Breaking
Mon. Dec 23rd, 2024

ಚಿಕನ್‌ ಕಬಾಬ್‌, ಫಿಶ್‌ ಕಬಾಬ್‌ ಹಾಗೂ ಇತರೆ ಖಾದ್ಯಗಳ ತಯಾರಿಕೆಗೆ ಕೃತಕ ಬಣ್ಣ ಬಳಸುವುದಕ್ಕೆ ಸರ್ಕಾರ ನಿಷೇಧ…..!

ಗೋಬಿ ಮಂಚೂರಿ , ಕಾಟನ್‌ ಕ್ಯಾಂಡಿ  ಆಯ್ತು. ಈಗ ಕಬಾಬ್‌ ಪ್ರಿಯರಿಗೆ ರಾಜ್ಯ ಸರ್ಕಾರ ಶಾಕ್‌ ಕೊಟ್ಟಿದೆ. ಕ್ಯಾನ್ಸರ್‌ ಕಾರಕ ಅಂಶ ಇರುವ ಕಾರಣ ಗೋಬಿ ಮತ್ತು ಕ್ಯಾಂಡಿ ಕಾಟನ್‌ಗೆ ಕೃತಕ ಬಣ್ಣ ಬಳಕೆಗೆ ನಿಷೇಧ ಹೇರಿತ್ತು. ಅದರ ಬೆನ್ನಲ್ಲೇ ಚಿಕನ್‌ ಕಬಾಬ್‌, ಫಿಶ್‌ ಕಬಾಬ್‌ ಹಾಗೂ ಇತರೆ ಖಾದ್ಯಗಳ ತಯಾರಿಕೆಗೆ ಕೃತಕ ಬಣ್ಣ ಬಳಸುವುದಕ್ಕೆ ಸರ್ಕಾರ ನಿಷೇಧ ವಿಧಿಸಿ ಆದೇಶ ಹೊರಡಿಸಿದೆ.

ಕಣ್ಣಿಗೆ ಆಕರ್ಷಣೆ, ನಾಲಿಗೆಗೆ ರುಚಿ ಸಿಕ್ಕರೆ ಮನುಷ್ಯ ತನ್ನ ಮೇಲಿನ ನಿಯಂತ್ರಣವನ್ನೇ ಕಳೆದುಕೊಳ್ಳುತ್ತಾನೆ. ತಿನಿಸುಗಳು ಮೊದಲು ಕಣ್ಣಿಗೆ ಆಕರ್ಷಣೀಯವಾಗಿ ಕಾಣುತ್ತವೆ. ಆಮೇಲೆ ರುಚಿ ಆಸ್ವಾಧಿಸಲು ಸೆಳೆಯುತ್ತವೆ. ರುಚಿಕರ ತಿನಿಸನ್ನು ನಾಲಿಗೆಗೆ ಇಟ್ಟರೆ ಸಾಕು, ಆಹಾ.. ಇನ್ನೂ ಬೇಕು ಎನಿಸುತ್ತದೆ.

ಆದರೆ ಆರೋಗ್ಯಕ್ಕೆ? ರುಚಿಯ ಮುಂದೆ ಕೆಲವೊಮ್ಮೆ ಆರೋಗ್ಯ ಕಾಳಜಿಯೂ ಗೌಣವಾಗಿಬಿಡುತ್ತದೆ. ಈ ಬಗ್ಗೆ ಎಷ್ಟೇ ಜಾಗೃತಿ ಮೂಡಿಸಿದರೂ ಬಹುಪಾಲು ಮಂದಿ ಡೋಂಟ್ ಕೇರ್ ಎನ್ನುತ್ತಾರೆ. ಆದರೆ ಸರ್ಕಾರ ಬಿಡಬೇಕಲ್ಲ, ತನ್ನ ಸಮಾಜದ ಪ್ರತಿಯೊಬ್ಬ ನಾಗರಿಕರ ಹಿತಕ್ಕಾಗಿ ಕೆಲವೊಂದು ಕಟ್ಟುನಿಟ್ಟಿನ ನಿಯಮಗಳನ್ನು ಜಾರಿಗೊಳಿಸುತ್ತದೆ. ಈಗಲೂ ಅಂತಹದ್ದೊಂದು ಘೋಷಣೆಯಾಗಿದೆ. 

ಚಿಕನ್ , ಫಿಶ್ ಕಬಾಬ್‌  ಹಾಗೂ ಇತರೆ ಖಾದ್ಯಗಳ ತಯಾರಿಕೆಗೆ ಕೃತಕ ಬಣ್ಣಗಳನ್ನು ಬಳಸುವುದಕ್ಕೆ ಕರ್ನಾಟಕ ಸರ್ಕಾರ ಸಂಪೂರ್ಣ ನಿಷೇಧ ವಿಧಿಸಿದೆ. ಚಿಕನ್ ಮತ್ತು ಫಿಶ್ ಕಬಾಬ್ ತಯಾರಿಕೆಯಲ್ಲಿ ಬಳಸುವ ಕೃತಕ ಬಣ್ಣಗಳ ಮಾದರಿಗಳನ್ನು ತಪಾಸಣೆಗೆ ಒಳಪಡಿಸಿದಾಗ ಕಳಪೆ ಗುಣಮಟ್ಟದ್ದು ಎಂದು ತಿಳಿದುಬಂದಿದೆ.

ಕೃತಕ ಬಣ್ಣಗಳನ್ನು ಬಳಸಿದ ಖಾದ್ಯಗಳ ಸೇವನೆಯಿಂದಾಗುವ ದುಷ್ಪರಿಣಾಮಗಳ ಬಗ್ಗೆ ಆಹಾರ ಸುರಕ್ಷತಾ ಇಲಾಖೆ ಆಯುಕ್ತರು ತನಿಖೆ ನಡೆಸಿ ಕ್ರಮಕೈಗೊಳ್ಳಲಿದ್ದಾರೆ ಎಂದು ರಾಜ್ಯ ಸರ್ಕಾರ ಹೇಳಿದೆ. ರಾಜ್ಯಾದ್ಯಂತ ಕಬಾಬ್ ಮತ್ತು ತಿನಿಸುಗಳಲ್ಲಿ ಕೃತಕ ಬಣ್ಣಗಳನ್ನು ಬಳಸುತ್ತಿರುವ ಕುರಿತು ರಾಜ್ಯದ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆಗೆ ಅನೇಕ ದೂರುಗಳು ಬಂದ ಹಿನ್ನೆಲೆಯಲ್ಲಿ ಈ ಕ್ರಮಕೈಗೊಳ್ಳಲಾಗಿದೆ. 

ಆಹಾರ ಸುರಕ್ಷತಾ ಮತ್ತು ಗುಣಮಟ್ಟ ಇಲಾಖೆಯು ಪ್ರಯೋಗಾಲಯಗಳಲ್ಲಿ 39 ಕಬಾಬ್‌ಗಳ ಮಾದರಿಗಳನ್ನು ಪರೀಕ್ಷೆಗೆ ಒಳಪಡಿಸಿತು. ಅವುಗಳ ಪೈಕಿ ಎಂಟರಲ್ಲಿ ಕೃತಕ ಬಣ್ಣವನ್ನು ಬಳಸಿರುವುದರಿಂದ ಸೇವನೆಗೆ ಅಸುರಕ್ಷಿತವಾಗಿದೆ ಎಂದು ತಿಳಿದುಬಂತು. ಇವುಗಳಲ್ಲಿ ಏಳು ಮಾದರಿಗಳಲ್ಲಿ ‘ಸೂರ್ಯಾಸ್ತ ಹಳದಿ’ (ಸೂರ್ಯ ಮುಳುಗುವ ಸಂದರ್ಭದಲ್ಲಿ ಕಂಡುಬರುವ ಬಣ್ಣ) ಹಾಗೂ ಒಂದರಲ್ಲಿ ‘ಸೂರ್ಯಾಸ್ತ ಹಳದಿ’ ಮತ್ತು ಕಾರ್ಮೋಸಿಸ್’ ಕಂಡುಬಂದಿದೆ. 

ಕಳೆದ 50 ವರ್ಷಗಳಲ್ಲಿ ಕೃತಕ ಬಣ್ಣಗಳನ್ನು ಒಳಗೊಂಡಿರುವ ಆಹಾರಗಳ ಸೇವನೆಯು 500% ಹೆಚ್ಚಾಗಿದೆ. ಇಂತಹ ಪದಾರ್ಥ ಸೇವನೆಯಲ್ಲಿ ಮಕ್ಕಳ ಪಾಲು ಹೆಚ್ಚಿದೆ ಅಧ್ಯಯನಗಳು ಹೇಳುತ್ತವೆ. ತಜ್ಞರ ಪ್ರಕಾರ, ಆಹಾರದ ಬಣ್ಣಗಳು ಅನೇಕ ಗಂಭೀರ ಮತ್ತು ಅಪಾಯಕಾರಿ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುತ್ತವೆ. ಇದರಲ್ಲಿ ಹೃದ್ರೋಗಗಳು, ಮೆಟಾಬಾಲಿಕ್ ಸಿಂಡ್ರೋಮ್, ಜನನ ದೋಷಗಳು, ನರಕೋಶಗಳಿಗೆ ಹಾನಿ, ಮೂತ್ರಪಿಂಡ ಮತ್ತು ಕ್ಯಾನ್ಸರ್‌ನಂತಹ ಸಮಸ್ಯೆಗಳಿಗೆ ಕಾರಣವಾಗಬಹುದು ಎಂದು ಹೇಳುತ್ತಾರೆ. 

ಅಲರ್ಜಿ ಸಮಸ್ಯೆ: ಕೆಲವರಿಗೆ ಕೃತಕ ಬಣ್ಣ ಬಳಕೆಯ ಆಹಾರ ಪದಾರ್ಥ ಸೇವಿಸಿದ ಬಳಿಕ ಅಸ್ತಮಾ, ಸೀನುವಿಕೆ, ಕಣ್ಣಿನಲ್ಲಿ ನೀರೂರುವುದು, ಚರ್ಮದ ಕಿರಿಕಿಯಂತಹ ಅಲರ್ಜಿ ಸಮಸ್ಯೆಯನ್ನು ಅನುಭವಿಸುತ್ತಾರೆ. ಇಂತಹವರು ಆರೋಗ್ಯಕರ ಆಹಾರ ಸೇವನೆ ಅಭ್ಯಾಸ ರೂಢಿಸಿಕೊಳ್ಳಬೇಕು. ಜೊತೆಗೆ ಸೂಕ್ತ ಚಿಕಿತ್ಸೆ ಪಡೆದುಕೊಳ್ಳಬೇಕು. ಇಲ್ಲದೇ ಹೋದರೆ, ಕೋಮಾ ಸ್ಥಿತಿಗೆ ಹೋಗಬಹುದು. ಪರಿಸ್ಥಿತಿ ಗಂಭೀರವಾದಲ್ಲಿ ಸಾವು ಕೂಡ ಸಂಭವಿಸಬಹುದು ಎಂದು ವೈದ್ಯರು ಎಚ್ಚರಿಸಿದ್ದಾರೆ.


ಕೃತಕ ಆಹಾರ ಬಣ್ಣಗಳು ಮಕ್ಕಳಲ್ಲಿ ಹೈಪರ್‌ಆಕ್ಟೀವ್‌, ನಿದ್ರಾಹೀನತೆ, ಕಿರಿಕಿರಿ, ಖಿನ್ನತೆ ಮತ್ತು ಕೋಪಗೊಳ್ಳುವಿಕೆಯಂತಹ ನಡವಳಿಕೆಯ ಬದಲಾವಣೆಗಳಿಗೆ ಕಾರಣವಾಗುತ್ತವೆ ಎಂದು ಅಧ್ಯಯನ ತಿಳಿಸಿದೆ.

ಜೀರ್ಣಕ್ರಿಯೆ ಸಮಸ್ಯೆ : ಕೃತಕ ಆಹಾರ ಬಣ್ಣಗಳಿಂದ ಜೀರ್ಣಕ್ರಿಯೆ ಸಮಸ್ಯೆಗೆ ಕಾರಣವಾಗುತ್ತದೆ. ಇದರಿಂದ ತೀವ್ರವಾದ ಅತಿಸಾರ, ಎದೆಯುರಿ ಮತ್ತು ಮಲಬದ್ಧತೆಗೆ ಕಾರಣವಾಗುತ್ತದೆ.

ಕ್ಯಾನ್ಸರ್‌: ರೆಡ್‌ 40, ಯೆಲ್ಲೋ 5 ಮತ್ತು ಯೆಲ್ಲೋ 6 (ಕೃತಕ ಆಹಾರ ಬಣ್ಣಗಳು) ಇವು ಕ್ಯಾನ್ಸರ್ ಕಾರಕ ವಸ್ತುಗಳು ಎಂದು ಅಧ್ಯಯನಗಳು ಹೇಳುತ್ತದೆ. ಇವುಗಳಲ್ಲಿ ಮಾಲಿನ್ಯಕಾರಕ ಅಂಶಗಳಿರುತ್ತವೆ. ಬೆಂಜಿಡಿನ್, 4-ಅಮಿನೊಬಿಫೆನಿಲ್ ಮತ್ತು 4-ಅಮಿನೊಅಜೋಬೆನ್ಜೆನ್ ಆಹಾರದ ಬಣ್ಣಗಳಲ್ಲಿ ಕಂಡುಬರುವ ಕಾರ್ಸಿನೋಜೆನ್‌ಗಳಾಗಿವೆ.

ಆಹಾರದಲ್ಲಿ ಬಳಸುವ ಕೃತಕ ಬಣ್ಣಗಳು ಯಾವುವು?

ರೆಡ್‌ 3: ಇದನ್ನು ಎರಿಥ್ರೋಸಿನ್ ಎಂದೂ ಕರೆಯುತ್ತಾರೆ. ಈ ಚೆರ್ರಿ-ಕೆಂಪು ಬಣ್ಣವನ್ನು ಸಾಮಾನ್ಯವಾಗಿ ಕ್ಯಾಂಡಿ, ಪಾಪ್ಸಿಕಲ್ಸ್ ಮತ್ತು ಕೇಕ್-ಅಲಂಕರಣ ಜೆಲ್‌ಗಳಲ್ಲಿ ಬಳಸಲಾಗುತ್ತದೆ.

ರೆಡ್‌ 40: ಅಲ್ಲೂರ ಕೆಂಪು ಬಣ್ಣವು ಗಾಢವಾಗಿರುತ್ತದೆ. ಇದನ್ನು ಕ್ರೀಡಾ ಪಾನೀಯಗಳು, ಕ್ಯಾಂಡಿ, ಕಾಂಡಿಮೆಂಟ್ಸ್ ಮತ್ತು ಸಿರಿಧಾನ್ಯಗಳಲ್ಲಿ ಬಳಸಲಾಗುತ್ತದೆ. 

ಕರ್ನಾಟಕ ಬಿಟ್ಟರೆ ಬೇರೆ ರಾಜ್ಯಗಳಲ್ಲಿ ಆಹಾರ ಪದಾರ್ಥಕ್ಕೆ ಕೃತಕ ಬಣ್ಣಗಳ ಬಳಕೆಗೆ ನಿಷೇಧ ಹೇರಿಲ್ಲ. 2024 ರ ಮಾರ್ಚ್‌ ತಿಂಗಳಲ್ಲಿ ಗೋಬಿ ಮಂಚೂರಿ ಮತ್ತು ಕಾಟನ್‌ ಕ್ಯಾಂಡಿ ತಯಾರಿಕೆಗೆ ಕೃತಕ ಬಣ್ಣ ಬಳಸುವುದನ್ನು ನಿಷೇಧಿಸಿ ಕರ್ನಾಟಕ ಸರ್ಕಾರ ಆದೇಶ ಹೊರಡಿಸಿತ್ತು. ಮತ್ತೆ ಈಗ ಚಿಕನ್‌, ಫಿಶ್‌ ಮತ್ತು ಇತರೆ ಖಾದ್ಯಗಳಲ್ಲಿ ಕೃತಕ ಬಣ್ಣ ಬಳಕೆಗೆ ನಿಷೇಧ ಹೇರಿದೆ. ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯಿದೆ 2006 ಹಾಗೂ ಆಹಾರ ಸುರಕ್ಷತೆ ಮತ್ತು ಗುಣಮಟ್ಟಗಳು (ಆಹಾರ ಉತ್ಪನ್ನಗಳು, ಗುಣಮಟ್ಟಗಳು ಮತ್ತು ಆಹಾರ ಸೇರ್ಪಡೆಗಳು) ನಿಯಮಗಳು 2011 ರ ಅನ್ವಯ ನಿಷೇಧ ವಿಧಿಸಿದೆ. ಗ್ರಾಹಕರಲ್ಲಿ ಗಂಭೀರವಾದ ಆರೋಗ್ಯ ಅಪಾಯಗಳನ್ನು ಉಂಟುಮಾಡುತ್ತವೆ ಎಂಬುದನ್ನು ಈ ನಿಯಮಗಳು ಒತ್ತಿ ಹೇಳುತ್ತವೆ.

Related Post

Leave a Reply

Your email address will not be published. Required fields are marked *