ಬೆಂಗಳೂರು : ಒಳ್ಳೆ ಬುದ್ದಿ ಕಲಿತು, ಚೆನ್ನಾಗಿ ಓದಿ ಅಪ್ಪ ಅಮ್ಮನಿಗೆ ಒಳ್ಳೆ ಹೆಸರು ತನ್ನಿ. ಇನ್ಮೇಲೆ ಯಾವುದೇ ಕೆಟ್ಟ ಕೆಲಸ ಮಾಡದೇ, ಒಳ್ಳೆ ಪ್ರಜೆಯಾಗಿ ಬಾಳಿ. ಇದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಚಿವರಾದ ಲಕ್ಷ್ಮೀ ಹೆಬ್ಬಾಳಕರ್ ಅವರು ಸರ್ಕಾರಿ ವೀಕ್ಷಣಾಲಯಕ್ಕೆ ಭೇಟಿ ನೀಡಿದ ವೇಳೆ ಮಕ್ಕಳಿಗೆ ಹೇಳಿದ ಬುದ್ದಿ ಮಾತು.
ಮಡಿವಾಳದ ಸ್ತ್ರೀ ಭವನದ ಆವರಣದಲ್ಲಿರುವ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸರ್ಕಾರಿ ವೀಕ್ಷಣಾಲಯಕ್ಕೆ ದಿಢೀರ್ ಭೇಟಿ ನೀಡಿದ ಸಚಿವರು, ಕಾನೂನು ಸಂಘರ್ಷಕ್ಕೆ ಒಳಗಾದ ಮಕ್ಕಳನ್ನು ಭೇಟಿಯಾದರು. ಸನ್ನಡತೆ ಬೆಳೆಸಿಕೊಂಡು, ಉತ್ತಮ ಪ್ರಜೆಯಾಗಿ ಬಾಳಿ ಎಂದು ಮಾರ್ಗದರ್ಶನ ನೀಡಿದರು. ಕರೆ ಸ್ವೀಕರಿಸಿದ ಸಚಿವರು ಇದಕ್ಕೂ ಮುನ್ನ ಸ್ತ್ರೀ ಶಕ್ತಿ ಭವನದ ಆವರಣದಲ್ಲಿರುವ ಮಹಿಳಾ ಮತ್ತು ಮಕ್ಕಳ ಸಹಾಯವಾಣಿ ಕೇಂದ್ರಕ್ಕೆ ಭೇಟಿ ನೀಡಿದರು.
ಈ ವೇಳೆ ಕೇಂದ್ರದ ಸಿಬ್ಬಂದಿ ಜೊತೆಗೆ ಸಹಾಯವಾಣಿಯ ಕಾರ್ಯ ನಿರ್ವಹಣೆ ಕುರಿತಂತೆ ಮಾಹಿತಿ ಸಂಗ್ರಹಿಸಿದರು. ಜೊತೆಗೆ ಕರೆಯೊಂದನ್ನು ಸ್ವೀಕರಿಸಿ, ಸಮಸ್ಯೆಯನ್ನು ಅಲಿಸಿದರು. ರಾತ್ರಿ ವೇಳೆ ಕೇಂದ್ರಕ್ಕೆ ಮತ್ತೊಮ್ಮೆ ಭೇಟಿ ನೀಡುವುದಾಗಿ ಹೇಳಿದರು. ಈ ವೇಳೆ ಸಚಿವರ ವಿಶೇಷ ಕರ್ತವ್ಯಾಧಿಕಾರಿ ಬಿ.ಎಚ್.ನಿಶ್ಚಲ್ ಉಪಸ್ಥಿತರಿದ್ದರು