ಬೆಂಗಳೂರಿನ ವಾಸವಿ ಕಾಂಡಿಮೆಂಟ್ಸ್‌ನ ಮಾಲಕಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಬೆಂಗಳೂರಿನ ಸಜ್ಜನ್ ರಾವ್ ಸರ್ಕಲ್ ಬಳಿ ಇರುವ ಶ್ರೀ ವಾಸವಿ ಕಾಂಡಿಮೆಂಟ್ಸ್ ನ ಮಾಲಕಿ ಗೀತಾ ನಿದ್ರೆ ಮಾತ್ರೆ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ.
10 ವರ್ಷ ಬಾಡಿಗೆ ಕಟ್ಟದ ಹಿನ್ನೆಲೆಯಲ್ಲಿ ಗೀತಾ ವಿರುದ್ಧ ಅಂಗಡಿ ಮಾಲೀಕರು ಕೋರ್ಟ್ ಮೆಟ್ಟಿಲೇರಿದ್ದರು. ವಾಸವಿ ಕಾಂಡಿಮೆಂಟ್ಸ್‌ನ ಮಾಲಕಿ ಗೀತಾ ಬರೋಬ್ಬರಿ ಒಂದು ಕೋಟಿ 70 ಲಕ್ಷ ರೂ. ಬಾಡಿಗೆ ಹಣ ಬಾಕಿ ಉಳಿಸಿಕೊಂಡಿದ್ದರು. ಕೇವಲ 40 ಲಕ್ಷ ಮಾತ್ರ ಬಾಡಿಗೆ ನೀಡಿದ್ದರಂತೆ.
ಹೀಗಾಗಿ ಇಂದು ಕೋರ್ಟ್ ಅನುಮತಿ ಪಡೆದು ಪೊಲೀಸರು ಅಂಗಡಿಗೆ ಬೀಗ ಹಾಕಿದ್ದರು. ಈ ವೇಳೆ ವಾಸವಿ ಕಾಂಡಿಮೆಂಟ್ಸ್ ಮಾಲಕಿ ಗೀತಾ ಕುಸಿದು ಬಿದ್ದಿದ್ದಾರೆ. ಆಕೆಯನ್ನು ಆಸ್ಪತ್ರೆಗೆ ಕರೆದೊಯ್ಯುವ ವೇಳೆ ನಿದ್ರೆ ಮಾತ್ರೆ ತೆಗೆದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದರು ಎನ್ನಲಾಗಿದೆ.
ಸದ್ಯ ಗೀತಾ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರೇಕಾಯಿ ತಿನಿಸುಗಳಿಗೆ ಹಾಗೂ ಅವರೇಕಾಯಿ ಮೇಳಕ್ಕೆ ವಾಸವಿ ಕಾಂಡಿಮೆಂಟ್ಸ್ ಪ್ರಸಿದ್ದಿಯಾಗಿತ್ತು. ಆದರೆ ಬಾಡಿಗೆ ಕಟ್ಟದ ಹಿನ್ನೆಲೆ ಪೊಲೀಸರು ಅಂಗಡಿಗೆ ಬೀಗ ಹಾಕಿದ್ದಾರೆ.