಂಧ್ರ ಪ್ರದೇಶ : ಜನಸೇವೆಯ ಮೂಲಕ ಜನಮೆಚ್ಚುಗೆಗೆ ಪಾತ್ರವಾಗಿರುವ ಟಾಲಿವುಡ್ ಸೂಪರ್ ಸ್ಟಾರ್ ಮಹೇಶ್ ಬಾಬು, ಇದೀಗ ಮತ್ತೆ ತಮ್ಮ ಜನಸೇವೆಯ ಮೂಲಕ ಅಭಿಮಾನಿಗಳ ಮನಸ್ಸು ಗೆದ್ದಿದ್ದಾರೆ. ಇತ್ತೀಚಿಗಷ್ಟೇ ಮಹೇಶ್ ಬಾಬು ಅವರು ಅನಾರೋಗ್ಯದಿಂದ ಹಾಸಿಗೆ ಹಿಡಿದ ತನ್ನ ಅಭಿಮಾನಿಯ ಕುಟುಂಬವನ್ನು ದತ್ತು ಪಡೆದು ಬೀದಿಗೆ ಬಿದ್ದಿದ್ದ ಕುಟುಂಬಕ್ಕೆ ಆರ್ಥಿಕವಾಗಿ ಆಧಾರವಾಗಿದ್ದಾರೆ.
ಆಂಧ್ರಪ್ರದೇಶದ ಕೃಷ್ಣಾ ಜಿಲ್ಲೆಯ ರಾಜೇಶ್ ಅವರು ಮಹೇಶ್ ಬಾಬು ಅವರ ಕಟ್ಟಾ ಅಭಿಮಾನಿ. ಆದರೆ, ಕೆಲ ದಿನಗಳಿಂದ ರಾಜೇಶ್ ತೀವ್ರ ಆರೋಗ್ಯ ಸಮಸ್ಯೆಯಿಂದ ಬಳಲಿ ಹಾಸಿಗೆ ಹಿಡಿದ್ದಿದ್ದರು. ಮನೆಯ ಆಧಾರ ಸ್ಥಂಭವಾಗಿದ್ದ ರಾಜೇಶ್ ಹಾಸಿಗೆ ಹಿಡಿದಿದ್ದರಿಂದ ಆತನ ಕುಟುಂಬ ಆರ್ಥಿಕ ಸಮಸ್ಯೆ ಅನುಭವಿಸಿದೆ.
ಈ ವಿಷಯ ಸಾಮಾಜಿಕ ಜಾಲತಾಣಗಳ ಮೂಲಕ ಮಹೇಶ್ ಬಾಬು ಅವರ ಗಮನಕ್ಕೆ ಬಂದಿದೆ. ಕೂಡಲೇ ಸ್ಪಂದಿಸಿದ ಅವರು ರಾಜೇಶ್ ಕುಟುಂಬದ ಬೆಂಬಲಕ್ಕೆ ನಿಂತಿದ್ದಾರೆ. ಅಭಿಮಾನಿಯ ಮೂವರು ಮಕ್ಕಳನ್ನು ದತ್ತು ಪಡೆದು ಅವರ ಶಿಕ್ಷಣದ ಸಂಪೂರ್ಣ ಜವಾಬ್ದಾರಿ ತೆಗೆದುಕೊಂಡಿದ್ದಾರೆ. ಸದ್ಯ ಈ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ರಾಜೇಶ್‌ಗೆ ಮೂವರು ಚಿಕ್ಕ ಮಕ್ಕಳಿದ್ದಾರೆ. ಮಹೇಶ್ ಅವರ ಮೇಲಿನ ಅಭಿಮಾನದಿಂದ ಈತ ತನ್ನ ಮಕ್ಕಳಿಗೆ ಅರ್ಜುನ್, ಅತಿಥಿ, ಆಗಡು ಎಂದು ಮಹೇಶ್ ಸಿನಿಮಾಗಳ ಹೆಸರಿಟ್ಟಿದ್ದರು. ತಂದೆ ಹಾಸಿಗೆ ಹಿಡಿದ ನಂತರ ಹಿರಿಯ ಮಗ ಅರ್ಜುನ್, ಸ್ಥಳೀಯ ಚಪ್ಪಲಿ ಅಂಗಡಿಯಲ್ಲಿ ಕೆಲಸ ಮಾಡಿ ಮನೆ ಖರ್ಚು ನಿಭಾಯಿಸುತ್ತಿದ್ದ. ಇದೀಗ ಈ ಕುಟುಂಬದ ಸಂಪೂರ್ಣ ಜವಾಬ್ದಾರಿಯನ್ನು ನಟ ಮಹೇಶ್ ಬಾಬು ಹೊತ್ತಿದ್ದಾರೆ.