ಪುಣೆ : ನೀರಿನ ಟ್ಯಾಂಕರ್ ವಾಹನದಲ್ಲಿ ಮಹಿಳೆಯ ಶವ ಪತ್ತೆಯಾದ ಘಟನೆ ಪುಣೆಯ ಫಸುರ್ಂಗಿ ಪ್ರದೇಶದಲ್ಲಿ ಗುರುವಾರ ಬೆಳಿಗ್ಗೆ 9:30 ರ ಸುಮಾರಿಗೆ ನಡೆದಿದೆ. ಮೃತರನ್ನು ಹಂಡೇವಾಡಿಯ ಜೆಎಸ್‌ಪಿಎಂ ಕಾಲೇಜು ಬಳಿಯ ದುಗಡ್ ಚಾಲ್‌ನ ನಿವಾಸಿ ಕೌಶಲ್ಯ ಮುಖೇಶ್ ಚವ್ಹಾಣ್ (25) ಎಂದು ಗುರುತಿಸಲಾಗಿದೆ.
ಈಕೆ ನಾಪತ್ತೆಯಾಗಿರುವ ಕುರಿತು ಕೊಂಡ್ಯಾ ಪೊಲೀಸ್ ಠಾಣೆಯಲ್ಲಿ ದೂರು ಸಹ ದಾಖಲಾಗಿತ್ತು. ನೀರಿನ ಟ್ಯಾಂಕರ್ ಪುರುಷೋತ್ತಮ ನರೇಂದ್ರ ಸಾಸನೆ ಎಂಬುವರಿಗೆ ಸೇರಿದೆ. ಇವರು
ನಗರದಲ್ಲಿ ನೀರು ಸರಬರಾಜು ವ್ಯಾಪಾರ ನಡೆಸುತ್ತಿದ್ದಾರೆ. ಬುಧವಾರದಂದು ನೀರು ವಿತರಿಸಿದ ಬಳಿಕ ಟ್ಯಾಂಕರ್ ಅನ್ನು ತನ್ನ ನಿವಾಸದ ಬಳಿ ನಿಲ್ಲಿಸಿದ್ದ. ಗುರುವಾರ ಬೆಳಗ್ಗೆ ಎಂದಿನಂತೆ ಟ್ಯಾಂಕರ್ ತುಂಬಿಕೊಂಡು ಮನೆ
ಮನೆಗೆ ನೀರು ತಲುಪಿಸಲು ಮುಂದಾದರು. ಆದರೆ, ಟ್ಯಾಂಕರ್ ನಿಂದ ನೀರು ಹೋಗದಿರುವುದನ್ನು ಗಮನಿಸಿದ ಅವರು, ಸೀರೆ ಅಂಟಿಕೊಂಡಿರುವುದು ಗಮನಿಸಿದ್ದಾರೆ. ಟ್ಯಾಂಕರ್ ಕ್ಯಾಪ್ ತೆರೆದಾಗ ಅದರೊಳಗೆ ಮಹಿಳೆಯ ಶವ ಪತ್ತೆಯಾಗಿದೆ.
ಪುರುಷೋತ್ತಮ್ ನರೇಂದ್ರ ಸಾಸನೆ ಕೂಡಲೇ ಪೊಲೀಸರಿಗೆ ಮಾಹಿತಿ ತಿಳಿಸಿದ್ದಾರೆ. ಹಡಪ್ಸರ್ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಸಾಸೂನ್ ಆಸ್ಪತ್ರೆಗೆ ಕಳುಹಿಸಿದ್ದಾರೆ. ಇದು ಕೊಲೆಯೇ ಅಥವಾ ಆತ್ಮಹತ್ಯೆಯೇ ಎಂಬ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.