ಬಾಗಲಕೋಟೆ, ಜುಲೈ 01 : ಈಗ ಎಲ್ಲ ಕಡೆ ಡೆಂಘಿ ಹಾವಳಿ ಜೋರಾಗಿದೆ. ಡೆಂಘಿ ನಿಯಂತ್ರಣಕ್ಕಾಗಿ ಆರೋಗ್ಯ ಇಲಾಖೆ ಅಧಿಕಾರಿಗಳು ಸತತ ಪ್ರಯತ್ನ ಮಾಡುತ್ತಿದ್ದಾರೆ. ಈ ಮಧ್ಯೆ ಬಾಗಲಕೋಟೆ ಜಿಲ್ಲೆಯಲ್ಲಿ ವೈರಲ್ ಫೀವರ್ ಕಾಟ ಶುರುವಾಗಿದೆ. ಆಸ್ಪತ್ರೆಗಳಲ್ಲಿ ಪುಟಾಣಿ ಮಕ್ಕಳ ರೋಧನ ಹೆಚ್ಚಾಗಿದೆ. ಕೆಮ್ಮು, ನೆಗಡಿ, ಕಫ, ಉಸಿರಾಟದ ತೊಂದರೆಯಿಂದ ಮಕ್ಕಳು ಬಳಲುತ್ತಿದ್ದಾರೆ.
ಪೋಷಕರು ಈಗ ಮಕ್ಕಳ ಬಗ್ಗೆ ಬಹಳ ಜಾಗೃತಿ ವಹಿಸಬೇಕು. ಚಳಿಗಾಳಿ, ಬಿಸಿಲಿಗೆ ಮಕ್ಕಳು ಓಡಾಡದಂತೆ ತಡೆಯಬೇಕು. ಮಕ್ಕಳಿಗೆ ಚಳಿಯಾಗದಂತೆ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕಾಗಿದೆ. ಮುಂಜಾಗ್ರತಾ ಕ್ರಮ ಕೈಗೊಂಡದೆ ಮಾತ್ರ ವೈರಲ್ ಫೀವರ್ ತಡೆಯಲು ಸಾಧ್ಯವಾಗುತ್ತೆ ಎಂದು ಜಿಲ್ಲಾಸ್ಪತ್ರೆ ಸರ್ಜನ್ ಡಾ. ಪ್ರಕಾಶ್ ಬಿರಾದಾರ ಹೇಳಿದರು.
ಬಾಗಲಕೋಟೆ ಜಿಲ್ಲೆಯಲ್ಲಿ ವೈರಲ್ ಫೀವರ್ನಿಂದ ಮಕ್ಕಳ ಆಸ್ಪತ್ರೆಗಳು ಭರ್ತಿಯಾಗುತ್ತಿವೆ. ಒಪಿಡಿಯಲ್ಲಿ ಪ್ರತಿದಿನ 200ಕ್ಕೂ ಹೆಚ್ಚು ಮಕ್ಕಳಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಗಂಭೀರ ಪರಿಸ್ಥಿತಿಯ ಮಕ್ಕಳಿಗೆ ಐಸಿಯು ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಈಗ ಶಾಲೆಗಳು ಆರಂಭವಾಗಿದ್ದು, ವೈರಲ್ ಫೀವರ್ ಒಬ್ಬರಿಂದ ಒಬ್ಬರಿಗೆ ಹರಡುವ ಸಾಧ್ಯತೆ ಹೆಚ್ಚಾಗಿದೆ.
ವೈರಲ್ ಫಿವರ್ನಿಂದ ಮಕ್ಕಳನ್ನು ಶಾಲೆಗೆ ಕಳಿಸಲು ಭಯ ಪಡುವಂತಾಗಿದೆ. ಶಾಲೆಗೆ ಕಳಿಸಿದರೆ ಮಕ್ಕಳಿಗೆ ವೈರಲ್ ಫೀವರ್ ಬರಬಹುದು ಎಂಬ ಆತಂಕ ಕಾಡುತ್ತಿದೆ. ಇದಕ್ಕೆ ಮಕ್ಕಳು ಮನೆಯಲ್ಲಿ ಇರುವುದೆ ಒಳ್ಳೆಯದು ಅಂತ ಅನ್ನಿಸುತ್ತಿದೆ. ಮಕ್ಕಳನ್ನು ಹೊರಗಡೆ ಬಿಡದೆ ಆದಷ್ಟು ಸುರಕ್ಷತಾ ಕ್ರಮ ತೆಗೆದುಕೊಳ್ಳಲಾಗಿದೆ. ಪ್ರತಿಕ್ಷಣ ಮಕ್ಕಳದ್ದೇ ಚಿಂತೆಯಾಗಿದೆ. ಜೊತೆಗೆ ವೃದ್ದರಿಗೂ ವೈರಲ್ ಫೀವರ್ ಕಾಡುತ್ತಿದೆ ಎಂದು ಪೋಷಕಿ ದೀಪಾ ಹೇಳಿದರು.
ಒಟ್ಟಿನಲ್ಲಿ ಜಿಲ್ಲೆಯಲ್ಲಿ ವೈರಲ್ ಫೀವರ್ ಮಕ್ಕಳು ಹಾಗೂ ವೃದ್ದರಿಗೆ ಸಂಕಷ್ಟ ತಂದಿದೆ. ಮುಂಜಾಗ್ರತೆ ಬಹಳ ಮುಖ್ಯವಾಗಿದ್ದು, ಜನರು ಮಕ್ಕಳು ಮತ್ತು ವೃದ್ದರ ಬಗ್ಗೆ ವಿಶೇಷ ಗಮನ ಹರಿಸಬೇಕಾಗಿದೆ.