ಯಾದಗಿರಿ : ಅರಣ್ಯಾಧಿಕಾರಿಯೊಬ್ಬರನ್ನು ಬರ್ಬರವಾಗಿ ಕೊಲೆಗೈದಿರುವ ಘಟನೆ ಯಾದಗಿರಿಯಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಇದೇ ತಿಂಗಳ ಜೂನ್ 5 ರಂದು ಯಾದಗಿರಿ ಜಿಲ್ಲೆ ಶಹಾಪೂರ ಪಟ್ಟಣದ ಮೋಟಗಿ ಬಾರ್ ಆಂಡ್ ರೆಸ್ಟೋರೆಂಟ್ ನಲ್ಲಿ ಕೊಲೆ ನಡೆದಿದೆ, ಆದ್ರೆ ತಡವಾಗಿ ಬೆಳಕಿಗೆ ಬಂದಿದೆ. ಮಹೇಶ್ ಕನಕಟ್ಟಿ ಬರ್ಬರ ಹತ್ಯೆಯಾದ ಶಹಾಪೂರ ಅರಣ್ಯಾಧಿಕಾರಿ ಆಗಿದ್ದಾರೆ.
ಕುಡಿದ ಅಮಲಿನಲ್ಲಿ ಹಂತಕರು ಕ್ಷುಲ್ಲಕ ಕಾರಣಕ್ಕೆ ಕೊಲೆಗೈದು ಈಗ ಪೊಲೀಸರ ಅತಿಥಿಯಾಗಿದ್ದಾರೆ. ರಾಜು, ರೇಖು ನಾಯ್ಕ್, ತಾರಾ ಸಿಂಗ್, ನರಸಿಂಗ್ ಹಾಗೂ ಪ್ರಕಾಶ ಬಂಧಿತ ಕೊಲೆ ಆರೋಪಿಗಳಾಗಿದ್ದಾರೆ.
ಜೂನ್ 5ರಂದು ಎಂದಿನಂತೆ ಮೋಟಗಿ ರೆಸ್ಟೋರೆಂಟ್‌ಗೆ ಮಹೇಶ್ ಕನಕಟ್ಟಿ ಊಟಕ್ಕೆ ತೆರಳಿದ್ದರು. ಈ ವೇಳೆ ಆರೋಪಿಗಳು ಕುಡಿದು ಚೀರಾಡುತ್ತಿದ್ದರು. ಅವರನ್ನ ತಡೆಯಲು ಹೋದಾಗ, ಮಹೇಶ್ ಹಾಗೂ ದುಷ್ಕರ್ಮಿಗಳ ನಡುವೆ ವಾಗ್ದಾದ ನಡೆದಿದೆ. ಕೊನೆಗೆ ಕುಡಿದ ಮತ್ತಿನಲ್ಲಿದ್ದ ಹಂತಕರು ಬಡಿಗೆಯಿಂದ ಹೊಡೆದು, ಕಾಲಿನಿಂದ ಜಾಡಿಸಿ ಒದ್ದು ಅಧಿಕಾರಿಯನ್ನ ಕೊಂದೇಬಿಟ್ಟು, ಎಸ್ಕೇಪ್ ಆಗಿದ್ದಾರೆ.
ಮರುದಿನ ರೆಸ್ಟೋರೆಂಟ್ ಬಳಿ ಬಿಸಾಡಿದ್ದ ಮಹೇಶ್ ಅವರ ಮೃತದೇಹವನ್ನು ಪೊಲೀಸರು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದರು. ಈ ನಡುವೆ ಮೃತ ಮಹೇಶ್ ಪತ್ನಿ ಕೊಲೆ ಆರೋಪ ಮಾಡಿದ್ದರು. ಇದರಿಂದ ಅನುಮಾನಗೊಂಡ ಪೊಲೀಸರು ರೆಸ್ಟೋರೆಂಟ್‌ನ ಸಿಸಿಟಿವಿ ಪರಿಶೀಲನೆ ನಡೆಸಿದಾಗ ಕೊಲೆ ಮಾಡಿರುವುದು ಗೊತ್ತಾಗಿದೆ. ಸದ್ಯ ಐವರು ಆರೋಪಿಗಳ ಹೆಡೆಮುರಿ ಕಟ್ಟಿರುವ ಪೊಲೀಸರು, ಹಂತಕರ ವಿರುದ್ಧ ಶಹಾಪೂರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.